-ಸುರೇಶ್ ಡಿ. ಪಳ್ಳಿ
ಮಂಗಳೂರು: ಝೊಮೊಟೋ ಫುಡ್ ಡೆಲಿವರಿ ಬಾಯ್ ಈಗ ಚಿತ್ರವೊಂದರ ನಿರ್ಮಾಪಕ! ಇದ್ಯಾವುದೋ ಸಿನೆಮಾದ ಕಥೆಯಲ್ಲ, ರಿಯಲ್ ಕಥೆ. ಓದು, ಫುಡ್ ಡೆಲಿವರಿ ಕೆಲಸ, ಅದರ ನಡುವೆ ಸಿನೆಮಾ ಕೆಲಸ…ಹೀಗೆ ಸದಾ ಬ್ಯುಸಿಯಾಗಿರುವ ಚುರುಕು ನಡೆಯ ಈ ಹುಡುಗ ವಿದ್ಯಾರ್ಥಿ ಗುಂಪಿನಲ್ಲಿ ಸ್ವಲ್ಪ ಡಿಫರೆಂಟ್ ಆಗಿ ಕಾಣುತ್ತಾರೆ.
ಹೆಸರು ಹರ್ಷಿತ್. ಉಳ್ಳಾಲ ಸಮೀಪದ ಸೋಮೇಶ್ವರ ನಿವಾಸಿಯಾಗಿರುವ ಇವರು ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುವುದರೊಂದಿಗೆ ಟೆಲಿ ಚಿತ್ರ ನಿರ್ಮಿಸಿ ಸೈ ಎನಿಸಿಕೊಂಡಿದ್ದಾರೆ. ಅವರೇ ನಿರ್ಮಿಸಿರುವ ‘ಗರ್ವ’ ಟೆಲಿಚಿತ್ರ ಮಾ.15ರಂದು ಮಂಗಳೂರಿನ ಪುರಭವನದಲ್ಲಿ ತೆರೆ ಕಾಣಲು ಸಜ್ಜಾಗಿದೆ.
ಕಲಿಕೆಯೊಂದಿಗೆ ಗಳಿಕೆ!: ವಿನೂತನ ಚಿತ್ರ ನಿರ್ಮಾಣದ ಕನಸು ಹೊತ್ತಿರುವ ಹರ್ಷಿತ್ ಸೋಮೇಶ್ವರ, ಮಂಗಳೂರು ರಥಬೀದಿಯಲ್ಲಿರುವ ಡಾ.ಪಿ.ದಯಾನಂದ ಪೈ ಸತೀಶ ಪೈ ಸರಕಾರಿ ಕಾಲೇಜಿನ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿ. ಮುಂಜಾನೆಯಿಂದ 9 ಗಂಟೆಯವರೆಗೆ ಝೊಮೆಟೋ ಫುಡ್ ಡೆಲಿವರಿಯಲ್ಲಿ ತೊಡಗಿಸಿಕೊಳ್ಳುವ ಇವರು ಬಳಿಕ ಕಾಲೇಜಿಗೆ ತೆರಳುತ್ತಾರೆ. ಸಂಜೆ ತರಗತಿಗಳು ಮುಗಿಯುತ್ತಿದ್ದಂತೆ ಮತ್ತದೇ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ರಾತ್ರಿ 11 ಗಂಟೆಯವರೆಗೂ ಇದೇ ಕೆಲಸ. ಈ ನಡುವೆ ಒಂದಷ್ಟು ಸಮಯವನ್ನು ತನ್ನ ಆಸಕ್ತಿಯ ಸಿನಿಮಾ ಕ್ಷೇತ್ರಕ್ಕಾಗಿ ಮೀಸಲಿಡುತ್ತಿದ್ದಾರೆ.
ಸಮಾಜದಿಂದ ಹೆಚ್ಚಿನ ಪ್ರೋತ್ಸಾಹ ದೊರೆತರೆ ಉತ್ತಮ ಸಿನಿಮಾಗಳನ್ನು ಮಾಡಲು ಸಹಾಯವಾಗುತ್ತದೆ ಎನ್ನುವ ಕನಸು ಕಂಗಳ ಈ ಯುವಕನ ಮೊಗದಲ್ಲಿ ಸಿನಿಮಾ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಅದಮ್ಯ ಉತ್ಸಾಹ ಎದ್ದು ಕಾಣುತ್ತದೆ. ಎರಡು ವರ್ಷಗಳ ಹಿಂದೆ ‘ತುಳುನಾಡ ಕಂಬಳ’ಎನ್ನುವ ಟೆಲಿ ಚಿತ್ರದೊಂದಿಗೆ ಮನೆ ಮಾತಾದ ಹರ್ಷಿತ್ ‘ಪಮ್ಮಣ್ಣ ದಿ ಗ್ರೇಟ್’ ಮತ್ತು ‘ಪ್ರೊಡಕ್ಷನ್ ನಂಬರ್ ವನ್’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ‘ತುಳುನಾಡ ಕಂಬಳ’ ಟೆಲಿಚಿತ್ರ ಮಂಗಳೂರಿನ ಗ್ರಾಮಾಂತರ ಪ್ರದೇಶದ 30ಕ್ಕೂ ಅಧಿಕ ಶಾಲೆಗಳಲ್ಲಿ ತೆರೆಕಂಡು ಪ್ರಶಂಸೆಗೆ ಪಾತ್ರವಾಗಿತ್ತು. ಅದೇ ಉತ್ಸಾಹದಲ್ಲಿ ಒಂದೂವರೆ ವರ್ಷದಿಂದ ಶ್ರಮಪಟ್ಟು ಇದೀಗ ‘ಗರ್ವ’ ಟೈಟಲ್ನ ಟೆಲಿಚಿತ್ರ ನಿರ್ಮಿಸಿದ್ದಾರೆ.
‘ಗರ್ವ’ದಲ್ಲಿ ನೂರಕ್ಕೂ ಅಧಿಕ ಕಲಾವಿದರು ‘ಮೊದಲ ಬಾರಿಗೆ 100ಕ್ಕೂ ಹೆಚ್ಚು ಕಲಾವಿದರನ್ನು ಸೇರಿಸಿಕೊಂಡು ಒಂದೂಕಾಲು ಗಂಟೆಯ ಟೆಲಿಚಿತ್ರ ನಿರ್ಮಿಸಲಾಗಿದೆ. ಮಂಗಳೂರಿನ ಭೂಗತ ಜಗತ್ತು, ಲ್ಯಾಂಡ್ ಮಾಫಿಯಾವನ್ನೊಳ ಗೊಂಡಂತೆ ಕಥೆ ಹೆಣೆಯಲಾಗಿದೆ.ಜನತೆ ಮೆಚ್ಚಿ ಆಶೀರ್ವದಿಸುತ್ತಾರೆ ಎಂಬ ವಿಶ್ವಾಸವಿದೆ’ ಎನ್ನುತ್ತಾರೆ ಹರ್ಷಿತ್.
ಈ ಚಿತ್ರದಲ್ಲಿ ಸಾಯಿದೀಕ್ಷಿತ್ ಪುತ್ತೂರು ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಸಂಜು ಗುರುಪುರ, ಆಶಿಕ್ ಗೋಪಾಲಕೃಷ್ಣ, ಸಂದೀಪ್ ಸೋಮೇಶ್ವರ, ದೀಪಕ್ ದಾಸ್, ಕಿರಣ್ ಕೊಲ್ಯ, ಲಕ್ಷ್ಮಿತ ಸೋಮೇಶ್ವರ, ಮೋನೀಶ್ ಕುಮಾರ್ ಪಾವೂರು ಹೀಗೆ ತುಳುನಾಡಿನ ಅನೇಕ ಕಲಾವಿದರು ಈ ಚಿತ್ರದಲ್ಲಿದ್ದಾರೆ. ಇಡೀ ಟೆಲಿಚಿತ್ರಕ್ಕೆ ಪೃಥ್ವಿ ಅಂಬರ್ ಧ್ವನಿ ನೀಡಿದ್ದಾರೆ. ನಿಖಿಲ್ ಛೋಪ್ರಾ ಕ್ಯಾಮೆರಾದ ಮೂಲಕ ತಮ್ಮ ಕೈಚಳಕ ಪ್ರದರ್ಶಿಸಿದ್ದಾರೆ. ಜಯರಾಜ್ ಎಡಿಟಿಂಗ್ ವಿಭಾಗದಲ್ಲಿ ಸಾಥ್ ನೀಡಿದ್ದಾರೆ.
ಕನಸು ಕೈಗೂಡುತ್ತಿದೆ: ಚಿಕ್ಕಂದಿನಲ್ಲಿಯೇ ಸಿನಿಮಾ ಕ್ಷೇತ್ರವೆಂದರೆ ವಿಶೇಷ ಆಸಕ್ತಿ. ಈ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ತುಡಿತವಿತ್ತು. ಇದೀಗ ತನ್ನ ಕನಸುಗಳು ಕೈಗೂಡುತ್ತಿವೆ. ಝೊಮೊಟೋ ಫುಡ್ ಡೆಲಿವರಿಯಿಂದ ಬಂದ ಹಣವನ್ನು ಚಿತ್ರ ನಿರ್ಮಾಣಕ್ಕಾಗಿ ಬಳಸಿಕೊಳ್ಳುತ್ತಿದ್ದೇನೆ. ನನ್ನ ಕನಸಿಗೆ ಊರವರು ಮತ್ತು ಸ್ನೇಹಿತರ ಪೂರ್ಣ ಸಹಕಾರ ನೀಡುತ್ತಿರುವುದು ನನ್ನ ಕನಸಿಗೆ ಬಲ ನೀಡಿದೆ. ಇನ್ನಷ್ಟು ಚಿತ್ರಗಳನ್ನು ನಿರ್ಮಿಸಬೇಕೆಂಬ ಕನಸಿದೆ. ಮಾರ್ಚ್ 15 ರಂದು ತೆರೆ ಕಾಣುತ್ತಿರುವ ‘ಗರ್ವ’ ಟೆಲಿಫಿಲ್ಮ್ಗೂ ಜನತೆಯಿಂದ ಉತ್ತಮ ಸಹಕಾರ ದೊರೆಯುವ ನಿರೀಕ್ಷೆಯಿದೆ.
-ಹರ್ಷಿತ್ ಸೋಮೇಶ್ವರ