ಉಡುಪಿ: ರಾಜ್ಯದ ನಾನಾ ಕಡೆಗಳಲ್ಲಿ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಖಾತೆ ತೆರೆದು ವಂಚನೆ ಮಾಡುವ ಜಾಲ ವ್ಯವಸ್ಥಿತವಾಗಿರುವಂತೆಯೇ ಉಡುಪಿಯಲ್ಲಿಯೂ ಅಂತಹದ್ದೊಂದು ಸೈಬರ್ ಕ್ರೈಂ ನಡೆದಿದೆ. ಆದರೆ ಉಡುಪಿ ಪೊಲೀಸರು ನಕಲಿ ಖಾತೆ ತೆರೆದ ಅರ್ಧ ತಾಸಿನಲ್ಲೇ ಅದನ್ನು ಪತ್ತೆಹಚ್ಚಿದ್ದಾರೆ.
ಉಡುಪಿಯ ಕರಾವಳಿ ಕಾವಲು ಪೊಲೀಸ್ ಅಧೀಕ್ಷಕ ಚೇತನ್ ಕುಮಾರ್ ಆರ್. ಫೋಟೋ ಬಳಸಿ ದುಷ್ಕರ್ಮಿಗಳು ನಕಲಿ ಫೇಸ್ಬುಕ್ ಖಾತೆ ತೆರೆದಿದ್ದಾರೆ. ಈ ಖಾತೆ ಶುಕ್ರವಾರವಷ್ಟೇ ತೆರೆಯಲಾಗಿದೆ. ಖಾತೆ ತೆರೆದ ಅರ್ಧ ತಾಸಿನಲ್ಲೇ ದುಷ್ಕರ್ಮಿಗಳ ದುಷ್ಕೃತ್ಯ ಬೆಳಕಿಗೆ ಬಂದಿದೆ.
ಕೋಸ್ಟಲ್ ಎಸ್ಪಿ-ಎಸ್.ಪಿ. ಸಿಂಗ್ ಹೆಸರಲ್ಲಿ ಫೇಕ್ ಐಡಿ ಸೃಜಿಸಲಾಗಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಮಲ್ಪೆಯಲ್ಲಿ ವಾಸವಿದ್ದಾರೆ ಎಂಬ ಮಾಹಿತಿಯನ್ನು ಅಪ್ಡೇಟ್ ಮಾಡಲಾಗಿದೆ. ಎಸ್.ಪಿ. ಸಿಂಗ್ ಎನ್ನುವುದು ಕರ್ನಾಟಕ ಕರಾವಳಿ ಕಾವಲು ಪೊಲೀಸ್ ಎಸ್ಪಿ ಅವರ ಪ್ರೊಫೈಲ್ ಆಗಿದೆ ಎಂದು ಉಲ್ಲೇಖಿಸಲಾಗಿದೆ. ಇದು ಪೊಲೀಸರ ಹೆಸರಲ್ಲಿ ನಕಲಿ ಅಕೌಂಟ್ ತೆರೆದು ದೋಖಾ ನಡೆಸುವ ಯತ್ನವಾಗಿರುವ ಅನುಮಾನವಿದೆ.
ಆದ್ದರಿಂದ ಸಂಪೂರ್ಣ ಘಟನೆಯ ಬಗ್ಗೆ ಸಿಎಸ್ಪಿ ಎಸ್ಪಿ ಚೇತನ್ ಕುಮಾರ್ ಅವರು ಉಡುಪಿ ಸೈಬರ್ ಕ್ರೈಂ ಮತ್ತು ಬೆಂಗಳೂರು ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೆ, ನೇರವಾಗಿ ಫೇಸ್ಬುಕ್ ಸಂಸ್ಥೆಗೂ ಚೇತನ್ ಕುಮಾರ್ ಅವರು ದೂರು ನೀಡಿದ್ದಾರೆ.