ಹೊಸದಿಗಂತ ವರದಿ,ಬಳ್ಳಾರಿ:
ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ನಾಗರಿಕರು ಗುರುವಾರ ಸಂಭ್ರಮದಿಂದ ಆಚರಿಸಿದರು. ಹಬ್ಬ ಹಿನ್ನೆಲೆ ಮಹಿಳೆಯರು, ಮಕ್ಕಳು, ಮನೆ ಎದುರು ಬಣ್ಣ ಬಣ್ಣದ ರಂಗೋಲಿ ಬಿಡಿಸಿರುವುದು ಕಂಡು ಬಂತು. ಹಂಪಿ ಸೇರಿದಂತೆ ಸಮೀಪದ ತುಂಗಭದ್ರಾ ನದಿಯಲ್ಲಿ ನಾಗರಿಕರು ಪುಣ್ಯಸ್ನಾನ ಮಾಡಿದರು.
ವಿಶೇಷವಾಗಿ ಹಂಪಿ ಕ್ಷೇತ್ರದ ತುಂಗಭದ್ರಾ ನದೀ ತೀರದಲ್ಲಿ ಭಕ್ತರು ಪುಣ್ಯಸ್ನಾನ ಮಾಡಿ ಮಿಂದೆದ್ದರು. ನಗರ ಸೇರಿದಂತೆ ನಾನಾ ಕಡೆಗಳಿಂದ ಬೆಳ್ಳಂ ಬೆಳಿಗ್ಗೆ ಹಂಪಿಗೆ ಆಗಮಿಸಿರುತ್ತಿರುವುದು ಕಂಡು ಬಂತು. ರಾಜ್ಯವಷ್ಟೇ ಅಲ್ಲ ನೆರೆಯ ಆಂಧ್ರಪ್ರದೇಶದ, ತೆಲಂಗಾಣ ರಾಜ್ಯದಿಂದ ಭಕ್ತರು ಆಗಮಿಸಿ ಪುಣ್ಯಸ್ನಾನ ಮಾಡಿ ಭಕ್ತಿಯಿಂ ಮಿಂದೆದ್ದರು. ಜಿಲ್ಲೆಯ ಸಿರಗುಪ್ಪ, ಹಡಗಲಿ, ಕಂಪ್ಲಿ ಸೇರಿದಂತೆ ಜಿಲ್ಲೆಯ ನಾನಾ ಕಡೆ ನದೀ ತೀರದಲ್ಲಿ ಜನರು ಸ್ನಾನ ಮಾಡಿ ದೇವರ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು. ಇದರ ಜೊತೆಗೆ ಕುಟುಂಬದ ಸದಸ್ಯರೊಂದಿಗೆ ಎಳ್ಳು, ಸೇಂಗಾ ಹೋಳಿಗೆ, ಸಜ್ಜಿ ರೊಟ್ಟಿ ಸೇರಿದಂತೆ ನಾನಾ ಭಕ್ಷ ಭೋಜನಗಳೊಂದಿಗೆ ಆಗಮಿಸಿದ ಜನರು ನದಿ ತೀರದಲ್ಲಿ ಕುಳಿತು ಸವಿದರು.
ಹಂಪಿಯ ಪುಣ್ಯ ಕ್ಷೇತ್ರ ಶ್ರೀ ವಿರೂಪಾಕ್ಷೇಶ್ವರ ದೇವರಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ನಂತರ ಪಂಪಾಂಬಿಕೆ ಹಾಗೂ ಭುವನೇಶ್ವರಿ ದೇವಿಯ ದರ್ಶನ ಪಡೆದರು. ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಸಹ ಪುಣ್ಯಸ್ನಾನ ಮಾಡಿ ದೇವರ ದರ್ಶನ ಪಡೆದರು. ಎಲ್ಲ ದೇಗುಲಗಳಲ್ಲಿ ಭಕ್ತರು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು.
ನದಿ ಸ್ನಾನ ಮಾಡುವವರಿಗೆ ಗೃಹರಕ್ಷಕ ದಳದ ಸಿಬ್ಬಂದಿಗಳು ಜಾಗ್ರತೆ ವಹಿಸಬೇಕು ಎಂದು ಎಚ್ಚರಿಸುತ್ತಿರುವ ದೃಶ್ಯ ಕಂಡು ಬಂದಿತು.