Monday, July 4, 2022

Latest Posts

ಖಿನ್ನತೆಗೆ ಒಳಗಾದಾಗ ಏನು ಮಾಡಬೇಕು ಏನು ಮಾಡಬಾರದು? ಮಾನಸಿಕ ಆರೋಗ್ಯಕ್ಕೊಂದಿಷ್ಟು ಟಿಪ್ಸ್

ಇಂದು ಎಲ್ಲರ ಗಮನ ಕೊರೋನಾ ಮೇಲಿದೆ. ಎಲ್ಲರೂ ಕೊರೋನಾದಿಂದ ದೂರ ಇರಲು, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದಾರೆ. ಇದರ ಮಧ್ಯೆ ನಮ್ಮೆಲ್ಲರನ್ನು ಕಾಡುತ್ತಿರುವ ಮತ್ತೊಂದು ಸಮಸ್ಯೆ ಬಗ್ಗೆ ನಾವು ಗಮನ ನೀಡುತ್ತಿಲ್ಲ. ಅದು ಖಿನ್ನತೆ. ಹೌದು ಇಡೀ ಜಗತ್ತಿನಲ್ಲಿ ೨೬೪ ಮಿಲಿಯನ್ ಜನರು ಖಿನ್ನತೆಯಿಂದ ಬಳಲುತ್ತಿದ್ದಾರೆ. ಇದರಲ್ಲಿ ಎಲ್ಲ ವಯಸ್ಸಿನವರೂ ಇದ್ದಾರೆ. ಆದರೆ ಸಾಮಾನ್ಯವಾಗಿ ಹೆಣ್ಣು ಮಕ್ಕಳಲ್ಲಿ ಖಿನ್ನತೆ ಹೆಚ್ಚಿರುತ್ತದೆ. ಖಿನ್ನತೆ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಂಡವರಿಗೆ ಲೆಕ್ಕವೇ ಇಲ್ಲ. ಖಿನ್ನತೆಯ ಲಕ್ಷಣಗಳನ್ನು ಮೊದ ಹಂತದಲ್ಲೇ ಗಮನಿಸಿ ನಮ್ಮ ಜೀವನಶೈಲಿ ಬದಲಾಯಿಸಿಕೊಂಡರೆ ಇಂಥ ಅನಾಹುತಗಳು ತಪ್ಪುತ್ತವೆ. ಖಿನ್ನತೆಗೊಳಗಾದ ಸಂದರ್ಭದಲ್ಲಿ ಏನೆಲ್ಲಾ ಅನಿಸುತ್ತದೆ, ಏನು ಮಾಡಬೇಕು ಎಂಬುದರ ಬಗ್ಗೆ ತಿಳಿಯೋಣ..

  • ಖಿನ್ನತೆ ತುಂಬಾ ದೊಡ್ಡ ಕಾಯಿಲೆಯೇನಲ್ಲ. ಇದನ್ನು ನಾವೇ ಸರಿಪಡಿಸಿಕೊಳ್ಳಬಹುದು. ಜೀವನದಲ್ಲಿ ಯಾರ ಬಳಿಯೂ ಸಹಾಯ ಕೇಳಿದವರಲ್ಲ, ಈಗೇಕೆ ಕೇಳಬೇಕು ಎನಿಸುತ್ತದೆ. ಆದರೆ ಈ ಸಂದರ್ಭದಲ್ಲಿ ನಮಗೆ ಇನ್ನೊಬ್ಬರ ಸಹಾಯ ಅವಶ್ಯ. ಸಹಾಯ ಬೇಕಾದರೆ ಹಿಂಜರಿಯಬೇಡಿ.
  • ನಮಗೆ ಬಂದಿರುವ ಸಮಸ್ಯೆಯನ್ನು ಹೋಗಲಾಡಿಸಲು ಮೊದಲ ಮೆಟ್ಟಿಲೆಂದರೆ ಸಮಸ್ಯೆಯನ್ನು ಒಪ್ಪುವುದು. ಹೌದು ನನಗೆ ಈ ಸಮಸ್ಯೆಯಿದೆ ಇದರಿಂದ ಓಡಿಹೋಗುವುದು ಉಪಾಯವಲ್ಲ. ಇದನ್ನು ಎದುರಿಸಬೇಕು. ಆದರೆ ಎದುರಿಸುವುದು ಹೇಗೆ ಎಂದು ತಿಳಿದಿಲ್ಲವಾದರೆ ಬೇರೆಯವರ ಸಹಾಯ ಪಡೆಯಬಹುದು.
  • ಎಷ್ಟಾದರೂ ಅತ್ತುಬಿಡಿ. ಅಳುವುದು, ದುಃಖ ಪಡುವುದು ಒಂದೆರಡು ದಿನ ಒಬ್ಬರೇ ಇರುವುದು ಇದೆಲ್ಲವೂ ಸಹಜ. ಆದರೆ ಮನಸ್ಥಿತಿ ಕೈಮೀರಿ ಹೋಗುತ್ತಿದೆ ಎಂದನಿಸಿದವರು ಯಾರದ್ದಾದರೂ ಜೊತೆ ಇದ್ದರೆ ಒಳ್ಳೆಯದು.
  • ಡೈರಿ ಬರೆಯುವ ಹವ್ಯಾಸ ಇಲ್ಲದವರು ಅದನ್ನು ರೂಢಿಸಿಕೊಳ್ಳಿ. ಒಬ್ಬರ ಜೊತೆ ನಾವು ಮನಸಿನ ಭಾವನೆ ಹೇಳಿಕೊಂಡಾಗ ಮನಸು ಹೇಗೆ ಹಗುರವಾಗುವುದೋ ಹಾಗೆಯೇ ಡೈರಿ ಬರೆದಾಗಲೂ ಮನಸು ಹಗುರವಾಗುತ್ತದೆ. ಆದರೆ ಡೈರಿ ನಿಮ್ಮ ಸೀಕ್ರೆಟ್ಸ್‌ಗಳನ್ನು ಯಾರ ಬಳಿಯೂ ಹೇಳುವುದಿಲ್ಲ.
  • ಇಂದು ಶಾಶ್ವತ ಅಲ್ಲ. ಇಂದು ಆಗುತ್ತಿರುವ ನೋವು ನಾಳೆ ಇರಲೇಬೇಕು ಎಂದೇನಿಲ್ಲ. ಹೇಗಾದರೂ ಮಾಡಿ ಇಂದಿನ ದಿನ ಕಳೆದರೆ ನಾಳೆ ಒಳ್ಳೆಯ ದಿನವಾಗಿರಬಹುದು. ಏನೇ ಆದರೂ ತಾಳ್ಮೆ ಇರಲಿ.
  • ಖಿನ್ನತೆಗೊಳಗಾದಾಗ ಕೇವಲ ನೆಗೆಟಿವ್ ಅಂಶಗಳೇ ದೊಡ್ಡದು ಎನಿಸುತ್ತದೆ. ಕೆಟ್ಟದ್ದೇ ಆಗುತ್ತಿದೆ ಎಂದೆನಿಸುತ್ತದೆ. ಆದರೆ ನಿಮ್ಮ ಜೀವನದಲ್ಲಿ ಎಷ್ಟೊಂದು ಒಳ್ಳೆ ಘಟನೆಗಳೂ ನಡೆದೇ ಇವೆ. ಅವನ್ನು ಸ್ಮರಿಸಿ. ಮುಂದೆ ಇಂಥದ್ದೇ ದಿನಗಳನ್ನು ನಾನು ನೋಡಬೇಕು ಎಂದರೆ ಬದುಕಿರಬೇಕು. ಈ ದಿನವನ್ನು ಕಳೆಯಬೇಕು ಎಂದು ಗಟ್ಟಿ ಮನಸು ಮಾಡಿ.
  • ನಿಮ್ಮ ಖಿನ್ನತೆ ಮನಸ್ಸು ಕೆಟ್ಟದ್ದು. ಅದು ಹೇಳಿದಂತೆ ನೀವೇಕೆ ಕೇಳಬೇಕು? ಅದು ಇಂದು ಏನೂ ಮಾಡುವುದು ಬೇಡ ಸುಮ್ಮನೆ ಮಲಗಿಬಿಡೋಣ ಎಂದು ಹೇಳಿದರೆ, ಎದ್ದು ದಿನನಿತ್ಯದ ಎಲ್ಲ ಕೆಲಸ ಮಾಡಿ, ಜನರೊಂದಿಗೆ ಬೆರೆಯುವುದು ಬೇಡ ಎನಿಸಿದರೆ, ಎಲ್ಲರೊಂದಿಗೆ ಬೆರೆಯಿರಿ.
  • ಇಂಥ ಸಮಯಗಳಲ್ಲಿ ಮನಸ್ಸು ಸೂಕ್ಷ್ಮವಾಗಿರುತ್ತದೆ. ಒಂದು ಕ್ಷಣ ಆತ್ಮಹತ್ಯೆಗೆ ಪ್ರೇರೇಪಣೆಯೂ ಆಗಬಹುದು. ಆದರೆ ನೀವು ಅಷ್ಟು ದುರ್ಬಲರಲ್ಲ ಎಂಬುದನ್ನು ನೆನಪಿಡಿ. ನಿಮ್ಮಲ್ಲಿ ಜನ ಇಷ್ಟಪಡುವ ಗುಣಗಳನ್ನು ಗಮನಿಸಿ, ಟ್ರಿಪ್ ಹೋಗಿಬನ್ನಿ, ಪ್ರೀತಿ ಪಾತ್ರರನ್ನು ಪದೇಪದೆ ಭೇಟಿ ಮಾಡಿ.
    ನಾವು ಬಂದಮೇಲೆ ಖಿನ್ನತೆ ಬಂದಿದೆಯೇ ಹೊರತು ಖಿನ್ನತೆ ನಮಗಿಂತ ಮುಂಚೆ ಇರಲಿಲ್ಲ. ಅದನ್ನು ಮೆಟ್ಟಿನಿಲ್ಲುವ ಸಾಮರ್ಥ್ಯ ನಮ್ಮಲ್ಲಿದೆ. ಇನ್ನು ನಿಮ್ಮ ಸ್ನೇಹಿತರು, ಕುಟುಂಬದವರು, ಪರಿಚಯದವರು ಯಾರಾದರೂ ಖಿನ್ನತೆಗೊಳಗಾಗಿದ್ದಾರೆ ಎಂದನಿಸಿದರೆ ಅವರಿಗೆ ಸಹಾಯ ಮಾಡಿ. ಅವರು ಕರೆದಾಗ ಅವರನ್ನು ಭೇಟಿ ಮಾಡಿ. ಪ್ರೀತಿಯಿಂದ ಮಾತನಾಡಿ, ಆತ್ಮವಿಶ್ವಾಸ ಹೆಚ್ಚಿಸಿ. ಒಟ್ಟಾಗಿ ಎಲ್ಲರೂ ಈ ಖಿನ್ನತೆಯೆಂಬ ಮಾರಿಯನ್ನು ಹೋಗಲಾಡಿಸೋಣ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss