ಹೊಸ ದಿಗಂತ ವರದಿ ಶಿವಮೊಗ್ಗ:
ಪೋಷಕರು ಖರ್ಚಿಗಾಗಿ ನೀಡಿದ್ದ ಹಣವನ್ನು ಸಂಗ್ರಹಿಸಿಟ್ಟಿದ್ದ ವಿದ್ಯಾರ್ಥಿ ಸಹೋದರಿಯರು ಅದನ್ನು ಶ್ರೀರಾಮ ಮಂದಿರ ಸಮರ್ಪಣಾ ನಿಧಿಗೆ ಕೊಡುವ ಇಂಗಿತ ವ್ಯಕ್ತಪಡಿಸಿದ್ದರಿಂದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಶುಕ್ರವಾರ ವಿದ್ಯಾರ್ಥಿನಿಯರ ಮನೆಗೆ ಖುದ್ದು ತೆರಳಿ ನಿಧಿ ಸ್ವೀಕರಿಸಿದರು.
ಇಲ್ಲಿನ ಬೊಮ್ಮನಕಟ್ಟೆ ನಿವಾಸಿ ನೇತ್ರಾವತಿ ಮತ್ತುಶಂಕರ್ ದಂಪತಿ ಪುತ್ರಿಯರಾದ ಅನುಶ್ರೀ ಹಾಗೂ ಛಾಯಾಶ್ರೀ ಚಿಲ್ಲರೆ ಹಣ ಕೂಡಿಟ್ಟು ನಿಧಿ ಸಮರ್ಪಣೆ ಮಾಡಿದ್ದಾರೆ.
ನಿಧಿ ಸ್ವೀಕರಿಸಿ ಮಾತನಾಡಿದ ಸಚಿವ ಕೆ.ಎಸ್. ಈಶ್ವರಪ್ಪ, ಮಂದಿರ ನಿರ್ಮಾಣಕ್ಕಾಗಿ 5-10 ಲಕ್ಷ ರೂ. ದೇಣಿಗೆ ನೀಡುವುದು ದೊಡ್ಡದಲ್ಲ. ವಿದ್ಯಾರ್ಥಿಗಳು ಈ ರೀತಿ ಕೂಡಿಟ್ಟು ನಿಧಿಗೆ ಸಮರ್ಪಣೆ ಮಾಡುತ್ತಿರುವುದು ವಿಶೇಷವಾಗಿದೆ. ಇದು ಬೇರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ನಿಧಿ ಸಮರ್ಪಣಾ ಸಮಿತಿಯ ಪ್ರಮುಖರಾದ ಗಿರೀಶ್ ಕಾರಂತ್, ಸಚ್ಚಿದಾನಂದ,ಪಾಲಿಕೆ ಸದಸ್ಯ ಚನ್ನಬಸಪ್ಪ, ವಿಎಚ್ ಪಿಯ ಪುರುಷೋತ್ತಮ ಮೊದಲಾದವರು ಇದ್ದರು.