ಮೈಸೂರು: ಕಿಡಿಗೇಡಿಗಳ ಗುಂಪೊಂದು ಖಾಸಗಿ ಕಂಪನಿಯ ನೌಕರನ ಮೇಲೆ ಹಲ್ಲೆ ನಡೆಸಿ, ಆತನ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಎನ್ ಆರ್.ಮೊಹಲ್ಲಾ ನಿವಾಸಿ ಪುನೀತ್ (26)ಎಂಬಾತ ಕಿಡಿಗೇಡಿಗಳಿಂದ ಹಲ್ಲೆಗೊಳಗಾಗಿ ಚಿನ್ನದ ಸರ ಕಳೆದುಕೊಂಡವ. ಈತ ತನ್ನ ದ್ವಿಚಕ್ರವಾಹನದಲ್ಲಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಎನ್ ಆರ್ ಮೊಹಲ್ಲಾ ಶಿವಾಜಿ ರಸ್ತೆಯಲ್ಲಿ ನಾಲ್ವರಿದ್ದ ಗುಂಪೊಂದು ತಡೆದು ನಿಲ್ಲಿಸಿದ್ದು , ಯುವಕನ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರವನ್ನು ಎಗರಿಸಿದೆ. ಯುವಕ ಕೊಸರಿಕೊಂಡು ಕೂಗಲು ಯತ್ನಿಸಿದಾಗ ಆತನ ಮೇಲೆ ಡ್ರಾ÷್ಯಗರ್ ತೋರಿಸಿ ಬೆದರಿಸಿದ ಗುಂಪು, ತಲೆಯ ಮೇಲೆ ಗಾಯ ಮಾಡಿ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದೆ. ಈ ಕುರಿತು ಯುವಕ ಎನ್,ಆರ್.ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇನ್ಸಪೆಕ್ಟರ್ ಶೇಖರ್ ಸುತ್ತಮುತ್ತಲಿನ ಸಿಸಿಟಿವಿ ಫೂಟೇಜ್ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ. ಮಹಿಳೆಯರ ಚಿನ್ನದ ಸರವನ್ನು ಟಾರ್ಗೆಟ್ ಮಾಡುತ್ತಿದ್ದ ಕಳ್ಳರು ಇದೀಗ ಪುರುಷರ ಕತ್ತಿನಲ್ಲಿರುವ ಚಿನ್ನದ ಸರಗಳ ಮೇಲೂ ಕಣ್ಣು ಹಾಕಿದ್ದಾರೆ. ಇತ್ತೀಚೆಗೆ ಯುವಕನೊಬ್ಬ ರಸ್ತೆ ಬದಿ ನಿಂತು ಸಿಗರೇಟ್ ಸೇದುತ್ತಿದ್ದಾಗ, ಆತನ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಳ್ಳರು ಎಗರಿಸಿಕೊಂಡು ಹೋಗಿದ್ದರು. ಇದಾದ ಬಳಿಕ ಇದೀಗ ಮತ್ತೊಬ್ಬ ಯುವಕನ ಚಿನ್ನದ ಸರವನ್ನು ಕಿತ್ತುಕೊಂಡಿದ್ದಾರೆ.
ನಗರದಲ್ಲಿ ಈ ರೀತಿ ಕೃತ್ಯಗಳನ್ನು ಎಸಗುವವರ ಗುಂಪೊಂದು ಸಕ್ರಿಯವಾಗಿರುವಂತೆ ಕಂಡು ಬರುತ್ತಿದ್ದು, ಕಳ್ಳರಿಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.