Tuesday, June 28, 2022

Latest Posts

ಖಾಂಡ್ಯ ಹೋಬಳಿ ಜನರಿಂದ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸಲು ಕರೆ

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಹಲಿ ಯೋಜನೆ, ಪರಿಸರ ಸೂಕ್ಷ್ಮ ಪ್ರದೇಶ, ಕಸ್ತೂರಿ ರಂಗನ್ ವರದಿಗಳನ್ನು ವಿರೋಧಿಸಿ ಖಾಂಡ್ಯ ಹೋಬಳಿಯ ಜನರು ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಬಹಿಷ್ಕರಿಸಲು ಕರೆ ನೀಡಿದ್ದಾರೆ.
ಹೋಬಳಿ ವ್ಯಾಪ್ತಿಯ ಕಡವಂತಿ, ಹುಯಿಗೆರೆ, ದೇವದಾನ ಮತ್ತು ಬಿದರೆ ಗ್ರಾ.ಪಂ.ಗಳ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ತಿಳಿಸಲಾಗಿದ್ದು, ಈ ಸಂಬಂಧ ನಾಲ್ಕೂ ಪಂಚಾಯಿತಿ ಯಲ್ಲಿ ಬ್ಯಾನರ್‍ಗಳನ್ನು ಕಟ್ಟಲಾಗಿದೆ.
ಈ ನಾಲ್ಕೂ ಪಂಚಾಯ್ತಿಗಳ ಯಾವುದೇ ಸ್ಥಾನಗಳಿಗೆ ಯಾರೂ ನಾಮಪತ್ರವನ್ನೂ ಸಲ್ಲಿಸಬಾರದು, ಜನರು ಮತದಾನದಲ್ಲಿ ಭಾಗವಹಿಸಬಾರದು ಎಂದು ಖಾಂಡ್ಯ ನಾಗರೀಕ ಹಿತರಕ್ಷಣಾ ವೇದಿಕೆ ಹೆಸರಿನಲ್ಲಿ ಹಾಕಲಾಗಿರುವ ಬ್ಯಾನರ್‍ಗಳಲ್ಲಿ ಸೂಚನೆ ನೀಡಲಾಗಿದೆ.
ಯಾರಾದರೂ ಚುನಾವಣೆಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದರೆ ಅವರಿಗೆ ಹಾರ ಹಾಕಿ ಮನೆಯ ಮುಂದೆ ಧರಣಿ ಕೂರಲಾಗುವುದು. ಈ ಹಿನ್ನೆಲೆಯಲ್ಲಿ ಖುದ್ದಾಗಿ ಅಥವಾ ಆನ್‍ಲೈನ್‍ಗಳ ಮೂಲಕ ಯಾರೂ ನಾಮಪತ್ರ ಸಲ್ಲಿಸಬಾರದು ಎಂದು ಎಚ್ಚರಿಕೆ ನೀಡಲಾಗಿದೆ.
ಶತಮಾನಗಳ ಬದುಕೇ ಬೀದಿಗೆ ಬೀಳುವಾಗ ಚುನಾವಣೆ ಏಕೆ ಬೇಕು ಎಂದು ಈ ಪಂಚಾಯ್ತಿ ವ್ಯಾಪ್ತಿಯ ಜನರು ಪ್ರಶ್ನಿಸುತ್ತಿದ್ದು, ಈಗಾಗಲೇ ಮಲೆನಾಡಿಗರ ಬದುಕಿಗೆ ಹುಲಿಯೋಜನೆ, ಬಫರ್ ಝೋನ್, ಕಸ್ತೂರಿ ರಂಗನ್ ವರದಿ ಹಾಗೂ ಪರಿಸರ ಸೂಕ್ಷ್ಮ ವಲಯದ ಆತಂಕ ಕಾಡಲಾರಂಭಿಸಿದೆ. ಇಂತಹ ಸಂದರ್ಭದಲ್ಲಿ ಸರ್ಕಾರಗಳು ರಕ್ಷಣೆಗೆ ಮುಂದಾಗಬೇಕಿದೆ ಎಂದು ಒತ್ತಾಯಿಸಿ ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಲಾಗಿದೆ.
ಈ ನಾಲ್ಕೂ ಪಂಚಾಯ್ತಿಯಲ್ಲಿ ಪ್ರತಿ ಬೂತ್‍ಗೆ ಒಂದರಂತೆ ಚುನಾವಣೆ ಬಹಿಷ್ಕಾರದ ಬ್ಯಾನರ್‍ಗಳನ್ನು ಕಟ್ಟಲು ತೀರ್ಮಾನಿಸಿದ್ದಾರೆ. ಐದು ವರ್ಷದ ಅವಧಿಯ ಸದಸ್ಯತ್ವಕ್ಕಾಗಿ ಬದುಕನ್ನೇ ಬಲಿಕೊಡುವುದು ಬೇಡ ಎಲ್ಲರೂ ಸೇರಿ ಚುನಾವಣೆ ಬಹಿಷ್ಕರಿಸುವ ಮೂಲಕ ಸರ್ಕಾರದ ಗಮನ ಸೆಳೆಯೋಣ ಎಂದು ನಾಗರೀಕ ಹಿತರಕ್ಷಣಾ ಸಮಿತಿ ಮನವಿ ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss