Thursday, July 7, 2022

Latest Posts

ಖಾಸಗಿ ಸುದ್ದಿವಾಹಿನಿಯ ಕ್ಯಾಮರಾಮ್ಯಾನ್ ಮೇಲೆ ಹಲ್ಲೆ: ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ

ದಾವಣಗೆರೆ:  ಅಕ್ರಮವಾಗಿ ಎಂ-ಸ್ಯಾಂಡ್ ಸಂಗ್ರಹಿಸಿಟ್ಟ ಸ್ಥಳದ ಚಿತ್ರೀಕರಣಕ್ಕೆ ತೆರಳಿದ್ದ ಖಾಸಗಿ ಸುದ್ದಿವಾಹಿನಿಯ ಕ್ಯಾಮೆರಾಮ್ಯಾನ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ದೌರ್ಜನ್ಯ ಎಸಗಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾ ವರದಿಗಾರರ ಕೂಟದಿಂದ ನಗರದಲ್ಲಿ ಮಂಗಳವಾರ ಪ್ರತಿಭಟಿಸಲಾಯಿತು.
ಇಲ್ಲಿನ ಉಪ ವಿಭಾಗಾಧಿಕಾರಿ ಕಚೇರಿ ಎದುರು ಜಮಾಯಿಸಿದ್ದ ವರದಿಗಾರರ ಕೂಟದ ಪದಾಧಿಕಾರಿಗಳು, ಸದಸ್ಯರು, ಮಾಧ್ಯಮದವರು ಎಸಿ ಮಮತಾ ಹೊಸಗೌಡರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಿದರು.
ಇದೇ ವೇಳೆ ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರ್.ಆರಾಧ್ಯ ಮಾತನಾಡಿ, ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ-48ರ ಪಕ್ಕದ ಜಾಗವೊಂದರಲ್ಲಿ ಎಂ-ಸ್ಯಾಂಡ್ ದಾಸ್ತಾನು ಮಾಡಿಟ್ಟಿದ್ದ ಬಗ್ಗೆ ಸೋಮವಾರ ಮಧ್ಯಾಹ್ನ ವೀಡಿಯೋ ಚಿತ್ರೀಕರಣ ಮಾಡಲು ಹೋಗಿದ್ದ ಸುದ್ದಿವಾಹಿನಿಯ ಕ್ಯಾಮೆರಾಮ್ಯಾನ್ ಕಿರಣಕುಮಾರ ಮೇಲೆ ದುಷ್ಕರ್ಮಿಗಳ ಗುಂಪು ಮಾರಣಾಂತಿಕ ಹಲ್ಲೆ ಮಾಡಿ, ದೌರ್ಜನ್ಯ ಎಸಗಿದೆ. ಈ ಹಿನ್ನೆಲೆಯಲ್ಲಿ ಸ್ಟಾಕ್ ಯಾರ್ಡ್ನಲ್ಲಿ ಸಂಗ್ರಹಿಸಿಟ್ಟ ಎಂ-ಸ್ಯಾಂಡ್ ಹಾಗೂ ಅದರ ಮಾಲೀಕರು, ಸಿಬ್ಬಂದಿ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪದೇಪದೇ ಮಾಧ್ಯಮದವರ ಕಾರ್ಯ ನಿರ್ವಹಣೆಗೆ ಅಡ್ಡಿಪಡಿಸುವ ಘಟನೆಗಳು ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ ಮರುಕಳಿಸುತ್ತಲೇ ಇವೆ. ಮಾಧ್ಯಮ ಸಿಬ್ಬಂದಿ ನಿರ್ಭೀತಿಯಿಂದ ಕೆಲಸ ಮಾಡಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಧ್ಯಮ ಸಿಬ್ಬಂದಿ ಮೇಲೆ ಪದೇಪದೇ ಹಲ್ಲೆ, ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪತ್ರಕರ್ತರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಕೂಟದ ಸಂಸ್ಥಾಪಕ ಅಧ್ಯಕ್ಷ ಕೆ.ಏಕಾಂತಪ್ಪ ಮಾತನಾಡಿ, ಎಂ-ಸ್ಯಾಂಡ್ ಸ್ಟಾಕ್ ಯಾರ್ಡ್ನಲ್ಲಿ ದಾಸ್ತಾನು ಮಾಡಿಟ್ಟಿರುವ ಎಂ-ಸ್ಯಾಂಡ್ ಕಾನೂನಾತ್ಮಕವಾಗಿದೆಯೇ ಅಥವಾ ಅಕ್ರಮವಾಗಿ ಸಂಗ್ರಹಿಸಿಡಲಾಗಿದೆಯೇ? ಎಂಬ ತನಿಖೆಯಾಗಬೇಕು. ನಿನ್ನೆ ಖಾಸಗಿ ದೃಶ್ಯವಾಹಿನಿಯ ಕ್ಯಾಮೆರಾಮ್ಯಾನ್ ಮೇಲಿನ ಹಲ್ಲೆ, ದೌರ್ಜನ್ಯ ನಡೆದಿರುವುದು ಖಂಡನೀಯ. ಈ ಘಟನೆಯನ್ನು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಕ್ಯಾಮರಾಮ್ಯಾನ್ ಕಿರಣ್ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಹಲ್ಲೆಗೊಳಗಾದ ಕ್ಯಾಮೆರಾಮ್ಯಾನ್ ಕಿರಣಕುಮಾರ, ಕೂಟದ ಪ್ರಧಾನ ಕಾರ್ಯದರ್ಶಿ ಪಿ.ಮಂಜುನಾಥ ಕಾಡಜ್ಜಿ, ಮಾಜಿ ಅಧ್ಯಕ್ಷ ಬಸವರಾಜ ದೊಡ್ಮನಿ, ಪದಾಧಿಕಾರಿಗಳಾದ ಪಿ.ಎಸ್.ಲೋಕೇಶ, ತಾರಾನಾಥ, ನಾಗರಾಜ ಎಸ್.ಬಡದಾಳ್, ಡಿ.ರಂಗನಾಥ ರಾವ್, ಯೋಗರಾಜ, ಬಸವರಾಜ ನವಣಿ, ವಿನಾಯಕ ಪೂಜಾರ, ಎ.ಫಕೃದ್ದೀನ್, ಸತೀಶ ಬಡಿಗೇರ್, ನಿಂಗಪ್ಪ, ಎಸ್.ಎಸ್.ಸಾಗರ್, ಪರಮೇಶ ಕುಂದೂರು, ರಾಮಪ್ಪ, ಭುವನೇಶ್ವರಿ ಆರ್.ರವಿಕುಮಾರ, ರಮೇಶ, ರಾಮಪ್ರಸಾದ, ಸತೀಶ ನಾಯ್ಕ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss