ಗದಗ : ರಾಜ್ಯದಲ್ಲಿ ಬಡವರ ಪರ, ರೈತರ ಪರ, ಗೇಣಿದಾರರ ಪರ ಜಾರಿಗೊಳಿಸಲಾಗಿದ್ದ ಭೂಸುಧಾರಣೆ ಕಲಂ ೬೩, ಕಲಂ ೭೯ ಎಬಿಸಿ ಮತ್ತು ಕಲಂ ೮೦ಕ್ಕೆ ತಿದ್ದುಪಡೆಯನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೊಳಿಸುತ್ತಿರುವ ಸರಕಾರ ರೈತರ ಹಾಗೂ ಬಡವರಿಗೆ ಅನ್ಯಾಯ ಮಾಡಲು ಮುಂದಾಗಿರುವುದು ಖಂಡನೀಯ ಎಂದು ಮಾಜಿ ಶಾಸಕ ಡಿ.ಆರ್.ಪಾಟೀಲ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ದೇಶದಲ್ಲಿಯೇ ಭೂಸುಧಾರಣೆ ಒಂದು ಕ್ರಾಂತಿಕಾರಕ ಕ್ರಮವಾಗಿದೆ. ಮಾಜಿ ಪ್ರದಾನಿ ದಿ. ಇಂದಿರಾಗಾಂದಿ ಅವರಿಗೆ ಅತ್ಯಂತ ಪ್ರಿಯವಾಗಿದ್ದ ಭೂಸುಧಾರಣಾ ಕಾರ್ಯಕ್ರಮವನ್ನು ನಮ್ಮ ರಾಜ್ಯದಲ್ಲಿ ದೇವರಾಜ ಅರಸು ಅವರ ಸರಕಾರ ಗೇಣಿದಾರರೇ ಭೂಮಾಲಿಕರಾಗಲು ಅನುಕೂಲ ಮಾಡಿದರು. ಆದರೆ. ಈಗ ಊಳುವವನ ಆಧಾರವಾಗಿರುವ ಭೂಮಿಯನ್ನು ಕಸಿದುಕೊಳ್ಳಲು ಶ್ರೀಮಂತರಿಗೆ, ಕೈಗಾರಿಕೆಯವರಿಗೆ, ರಿಯಲ್ಎಸ್ಟೆಟ್ ದಂದೆ ಮಾಡುವವರಿಗೆ ಅನುಕೂಲ ಕಲ್ಪಿಸಲು ರಾಜ್ಯ ಸರಕಾರ ಸುಗ್ರಿವಾಜ್ಞೇ ಮೂಲಕ ರೈತರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡುತ್ತಿದೆ. ಇದರಿಂದ ರೈತರಲ್ಲದ ಭೂಮಾಪಿಯಾ ದೊರೆಗಳು ಭೂ ಖರೀದಿಸಲು ಅನುಕೂಲ ಕಲ್ಪಿಸಲಾಗಿದೆ ಎಂದು ವಿಷಾದ ವ್ಯಕ್ತ ಪಡೆಸಿದರು.
ರಾಜ್ಯದಲ್ಲಿ ಚುನಾಯಿತ ಎಪಿಎಂಸಿ ಅಧಿಕಾರ ಮೊಟಕುಗೊಳಿಸುವ ರೈತರನ್ನು ಬಂಡವಾಳಶಾಹಿಗಳ ಕೈಗೊಂಬೆಯನ್ನಾಗಿ ಮಾಡುವ ಕಾನೂನನ್ನು ಸಹ ಸುಗ್ರಿವಾಜ್ಞೆ ಮೂಲಕ ಮಾಡಿದ ಸರಕಾರ ಪಂಚಾಯತಗಳಿಗೆ ನಡೆಸಬೇಕಾಗಿದ್ದ ಚುನಾವಣೆಗಳನ್ನು ಸಹ ಮುಂದೂಡಿ ಆಜ್ಞೆ ಹೊರಡಿಸಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಹುನ್ನಾರ ನಡೆಸಿದೆ. ಇದು ರಾಜ್ಯಕ್ಕೆ ಮಾಡುವ ವ್ಯವಸ್ಥಿತ ದ್ರೋಹವಾಗಿದೆ. ಯಾವುದೇ ಜನಪ್ರತಿನಿಧಿಗಳ ಸಭೆಗಳಲ್ಲಿ ವಿವರವಾಗಿ ಚರ್ಚಿಸಿ ತೀರ್ಮಾನ ಮಾಡದೆ ಅವುಗಳನ್ನು ಯಾವುದೇ ಚರ್ಚೆಗೆ ಅವಕಾಶ ನೀಡದೆ ಕೋವಿಡ್-೧೯ ಹರಡುತ್ತಿರುವ ಈ ಸಂದರ್ಭದ ದುರ್ಲಾಭ ಪಡೆದು ಚಳುವಳಿ, ಹೋರಾಟ ನಡೆಯದಂತೆ ಮಾಡುವುದು ಸರಕಾರದ ಹೇಯ ಕೃತ್ಯವಾಗಿದೆ ಎಂದು ಮಾಜಿ ಶಾಸಕ ಡಿ.ಆರ್.ಪಾಟೀಲ ಆರೋಪಿಸಿದರು.
ಈ ಸಂದರ್ಭದಲ್ಲಿ ಜಿ.ಕೆ.ಜಮಾದಾರ, ಗುರಣ್ಣ ಬಳಗಾನೂರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.