Saturday, August 13, 2022

Latest Posts

 ಕ್ಲಾಸ್‌ಮೆಟ್ ಹೆಸರಿನಲ್ಲಿ ಯುವತಿ ಮಾನಹರಣಕ್ಕೆ ಯತ್ನ: ಪಾತಕಿ ಸೆರೆ

ಹೊಸ ದಿಗಂತ ಆನ್ ಡೆಸ್ಕ್:

ಲೋಕದಲ್ಲಿ ಮತ್ತೆ ಮತ್ತೆ ಪ್ರೀತಿ ಪ್ರೇಮದ ಹೆಸರಿನಲ್ಲಿ ಮೋಸ ,ವಂಚನೆ, ಅನ್ಯಾಯ, ಅನಾಚಾರಗಳು ಅವ್ಯಾಹತವಾಗಿ ನಡೆಯುತ್ತಿದ್ದರೂ ಮತ್ತೆ ಮತ್ತೆ ಹೆಣ್ಣುಮಕ್ಕಳು ಇಂತಹ ಮೋಸದ ಬಲೆಗೆ ಬೀಳುತ್ತಲೇ ಇದ್ದು, ಹೈದರಾಬಾದಿನಲ್ಲಿ ಇಂತಹ ಮತ್ತೊಂದು ಕೃತ್ಯ ನಡೆದಿದೆ. ನಾನು ನಿನ್ನ ಕ್ಲಾಸ್‌ಮೆಟ್ ಎಂದು ಹೇಳಿಕೊಂಡು ಯುವತಿಯನ್ನು ಫೇಸ್‌ಬುಕ್‌ನಲ್ಲಿ ಪರಿಚಯಿಸಿಕೊಂಡ ಪಾತಕಿ , ಚಾಟ್ ಬಳಿಕ ಆಕೆಯನ್ನು ಬಲೆಗೆ ಬೀಳಿಸಿಕೊಳ್ಳಲು ಸಾಧ್ಯವಾಗದಿದ್ದಾಗ  ಆಕೆಯ ಫೊಟೋವನ್ನು ಡೇಟಿಂಗ್ ಸೈಟ್‌ನಲ್ಲಿ ಪೋಸ್ಟ್ ಮಾಡಿದ ಹೀನ ಕೃತ್ಯ ನಡೆದಿದೆ. ಇದೀಗ ದುಷ್ಕರ್ಮಿ ಪೊಲೀಸರ ಅತಿಥಿಯಾಗಿದ್ದಾನೆ.
ಹೈದರಾಬಾದ್ ಬಳಿಕ ಕಿಂಗ್ ಕೋತಿ ನಿವಾಸಿಯಾಗಿರುವ ಸಮೀರ್ ಎಂಬಾತ ಇಬ್ರಾಹಿಂಪಟ್ಣದ ಎಂಆರ್‌ಎಂ ಕಾಲೇಜಿನ ಎಂಬಿಎ ವಿದ್ಯಾರ್ಥಿಯಾಗಿದ್ದು, ನಾನು ನಿನ್ನ ಕ್ಲಾಸ್‌ಮೆಟ್ ಎಂದು ಹೇಳಿಕೊಂಡು ಯುವತಿಯೊಬ್ಬಳನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸಿಕೊಂಡಿದ್ದ. ಇದನ್ನು ನಂಬಿದ ಯುವತಿ ಆತನ ಜೊತೆ ಚಾಟಿಂಗ್ ನಡೆಸುತ್ತಿದ್ದಳು. ಕೊನೆಗೆ ಸಮೀರ್ ಆಕೆಯನ್ನು ಪ್ರೀತಿಸುವುದಾಗಿ ಹೇಳಿಕೊಂಡಾಗ , ಯುವತಿ ಇದನ್ನು ನಿರಾಕರಿಸಿ ಆತನೊಂದಿಗೆ ಸಂಪರ್ಕ ಕಡಿದುಕೊಂಡಿದ್ದಳು.
ಇದರಿಂದ ಕ್ರೋಧಗೊಂಡ ಸಮೀರ್ ತನ್ನ ಸ್ಮಾರ್ಟ್ ಫೋನ್‌ನಲ್ಲಿ ಹೊಸ ಜಿಮೇಲ್ ಖಾತೆ ತೆರೆದು ಡೇಟಿಂಗ್ ವೆಬ್‌ಸೈಟಿನಲ್ಲಿ ನಕಲಿ ಖಾತೆ ಸೃಷ್ಟಿಸಿ, ಅದರಲ್ಲಿ ಅಶ್ಲೀಲ ಫೊಟೋಗಳನ್ನು ಪೋಸ್ಟ್ ಮಾಡುತ್ತಿದ್ದ. ಖಾತೆಯ ಪ್ರೊಫೈಲ್‌ಗೆ ಯುವತಿಯ ಫೊಟೋವನ್ನು ಬಳಸಿ ಆಕೆಯ ಮೊಬೈಲ್ ನಂಬರನ್ನು ಕೂಡಾ ನೀಡಿ ಆಕೆಯನ್ನು ಕಾಲ್‌ಗರ್ಲ್ ಎಂದು ಬಿಂಬಿಸಿದ್ದ.
ಇದರಿಂದ ಅನಾಮಿಕ ಕರೆಗಳನ್ನು ಸ್ವೀಕರಿಸಬೇಕಾಗಿ ಬಂದ ಯುವತಿ , ಈ ಕರೆಗಳ ಮೂಲಕ ಅಸಭ್ಯ , ಅಶ್ಲೀಲ ಮಾತುಗಳನ್ನೂ ಕೇಳಬೇಕಾಗಿ ಬಂದಿತ್ತು.ಕೊನೆಗೂ ಎಚ್ಚೆತ್ತುಕೊಂಡ ಯುವತಿ ರಾಚಕೊಂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದೀಗ ಸೈಬರ್ ಕ್ರೈಮ್ ಪೊಲೀಸರು ಪಾತಕಿಯನ್ನು ಬಂಧಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss