ಮೈಸೂರು: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕು ಸೇರಿದಂತೆ ಕೊಡಗು ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಕಾವೇರಿ ನದಿ ಪ್ರಾಂತ್ಯದ ಗ್ರಾಮಗಳು ಮುಳುಗಡೆಯಾಗಿ ಜನಜೀವನ ಅಸ್ತವ್ಯಸ್ತವಾಗಿದೆ.
ತಾಲ್ಲೂಕಿನ ಕಾವೇರಿ ನದಿ ಪಾತ್ರದ ಗ್ರಾಮಗಳಾದ ಕೊಪ್ಪ, ಬೈಲುಕುಪ್ಪ, ರಾಣಿಗೇಟ್, ಮುತ್ತಿನ ಮುಳುಸೊಗೆ, ಆವರ್ತಿ ಸೇರಿದಂತೆ ಹಲವು ಗ್ರಾಮಗಳ ರಸ್ತೆ ಬಂದ್ ಆಗಿದೆ. ನೂರಾರು ಮನೆಗಳಿಗೆ ನೀರು ನುಗ್ಗಿ ಕೆಲವು ಮನೆಗಳು ಕುಸಿಯುವ ಹಂತ ತಲುಪಿದ್ದು, ನೂರಾರು ಎಕರೆ ಕೃಷಿ ಭೂಮಿಯಲ್ಲಿ ಬೆಳೆದಿದ್ದ ಮುಸುಕಿನ ಜೋಳ, ಶುಂಠಿ, ತಂಬಾಕು, ಅಡಿಕೆ, ತೆಂಗಿನ ತೋಟ ಸೇರಿದಂತೆ ಇನ್ನಿತರ ಬೆಳೆಗಳು ಜಲಾವೃತಗೊಂಡು ಜನ ಜೀವನ ಅಸ್ತವ್ಯಸ್ತವಾಗಿದೆ. ತಾಲ್ಲೂಕಿನ ಬೆಟ್ಟದಪುರ-ಕೊಪ್ಪ ಕುಶಾಲನಗರ ಸಂಪರ್ಕ ರಸ್ತೆ ಜಲಾವೃತಗೊಂಡ ಪರಿಣಾಮ ಮುತ್ತಿನ ಮುಳುಸೋಗೆ ಗ್ರಾಮದ ಬಳಿ ರಸ್ತೆ ಬಂದ್ ಮಾಡಲಾಗಿದೆ.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಭೇಟಿ
ಪಿರಿಯಾಪಟ್ಟಣ ತಾಲ್ಲೂಕಿನಾದ್ಯಂತ ಸತತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೊಪ್ಪ ಗಡಿಭಾಗದ ಕಾವೇರಿ ನದಿ ಪ್ರಾಂತ್ಯದ ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾತನಾಡಿ, ಜಿಲ್ಲೆಯ ವ್ಯಾಪ್ತಿಯಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ, ಕಬಿನಿ, ಲಕ್ಷ÷್ಮಣತೀರ್ಥ, ಕಪಿಲಾ ನದಿಗಳು ಭರ್ತಿಯಾಗಿ ನೂರಾರು ಎಕರೆ ಜಮೀನು ಜಲಾವೃತಗೊಂಡು ತಗ್ಗು ಪ್ರದೇಶಕ್ಕೆ ನೀರು ನುಗ್ಗುತ್ತಿದೆ. ಅಲ್ಲದೇ ಕೆಲವೆಡೆ ಬೆಳೆ ಹಾನಿ, ಪ್ರಾಣ ಹಾನಿಯೂ ನಡೆದಿದೆ. ಇದರ ಬಗ್ಗೆ ಜಿಲ್ಲಾಡಳಿತ ಪ್ರವಾಹದ ಮುನ್ನೆಚ್ಚರಿಕೆ ವಹಿಸಿ, ಯಾವುದೇ ಸಂದರ್ಭ ಬೇಕಾದರೂ ನದಿಗಳ ನೀರಿನ ಮಟ್ಟ ಹೆಚ್ಚಾಗುವ ಮುನ್ಸೂಚ ಎದುರಾಗುವ ಸಂಭವವಿರುವುದರಿAದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ, ಕಳೆದ ಸಾಲಿನಲ್ಲಿನ ನೆರೆ ಹಾವಳಿಗೆ ನದಿ ಪಾತ್ರದ ಗ್ರಾಮಸ್ಥರು ನಲುಗಿದ್ದು, ಈ ಬಾರಿಯೂ ಪ್ರವಾಹದ ಎಲ್ಲಾ ಸೂಚನೆ ಎದುರಾಗಿದೆ. ಜಿಲ್ಲಾಡಳಿತದ ವತಿಯಿಂದ ಪರಿಹಾರ ಹಾಗೂ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಕೊಪ್ಪ ಮಸೀದಿ ರೋಡಿನಲ್ಲಿ ಕೆಲವರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊAಡಿರುವುದನ್ನು ವೀಕ್ಷಿಸಿದ ಜಿಲ್ಲಾಧಿಕಾರಿ, ಇನ್ನೂ ಕೆಲವರು ಅಲ್ಲೇ ಉಳಿದಿದ್ದಾರೆ. ಅವರನ್ನು ಸ್ಥಳಾಂತರಿಸಿ ಎಂದು ತಹಶೀಲ್ದಾರ್ ಶ್ವೇತಾ ಎನ್.ರವೀಂದ್ರ ಅವರಿಗೆ ಸೂಚಿಸಿದ ಅವರು, ಕೊಪ್ಪ ಸುತ್ತಮುತ್ತ ಪ್ರವಾಹ ಎದುರಿಸುತ್ತಿರುವ ಕುಟುಂಬಸ್ಥರು ಕೂಡಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಬೇಕು. ನಿಮಗೆ ಶಾಶ್ವತ ಪರಿಹಾರ ಒದಗಿಸಿಕೊಡಲು ನಾವು ಸಿದ್ದರಿದ್ದೇವೆ. ತಾವು ಮನೆಯಲ್ಲಿರುವ ವಸ್ತುಗಳನ್ನು ಸ್ಥಳಾಂತರ ಮಾಡಿ. ಶಾಸಕರೊಂದಿಗೆ ಚರ್ಚಿಸಿ, ನಿಮಗೆ ಜಾಗ ಗುರುತಿಸಲು ಸಿದ್ಧರಿದ್ದೇವೆ. ನೀವು ಎರಡು ವರ್ಷದಿಂದ ಇದೇ ರೀತಿ ಪುನಃ ಬಂದು, ಅದೇ ಜಾಗದ ಮನೆಗಳಲ್ಲಿ ವಾಸ ಮಾಡುತ್ತಿರುವುದು ಸರಿಯಲ್ಲ ಎಂದರು.
ಬೆಳೆ ಹಾನಿಯ ಬಗ್ಗೆ ಮಾಹಿತಿ ನೀಡಿ
ಪಿರಿಯಾಪಟ್ಟಣ ತಾಲ್ಲೂಕಿನ ಕೊಪ್ಪ ಸೇರಿದಂತೆ ಹಾರನಹಳ್ಳಿ ಹೋಬಳಿ ಸೇರಿದಂತೆ ಇತರೆಡೆಗಳಲ್ಲಿ ಬೆಳೆ ಹಾನಿ ಬಗ್ಗೆ ವರದಿ ನೀಡುವಂತೆ ಸೂಚಿಸಿ, ಅವರ್ತಿ ಮುಖ್ಯರಸ್ತೆ ಮತ್ತು ಗೋಲ್ಡನ್ ಟೆಂಪಲ್ಗೆ ಹೋಗುವ ರಸ್ತೆ ಮತ್ತು ಮುತ್ತಿನ ಮುಳುಸೋಗೆ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ, ಪೊಲೀಸರನ್ನು ನಿಯೋಜಿಸಿ ಎಂದು ಜಿಲ್ಲಾಧಿಕಾರಿ ಆದೇಶಿಸಿದರು.
ಸಂಪೂರ್ಣ ಜಲಾವೃತ
ಪಿರಿಯಾಪಟ್ಟಣ ತಾಲೂಕಿನ ಆವರ್ತಿ ಗ್ರಾಮದ ಎ.ಎಸ್.ರವಿಕುಮಾರ್ ಎಂಬುವವರು ತಮ್ಮ ೫ ಎಕರೆ ಜಮೀನಿನಲ್ಲಿಬೆಳೆದಿದ್ದ ಮುಸುಕಿನ ಜೋಳ ಹಾಗೂ ೩ ಎಕರೆ ಅಡಿಕೆ ತೋಟ ಸಂಪೂರ್ಣ ನೀರಿನಲ್ಲಿ ಮುಳುಗಿದೆ. ಅದೇರೀತಿ ಸೂಳೆಕೋಟೆ, ಹೊನ್ನಾಪುರ, ಕಣಗಾಲು ಗ್ರಾಮದಲ್ಲಿ ಬೆಳೆದಿದ್ದ ಮೆಕ್ಕೆ ಜೋಳ, ಶುಂಠಿ, ತಂಬಾಕು, ಅಡಿಕೆ, ಬಾಳೆ ತೆಂಗು ಸೇರಿದಂತೆ ಇತರೆ ಬೆಳೆಗಳು ನೀರಲ್ಲಿ ಮುಳುಗಿ ಲಕ್ಷಾಂತರ ರೂಪಾಯಿಗಳಷ್ಟು ಬೆಲೆ ಬಾಳುವ ಫಸಲು ಹಾನಿಯಾಗಿದೆ.
ಶಾಸಕ ಕೆ.ಮಹದೇವ್ ಭೇಟಿ
ಪ್ರವಾಹ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಶಾಸಕ ಕೆ.ಮಹದೇವ್ ಭೇಟಿ ನೀಡಿ ಮಾತನಾಡಿದ ಅವರು, ತಗ್ಗು ಪ್ರದೇಶ ಹಾಗೂ ನದಿ ಪ್ರಾತ್ರದಲ್ಲಿ ವಾಸಿಸುವ ಜನರು, ಆಸ್ತಿಪಾಸ್ತಿ ಹಾಗೂ ಜಾನುವಾರುಗಳ ರಕ್ಷಣೆ ಮತ್ತು ಜನರನ್ನು ಸ್ಥಳಾಂತರ, ಪರಿಹಾರ, ಜನರ ಆರೋಗ್ಯ ರಕ್ಷಣೆ ಕುರಿತು ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ನದಿ ಪಾತ್ರದಲ್ಲಿನ ಗ್ರಾಮಗಳ ನಿವಾಸಿಗಳನ್ನು ಸ್ಥಳಾಂತರಗೊಳಿಸಬೇಕು. ಕಾವೇರಿ ನದಿಯ ಪ್ರವಾಹ ದಿನದಿಂದ ದಿನಕ್ಕೆ ಏರುತ್ತಿದ್ದು, ನದಿ ಪಾತ್ರದಲ್ಲಿರುವ ಗ್ರಾಮಗಳಲ್ಲಿ ಅನಾಹುತ ತಪ್ಪಿಸಲು ತಾಲ್ಲೂಕು ಕೇಂದ್ರದಲ್ಲೇ ವಿಪತ್ತು ನಿರ್ವಹಣಾ ತಂಡವನ್ನು ಕಾಯಂ ಆಗಿ ಬೀಡು ಬಿಡುವಂತೆ ಕ್ರಮ ತೆಗೆದುಕೊಳ್ಳಿ’ ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.