ಉಡುಪಿ: ಕರ್ನಾಟಕ ಮತ್ತು ಕೇರಳದ ಗಡಿ ಭಾಗವಾದ ತಲಪಾಡಿಯಿಂದ ಕಾರ್ಮಿಕರನ್ನು ತುಂಬಿಕೊಂಡು ಕಲಬುರ್ಗಿಗೆ ಚಲಿಸುತ್ತಿದ್ದ ಖಾಸಗಿ ಬಸ್ಸನ್ನು ಉಡುಪಿ ಜಿಲ್ಲೆಯ ಗಡಿಭಾಗ ಹೆಜಮಾಡಿಯ ತಪಾಸಣಾ ಕೇಂದ್ರದಲ್ಲಿ ತಡೆಯಲಾಗಿದೆ. ಪೊಲೀಸರು ವಾಹನವನ್ನು ವಾಪಸ್ ತಲಪಾಡಿಗೆ ಕಳುಹಿಸಿದ್ದಾರೆ.
ಗಾರೆ ಕೆಲಸ ನಿರ್ವಹಿಸುತ್ತಿದ್ದ ಛತ್ತೀಸ್ ಗಢ ಮೂಲದ 26 ಜನ ಕಾರ್ಮಿಕರು ಲಾಕ್ ಡೌನ್ ಹಿನ್ನೆಲೆ ತಾಯ್ನಾಡಿಗೆ ತೆರಳಲಾಗದೆ ಅಲ್ಲೇ ಉಳಿದಿದ್ದರು. ಮಂಗಳೂರಿನಲ್ಲಿ ಛತ್ತೀಸ್ ಗಡಕ್ಕೆ ತೆರಳುವ ರೈಲು ವ್ಯವಸ್ಥೆ ಕಾಣದಿರುವುದರಿಂದ ಮಧ್ಯವರ್ತಿಯೊಬ್ಬರ ಸಹಾಯ ಪಡೆದ ಕಾರ್ಮಿಕರೆಲ್ಲರೂ ಇ- ಪಾಸ್ ಪಡೆದು ಕಲಬುರ್ಗಿ ರೈಲು ನಿಲ್ದಾಣದವರೆಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಅಲ್ಲಿಂದ ರೈಲು ಮೂಲಕ ಛತ್ತೀಸ್ ಗಡ್ ಹೋಗುವುದಾಗಿ ಮಂಗಳವಾರ ತಲಪಾಡಿಯಲ್ಲಿ ಖಾಸಗಿ ಬಸ್ಸೊಂದರಲ್ಲಿ ಪ್ರಯಾಣ ಬೆಳೆಸಿದ್ದರು.
ಇಬ್ಬರು ಚಾಲಕರೊಂದಿಗೆ
ಹೆಜಮಾಡಿಯ ಉಡುಪಿ ಗಡಿಭಾಗಕ್ಕೆ ಬಸ್ಸು ಆಗಮಿಸಿದ್ದು, ತಪಾಸಣಾ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ಕಾಪು ಪಿಎಸ್ಐ ರಾಜಶೇಖರ ಸಾಗನೂರು ಚಾಲಕರನ್ನು ವಿಚಾರಿಸಿದರು. ಈ ವೇಳೆ ಕಾರ್ಮಿಕರಲ್ಲಿ ಓರ್ವ ಮಾತನಾಡಿ, ಕಲಬುರ್ಗಿಯಿಂದ ರೈಲಿನಲ್ಲಿ ಹೋಗುವುದಾಗಿ ತಿಳಿಸಿದಾಗ, ಅಲ್ಲಿನ ಪ್ರಸಕ್ತ ಪರಿಸ್ಥಿತಿ ಕುರಿತು ಎಸ್ಸೈ ವಿವರಿಸಿದರು. ಕಲಬುರ್ಗಿಯಲ್ಲಿ ಈಗಾಗಲೇ ಸೀಲ್ ಡೌನ್ ಮಾಡಲಾಗಿದೆ. ನೀವು ಮುಂಗಡ ಟಿಕೇಟ್ ಪಡೆಯದೇ ಕಲಬುರ್ಗಿಯಲ್ಲಿ ಉಳಿಯಲು ಯಾವುದೇ ವ್ಯವಸ್ಥೆಯನ್ನೂ ಮಾಡದೆ, ಏಕಾಏಕಿ ಕಲಬುರ್ಗಿ ಪ್ರವೇಶಿಸಿದರೆ ಸಮಸ್ಯೆಯಲ್ಲಿ ಸಿಲುಕಬೇಕಾದೀತು. ಬಸ್ಸು ನೇರವಾಗಿ ಛತ್ತೀಸ್ ಗಡ್ ಚಲಿಸುವುದೇ ಆದರೆ ಅನುಮತಿ ನೀಡುತ್ತೇವೆ. ಇಲ್ಲವಾದರೆ ಮಂಗಳೂರಿನಿಂದ ರೈಲು ಮೂಲಕ ಹೋಗುವಂತೆ ಮಾಹಿತಿ ನೀಡಿದರು. ಅಂತಿಮವಾಗಿ ಹೆಜಮಾಡಿ ಗಡಿಯಿಂದಲೇ ಬಸ್ಸನ್ನು ವಾಪಸ್ ಕಳುಹಿಸಲಾಯಿತು.