ಕಾಸರಗೋಡು: ವೈದ್ಯಕೀಯ ರಂಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಗಡಿನಾಡು ಕಾಸರಗೋಡು ಜಿಲ್ಲೆಯ ಕನ್ನಡಿಗ ವೈದ್ಯರಿಬ್ಬರು ರಾಷ್ಟ್ರೀಯ ವೈದ್ಯಕೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಾಸರಗೋಡು ಸರಕಾರಿ ಜನರಲ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಜನಾರ್ದನ ನಾಯ್ಕ್ ಹಾಗೂ ಡಾ.ನಾರಾಯಣ ಪ್ರದೀಪ್ ಪೆರ್ಮುಖ ಅವರು ಈ ಪ್ರಶಸ್ತಿಗೆ ಆಯ್ಕೆಯಾದವರು.
ಹೊಸದಿಲ್ಲಿಯ ಭಾರತೀಯ ವೈದ್ಯಕೀಯ ಸಂಘವು ಪ್ರತೀ ವರ್ಷ ವೈದ್ಯರ ದಿನಾಚರಣೆಯ ಅಂಗವಾಗಿ ದೇಶಾದ್ಯಂತ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡುತ್ತಿದೆ.
ಡಾ.ಜನಾರ್ದನ ನಾಯ್ಕ್
ಎಂಎಯ ಕಾಸರಗೋಡು ಘಟಕದಲ್ಲಿ ಸಕ್ರಿಯರಾಗಿರುವ ಇವರು ನೀರ್ಚಾಲು ಸಮೀಪದ ಮಾನ್ಯ ಚುಕ್ಕಿನಡ್ಕದ ಕೊರಗು ನಾಯ್ಕ್ – ಪರಮೇಶ್ವರಿ ದಂಪತಿಯ ಪುತ್ರನಾಗಿದ್ದಾರೆ.
ಕೋವಿಡ್ 19ರ ಈ ಕಾಲಘಟ್ಟದಲ್ಲಿ ಮುಂಚೂಣಿಯಲ್ಲಿದ್ದು ವಿಶೇಷ ತಜ್ಞ ವೈದ್ಯರಾಗಿ ಗಮನ ಸೆಳೆದ ಇವರು, 100ಕ್ಕಿಂತಲೂ ಹೆಚ್ಚು ಕೋವಿಡ್ ರೋಗಿಗಳನ್ನು ಗುಣಪಡಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ. ಇವರ ಉತ್ತಮ ರೀತಿಯ ಚಿಕಿತ್ಸೆಯಲ್ಲಿ ಎಲ್ಲಾ ರೋಗಿಗಳೂ ಚೇತರಿಸಿಕೊಂಡು ಗುಣಮುಖರಾಗಿದ್ದಾರೆ.
ಡಾ.ನಾರಾಯಣ ಪ್ರದೀಪ್ ಪೆರ್ಮುಖ
ಐಎಂಎಯ ಕಾಸರಗೋಡು ಘಟಕದ ಅಧ್ಯಕ್ಷರಾಗಿ ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಇವರು ಬದಿಯಡ್ಕದ ಪೆರ್ಮುಖ ಈಶ್ವರ ಭಟ್ – ಕುಸುಮಾ ದಂಪತಿಯ ಪುತ್ರ. ಪ್ರಸ್ತುತ ಕೊರೋನಾ ರೋಗದ ಸನ್ನಿವೇಶದಲ್ಲಿ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳ ಅಸಿಸ್ಟೆಂಟ್ ನೋಡಲ್ ಅಧಿಕಾರಿಯಾಗಿ ಕರ್ತವ್ಯವನ್ನು ಸಮರ್ಥವಾಗಿ ಹಾಗೂ ಯಶಸ್ವಿಯಾಗಿ ನಿಭಾಯಿಸುತ್ತಿರುವ ಹಿರಿಮೆ ಇವರದು.
ಕೊರೋನಾವನ್ನು ಹಿಮ್ಮೆಟ್ಟಿಸುವಲ್ಲಿ ಈ ಇಬ್ಬರು ಕನ್ನಡಿಗ ವೈದ್ಯರ ಸೇವೆಯನ್ನು ಮನಗಂಡು ಐಎಂಎ ರಾಷ್ಟ್ರೀಯ ಮಟ್ಟದ ಅತ್ಯುತ್ತಮ ವೈದ್ಯ ಪ್ರಶಸ್ತಿಯನ್ನು ನೀಡುತ್ತಿರುವುದು ಕಾಸರಗೋಡು ಜಿಲ್ಲೆಗೆ ಹೆಮ್ಮೆಯ ಜೊತೆಯಲ್ಲಿ ಗೌರವದ ವಿಷಯವಾಗಿದೆ.