Sunday, June 26, 2022

Latest Posts

ಗದಗ| ಹೊರರಾಜ್ಯದಿಂದ ಬಂದವರಿಂದ ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಸೋಂಕು: ಸಿ.ಸಿ.ಪಾಟೀಲ

ಗದಗ : ಜಿಲ್ಲೆಯಲ್ಲಿ ಇದುವರೆಗೆ ೪೯ ಕೊರೋನಾ ಪ್ರಕರಣಗಳು ದೃಢಪಟ್ಟಿದ್ದು ಆ ಪೈಕಿ ೨೯ ಪ್ರಕರಣಗಳು ಹೊರರಾಜ್ಯದಿಂದ ಬಂದವರಾಗಿರುತ್ತಾರೆ. ೩೩ ಸೋಂಕಿತರು ಈಗಾಗಲೇ ಗುಣಮುಖರಾಗಿರುತ್ತಾರೆ. ೮ ಜನರಿಗೆ ಕೋವಿಡ್-೧೯ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು ಹೇಳಿದರು.
ಸ್ಥಳೀಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಪತ್ರಿಕಾಗೋಷ್ಟಿಯಲ್ಲಿ ಅವರು ಅವರು ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ ಒಟ್ಟು ೧೩,೩೩೩ ಜನರನ್ನು ಹೋಮ್ ಕ್ವಾರಂಟೈನ್‌ನಲ್ಲಿ ಹಾಗೂ ೨೩೭ ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೯ ನಿಯಂತ್ರಿತ ಪ್ರದೇಶಗಳ ಪೈಕಿ ರಂಗನವಾಡಾ ಪ್ರದೇಶ ಹಾಗೂ ರೋಣ ತಾಲೂಕಿನ ಕೃಷ್ಣಾಪುರ ಪ್ರದೇಶಗಳನ್ನು ನಿಯಂತ್ರಿತ ಪ್ರದೇಶಗಳೆಂದು ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲಾಗಿದ್ದು ಅವುಗಳು ಈಗ ಸಾಮಾನ್ಯ ಪ್ರದೇಶಗಳಾಗಿ ಮಾರ್ಪಟ್ಟಿವೆ. ಈಗ ಜಿಲ್ಲೆಯಲ್ಲಿ ೭ ನಿಯಂತ್ರಿತ ಪ್ರದೇಶಗಳು ಸಕ್ರಿಯವಾಗಿವೆ. ನಿಯಂತ್ರಿತ ಪ್ರದೇಶಗಳಲ್ಲಿನ ೧,೫೩೬ ಜನರ ಆರೋಗ್ಯ ತಪಾಸಣೆಯನ್ನು ನಡೆಸಲಾಗಿದೆ. ೭೭೭ ವಿವಿದ ರಾಜ್ಯಗಳಲ್ಲಿನ ವಲಸಿಗರನ್ನು ಹುಬ್ಬಳ್ಳಿಯ ರೈಲು ನಿಲ್ದಾಣದವರೆಗೆ ಉಚಿತವಾಗಿ ಕಳುಹಿಸಿಕೊಡಲಾಗಿದೆ. ಇದರಲ್ಲಿ ೪೪೬ ಜನ ವಲಸೆ ಕಾರ್ಮಿಕರಿದ್ದಾರೆ. ೪೮೬೭ ಜನರು ಗೋವಾ ರಾಜ್ಯದಿಂದ ವಲಸೆ ಬಂದವರಿದ್ದಾರೆ. ೪೩೨ ಜನರು ಮಹಾರಾಷ್ಟ್ರದಿಂದ ಗದಗ ರೈಲು ನಿಲ್ದಾಣಕ್ಕೆ ಆಗಮಿಸಿದ್ದು ಇದರಲ್ಲಿ ೧೯೯ ಜನ ಗದಗ ಜಿಲ್ಲೆಯವರಾಗಿದ್ದು ಅವರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಿಸಿ ಅವರ ಗಂಟಲು ದ್ರವ ಪರೀಕ್ಷೆ ಜರುಗಿಸಲಾಗಿದೆ ಎಂದು ಹೇಳಿದರು.
ಕೋವಿಡ್ -೧೯ ನಿಯಂತ್ರಣದ ನಿಮಿತ್ಯ ಹಟ್ಟಿ ಗೋಲ್ಡ್ ಮೈನ್ಸ್ ಲಿಮಿಟೆಡ್‌ನಿಂದ ಸಾವಿರ ಆಹಾರ ಕಿಟ್‌ಗಳನ್ನು ಜಿಲ್ಲಾಡಳಿತಕ್ಕೆ ನೀಡಲಾಗಿದ್ದು ಜಿಲ್ಲೆಯ ನಿಯಂತ್ರಿತ ಪ್ರದೇಶಗಳಲ್ಲಿನ ಜನರಿಗೆ ಆಹಾರ ಕಿಟ್‌ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ ಸಚಿವರು ಜಿಲ್ಲೆಯಲ್ಲಿ ವಿವಿಧ ಭಾಗಗಳಲ್ಲಿ ಮಳೆಯಾಗಿದ್ದು, ಹೆಸರು ಬೀಜದ ದಾಸ್ತಾನು ಸಾಕಷ್ಟಿದೆ. ಬಿತ್ತನೆ ಬೀಜದ ಬೇಡಿಕೆಯಿದ್ದು ರೈತರಿಗೆ ವಿತರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದ ರೋಣ ಶಾಸಕ ಕಳಕಪ್ಪ ಬಂಡಿ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಎಂ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಯತೀಶ್ ಎನ್., ಜಿಲ್ಲಾ ಪಂಚಾಯತ್ ಸಿಇಒ ಡಾ. ಆನಂದ್ ಕೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss