Thursday, August 11, 2022

Latest Posts

ಗಲ್ಫ್ ರಾಷ್ಟ್ರಗಳಿಂದ ಉಡುಪಿ ಜಿಲ್ಲೆಗೆ ಆಗಮಿಸಿದ 49 ಜನ ಅಂತಾರಾಷ್ಟ್ರೀಯ ಪ್ರಯಾಣಿಕರು

ಉಡುಪಿ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ರಾತ್ರಿ 7.55ಕ್ಕೆ ಬಂದಿಳಿದ ವಿಮಾನದಲ್ಲಿ ದುಬೈ ಸಹಿತ ಗಲ್ಫ್ ರಾಷ್ಟ್ರಗಳಿಂದ 49 ಮಂದಿ ಅಂತಾರಾಷ್ಟ್ರೀಯ ಪ್ರಯಾಣಿಕರು ಉಡುಪಿ ಜಿಲ್ಲೆಗೆ ಆಗಮಿಸಿದ್ದಾರೆ.

ವಂದೇ ಭಾರತ್ ಮಿಷನ್ ಅಡಿಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ಆಗಮಿಸಿದ ಎರಡನೇ ವಿಮಾನದಲ್ಲಿ ಉಡುಪಿ ಜಿಲ್ಲೆಯ ಪ್ರಯಾಣಿಕರು ಕೇಂದ್ರ ಹಾಗೂ ರಾಜ್ಯ ಆರೋಗ್ಯ ಇಲಾಖೆಯ ನಿಯಮಗಳಂತೆ ಅವರೆಲ್ಲರೂ ತಮ್ಮದೇ ಸ್ವಂತ ಖರ್ಚಿನಲ್ಲಿ ದಿಗ್ಬಂಧನಕ್ಕೆ ಒಳಪಡುವ ಷರತ್ತಿಗೆ ಒಪ್ಪಿಕೊಂಡು ಬಂದಿದ್ದಾರೆ. ಮೊದಲು ಜಿಲ್ಲೆಯ 39 ಮಂದಿ ಟಿಕೆಟ್ ಮಾಡಿದ್ದು, ನಂತರ 10 ಮಂದಿ ಸೇರಿಕೊಂಡಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಇಮಿಗ್ರೆಷನ್ ಪ್ರಕ್ರಿಯೆ ಮುಗಿಸಿ ಎಲ್ಲರ ಆರೋಗ್ಯ ತಪಾಸಣೆ ನಡೆಸಿ, ಕೈಗೆ ಮೊಹರು ಹಾಕಲಾಯಿತು. ಇದೇ ವೇಳೆ ಎಲ್ಲ 49 ಮಂದಿ ಪ್ರಯಾಣಿಕರ ಗಂಟಲ ದ್ರವ ಮಾದರಿಯನ್ನು ಪಡೆಯಲಾಯಿತು. ಬಳಿಕ ವಿಮಾನ ನಿಲ್ದಾಣದಿಂದ ಎರಡು ಕೆ.ಎಸ್.ಆರ್.ಟಿ.ಸಿ. ಬಸ್ಸುಗಳಲ್ಲಿ ಪೊಲೀಸ್ ಬೆಂಗಾವಲಿನೊಂದಿಗೆ ಉಡುಪಿಗೆ ಕರೆ ತರಲಾಯಿತು. ಉಡುಪಿಯ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ತೆರೆದಿರುವ ರಿಸಿವಿಂಗ್ ಪಾಯಿಂಟ್‌ಗೆ ಬಂದ ಎಲ್ಲರ ನೋಂದಣಿ ಮಾಡಿಸಿ, ಅದೇ ಬಸ್ಸುಗಳಲ್ಲಿ ದಿಗ್ಬಂಧನಕ್ಕೊಳಪಡುವ ನಿರ್ದಿಷ್ಟ ಲಾಡ್ಜ್ ಮತ್ತು ಹಾಸ್ಟೆಲ್‌ಗಳಿಗೆ ಕರೆದೊಯ್ಯಲಾಯಿತು.

ಉಡುಪಿ ಜಿಲ್ಲೆಗೆ ಆಗಮಿಸಿದ ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಮಕ್ಕಳು, ಮಹಿಳೆಯರು, ಗರ್ಭಿಣಿಯರು, ವೃದ್ಧರು ಕೂಡ ಸೇರಿದ್ದಾರೆ. ಈ ಪೈಕಿ ಉಡುಪಿ ತಾಲೂಕಿನ 18, ಬ್ರಹ್ಮಾವರ ತಾಲೂಕಿನ 8, ಕುಂದಾಪುರ ತಾಲೂಕಿನ 7, ಕಾಪು ತಾಲೂಕಿನ 5, ಕಾರ್ಕಳ ತಾಲೂಕಿನ 6 ಬೈಂದೂರು ಮತ್ತು ಹೆಬ್ರಿ ತಾಲೂಕಿನ ತಲಾ ಇಬ್ಬರು ಪ್ರಯಾಣಿಕರಿದ್ದಾರೆ. ಈ ಪೈಕಿ ಮೂವರು ಸರಕಾರಿ ದಿಗ್ಬಂಧನ ಮತ್ತು ಉಳಿದ 45 ಮಂದಿ ನಿರ್ದಿಷ್ಟ ಲಾಡ್ಜ್‌ಗಳಲ್ಲಿ ದಿಗ್ಬಂಧನಕ್ಕೊಳಪಟ್ಟಿದ್ದಾರೆ.

ಬೋರ್ಡ್ ಹೈಸ್ಕೂಲ್‌ನ ಕೇಂದ್ರದಲ್ಲಿ ನೋಡೆಲ್ ಅಧಿಕಾರಿ ಕುಂದಾಪುರ ಭೂ ದಾಖಲೆಗಳ ಸಹಾಯಕ ನಿರ್ದೇಶಕ ರವೀಂದ್ರ ಅವರ ಮಾರ್ಗದರ್ಶನದಲ್ಲಿ ಕಂದಾಯ ಮತ್ತು ಸರ್ವೇ ಇಲಾಖಾ ಸಿಬ್ಬಂದಿ, ಎಲ್ಲ ಪ್ರಯಾಣಿಕರ ನೋಂದಣಿ ಮಾಡಿಸಿಕೊಂಡು, ದಿಗ್ಬಂಧನದ ವೇಳೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಇಂದಿನಿಂದ ಪ್ರತಿನಿತ್ಯ ಆರೋಗ್ಯ ಇಲಾಖೆಯ ವೈದ್ಯರು ಈ ಅಂತಾರಾಷ್ಟ್ರೀಯ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸುತ್ತಾರೆ. ಎಲ್ಲರ ಆರೋಗ್ಯದ ಮೇಲೆ ನಿಗಾ ಇಡಲಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss