Tuesday, June 28, 2022

Latest Posts

ಕಾರ್ಮಿಕ ಇಲಾಖೆಯಿಂದ ಅಪಘಾತಕ್ಕೀಡಾದ ಖಾಸಗಿ ಸಾರಿಗೆ ಕಾರ್ಮಿಕರಿಗೆ 5 ಲಕ್ಷ ರೂ.ಗಳವರೆಗೆ ಪರಿಹಾರ

ಮಡಿಕೇರಿ: ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರಾದ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್‌ಗಳ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಗಾಗಿ ಅಪಘಾತ ಪರಿಹಾರ ಯೋಜನೆ ಜಾರಿಗೊಳಿಸಿದ್ದು, ಈ ಯೊಜನೆಯಡಿ 5 ಲಕ್ಷ ರೂ. ವರೆಗೆ ಪರಿಹಾರ ದೊರೆಯಲಿದೆ.

ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್‌ಗಳು ನಿರಂತರವಾಗಿ ಅಪಘಾತಗಳಿಗೆ ತುತ್ತಾಗಿ, ಕುಟುಂಬ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳು ಹೆಚ್ಚು. ಅಪಘಾತದಲ್ಲಿ ಮರಣ, ಶಾಶ್ವತ ದುರ್ಬಲತೆ ಅಥವಾ ತಾತ್ಕಾಲಿಕ ದುರ್ಬಲತೆ ಹೊಂದಿದ ಸಂದರ್ಭದಲ್ಲಿ, ಅವರ ದುಡಿಮೆಯನ್ನೇ ಅವಲಂಬಿಸಿರುವ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತದೆ. ಇಂತಹ ಕುಟುಂಬಕ್ಕೆ ನೆರವಾಗುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ ಜಾರಿಗೆ ತಂದಿದೆ.

ಯೋಜನೆಗೆ ಯಾರು ಅರ್ಹರುಎಷ್ಟು ಪರಿಹಾರ?
ಈ ಯೋಜನೆಯಡಿ 20 ರಿಂದ 70 ವರ್ಷ ವಯೋಮಾನದ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರಾದ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್‌ಗಳು ಈ ಸೌಲಭ್ಯ ಪಡೆಯಬಹುದು.

ಅಪಘಾತದಿಂದ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್‌ಗಳು ಮರಣ ಹೊಂದಿದಲ್ಲಿ, ಅವರ ನಾಮನಿರ್ದೇಶಿತರಿಗೆ ಈ ಯೋಜನೆಯಡಿ 5 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಅಪಘಾತದಲ್ಲಿ ಶಾಶ್ವತ ದುರ್ಬಲತೆ ಹೊಂದಿದಾಗ, ಫಲಾನುಭವಿಗೆ ದುರ್ಬಲತೆಯ ಪ್ರಮಾಣಕ್ಕನುಗುಣವಾಗಿ 2 ಲಕ್ಷ ರೂ. ವರೆಗೂ ಪರಿಹಾರ ನೀಡಲಾಗುತ್ತದೆ. ಅಪಘಾತದಿಂದ ತಾತ್ಕಾಲಿಕ ದುರ್ಬಲತೆಗೆ, ಅಪಘಾತಕ್ಕೊಳಗಾಗಿ ಆಸ್ಪತ್ರೆಯಲ್ಲಿ 15 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ಚಿಕಿತ್ಸೆ ಪಡೆದಲ್ಲಿ, ಗರಿಷ್ಠ 50 ಸಾವಿರ ರೂ. ಪಾವತಿಸಲಾಗುತ್ತದೆ. 15 ದಿನಗಳಿಗಿಂತ ಹೆಚ್ಚು ದಿನ ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದಲ್ಲಿ, ಗರಿಷ್ಠ 1 ಲಕ್ಷ ರೂ ವರೆಗೆ ಅಥವಾ ನಿಖರ ಆಸ್ಪತ್ರೆ ವೆಚ್ಚ, ಇವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ಪಾವತಿಸಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ : ಯೋಜನೆಯಡಿ ಪರಿಹಾರ ಮೊತ್ತ ಪಡೆಯಲು ಅಪಘಾತ ಸಂಭವಿಸಿದ 6 ತಿಂಗಳ ಒಳಗೆ ಫಲಾನುಭವಿ ಅಥವಾ ನಾಮನಿರ್ದೇಶಿತರು ಮಂಡಳಿಗೆ ಅರ್ಜಿ ಸಲ್ಲಿಸಬೇಕು. ಅಪಘಾತದಿಂದ ಮರಣ ಹೊಂದಿದ ಪ್ರಕರಣಗಳಲ್ಲಿ, ಫಲಾನುಭವಿಯ ನಾಮನಿರ್ದೆಶಿತರು ಅರ್ಜಿಯ ಜೊತೆಗೆ ಮರಣ ಪ್ರಮಾಣ ಪತ್ರ, ಮರಣೋತ್ತರ ಪರೀಕ್ಷಾ ವರದಿ, ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಹಾಗೂ ಊರ್ಜಿತ ಚಾಲನಾ ಪರವಾನಗಿ ಸಲ್ಲಿಸಬೇಕು. ಅಪಘಾತದಿಂದ ದುರ್ಬಲತೆ ಉಂಟಾದಲ್ಲಿ ಅರ್ಜಿಯ ಜೊತೆಗೆ ಊರ್ಜಿತ ಚಾಲನಾ ಪರವಾನಗಿ, ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಹಾಗೂ ಒಳರೋಗಿ ಆಸ್ಪತ್ರೆ ವೆಚ್ಚ ಹಿಂಪಡೆಯಲು ವೈದ್ಯಕೀಯ ಪ್ರಮಾಣ ಪತ್ರ ಪ್ರತಿಗಳನ್ನು ಸಲ್ಲಿಸಬೇಕಿದೆ.
ಅರ್ಜಿಯ ದಾಖಲೆಗಳನ್ನು ಪರಿಶೀಲಿಸಿ ಅರ್ಹರಿದ್ದಲ್ಲಿ, ಪರಿಹಾರದ ಮೊತ್ತವನ್ನು ಅರ್ಜಿದಾರರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.

ಈ ಯೋಜನೆಯು ದಕ್ಷಿಣಕನ್ನಡ, ಉಡುಪಿ, ಕೊಡಗು ಸೇರಿದಂತೆ ಖಾಸಗಿ ಬಸ್ ವ್ಯವಸ್ಥೆ ಅಧಿಕವಾಗಿರುವ ಜಿಲ್ಲೆಗಳ ಖಾಸಗಿ ಬಸ್ ಸಂಸ್ಥೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ಹಾಗೂ ಅವರ ಕುಟುಂಬದವರಿಗೆ ಹೆಚ್ಚಿನ ಪ್ರಯೋಜನವಾಗಲಿರುವುದಾಗಿ ನಿರೀಕ್ಷಿಸಲಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿಗೆ ಆಯಾ ಪ್ರದೇಶದ ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ಇಲ್ಲವೇ ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss