Wednesday, August 17, 2022

Latest Posts

ಗಾಂಧಿ ಹೆಸರಿನಲ್ಲಿ ದೇಶದ ಜನರ ಭಾವನೆಗಳ ಜೊತೆ ಕಾಂಗ್ರೆಸ್ ಚೆಲ್ಲಾಟ: ಕಲ್ಮರುಡಪ್ಪ ಆರೋಪ

ಹೊಸ ದಿಗಂತ ವರದಿ, ಚಿಕ್ಕಮಗಳೂರು

ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಬಂದಾಗಿನಿಂದಲೂ ಗಾಂಧಿ ಹೆಸರಿನಲ್ಲಿ ದೇಶದ ಜನರ ಭಾವನೆಗಳ ಜೊತೆ ಚಲ್ಲಾಟವಾಡುತ್ತಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಚ್.ಸಿ.ಕಲ್ಮರುಡಪ್ಪ ಆರೋಪಿಸಿದರು.
ಅವರು ಶುಕ್ರವಾರ ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಆರಂಭಗೊಂಡ ಎರಡು ದಿನಗಳ ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಪದಾಧಿಕಾರಿಗಳ ಪ್ರಶಿಕ್ಷಣಾ ವರ್ಗದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನನಾಯಕನಾಗಬೇಕಾದರೆ ಅವರು ಜನಸಾಮಾನ್ಯರ ಒಡನಾಟದಿಂದ ಅವರ ಪ್ರೀತಿ, ವಿಶ್ವಾಸಕ್ಕೆ ಪಾತ್ರನಾಗಬೇಕು. ಆದರೆ ಸ್ವಾತಂತ್ರ್ಯ ಬಂದ ಆರಂಭದಿಂದಲೂ ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಅನೇಕ ತಪ್ಪು ಸಂದೇಶಗಳನ್ನು ನೀಡುತ್ತಾ ಬಂದಿದೆ. ಇಂದಿರಾ ಗಾಂಧಿಗೂ ಗಾಂಧಿ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ. ಆದರೂ ಗಾಂಧಿ ಹೆಸರಿನಲ್ಲಿ ಇಂದಿರಾ ಪ್ರಧಾನಿಯಾಗುತ್ತಾರೆ. ಜನಸಾಮಾನ್ಯರ ಸಂಪರ್ಕವಿಲ್ಲದೆ, ಅವರ ಕಷ್ಟ ಸುಖ ಗೊತ್ತಿಲ್ಲದಿದ್ದರೂ ಅವರು ಪ್ರಧಾನಿಯಾಗುತ್ತಾರೆ. ಅವರಿಗಿದ್ದ ಅರ್ಹತೆ ಕೇವಲ ನೆಹರೂ ಅವರ ಮಗಳು ಎನ್ನುವುದು ಮಾತ್ರ ಎಂದರು.
ಹೀಗೆ ಅವರ ವಂಶಪಾರಂಪರ್ಯ ಆಡಳಿತ ನಡೆಯುತ್ತ ಬರುತ್ತದೆ. ಇಂದು ಅದು ರಾಹುಲ್ ಗಾಂಧಿ ವರೆಗೆ ಬಂದು ನಿಂತಿದೆ. ಅವರಿಗೂ ಈ ದೇಶದ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಅರಿವಿಲ್ಲ. ಹೀಗೆ ಕಾಂಗ್ರೆಸ್ ಪಕ್ಷ ಈ ದೇಶವನ್ನು ತಪ್ಪುದಾರಿಗೆಳೆಯುತ್ತಲೇ ಬಂದಿದೆ ಎಂದು ದೂರಿದರು.
ಆದರೆ ಬಿಜೆಪಿಗೆ ದೇಶ ಮೊದಲು, ಪಕ್ಷ ನಂತರ, ವ್ಯಕ್ತಿ ಕೊನೆ ಎನ್ನುವುದು ಸಿದ್ಧಾಂತ, ಜನಸಂಘದಿಂದಲೂ ದೇಶನಿಷ್ಠೆ ಹೊಂದಿದ ಪಕ್ಷ ನಮ್ಮದು. ಪಂಡಿತ್ ದೀನ್ ದಯಾಳ್ ಮತ್ತು ಶ್ಯಾಂಪ್ರಕಾಶ್ ಮುಖರ್ಜಿ ಅವರು ನೀಡಿರುವ ವೈಚಾರಿಕ ದೃಷ್ಟಿಕೋನದಲ್ಲಿ ನಾವೆಲ್ಲರೂ ಕೆಲಸ ಮಾಡಬೇಕಾಗುತ್ತದೆ ಎಂದರು.
ಪಕ್ಷ ನಮಗೆ ವಿವಿಧ ಜವಾಬ್ದಾರಿಗಳನ್ನು ನೀಡಿದೆ. ನಾವು ಅದನ್ನು ಜನರ ನಡುವೆ ಕೊಂಡೊಯ್ದು ಅಲ್ಲಿ ಜನನಾಯಕರಾಗಿ ಬೆಳೆಯಬೇಕು. ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಆಗದೆ ಇದ್ದಿದ್ದರೆ ನಮ್ಮ ಮುಂದಿನ ಯುವ ಪೀಳಿಗೆಗೆ ಈ ದೇಶದ ಬಗ್ಗೆ ಕಲ್ಪನೆ ಮತ್ತು ಜವಾಬ್ದಾರಿಯ ಅರಿವು ಅಷ್ಟರ ಮಟ್ಟಿಗೆ ಇರುತ್ತಿರಲಿಲ್ಲ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿ.ಪಂ.ಉಪಾಧ್ಯಕ್ಷ ಬಿ.ಜಿ.ಸೋಮಶೇಖರ್ ಮಾತನಾಡಿ, ಬಿಜೆಪಿ ಹಳ್ಳಿಯಿಂದ ದಿಲ್ಲಿವರೆಗೆ ಪಕ್ಷ ಎಲ್ಲ ಕ್ಷೇತ್ರದಲ್ಲೂ ಬೆಳೆದು ನಿಂತಿದೆ. ಇಂತಹ ಸಂದರ್ಭದಲ್ಲಿ ತತ್ವ ಮತ್ತು ಆದರ್ಶವನ್ನು ಮರೆಯದೆ ಕೆಲಸ ಮಾಡಬೇಕು. ಅದನ್ನು ಮರೆತರೆ ಪಕ್ಷಕ್ಕೆ ಮುಂದೆ ಭವಿಷ್ಯ ಇರುವುದಿಲ್ಲ ಎಂದರು.
ಪಕ್ಷಕ್ಕೆ ಕಾರ್ಯಕರ್ತನಾಗಿ ಬರುವ ಮುನ್ನ ನಾವು ಏನಾಗಿದ್ದೆವು. ನಂತರ ಪಕ್ಷ ಏನೆಲ್ಲಾ ಜವಾಬ್ದಾರಿಗಳನ್ನು ನಮಗೆ ನೀಡಿದೆ ಎನ್ನುವುದನ್ನು ಅವಲೊಕಿಸಿಕೊಳ್ಳಬೇಕಾಗುತ್ತದೆ. ಹಿಂದೆ ಕೇವಲ ಗ್ರಾ.ಪಂ.ಚುನಾವಣೆಗೆ ಸ್ಪರ್ಧಿಸಲು ನಮ್ಮ ಬಳಿ ಅಭ್ಯರ್ಥಿ ಇರುತ್ತಿರಲಿಲ್ಲ. ಇದು ನಗರಪ್ರದೇಶಕ್ಕೆ ಮಾತ್ರ ಪಕ್ಷ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ಹಳ್ಳಿಗಾಡಿನಲ್ಲಿ ಬೇರುಮಟ್ಟದಲ್ಲಿ ಈ ಪಕ್ಷದ ಅಸ್ತಿತ್ವವೇ ಇಲ್ಲ ಎನ್ನುತ್ತಿದ್ದರು. ಅದನ್ನು ಇಷ್ಟು ಎತ್ತರಕ್ಕೆ ಬೆಳೆಯಲು ಯಾರೆಲ್ಲ ಕಷ್ಟ ಪಟ್ಟಿದ್ದಾರೆ. ಅದನ್ನು ಹೇಗೆ ಉಳಿಸಿಕೊಳ್ಳಬೇಕು ಎನ್ನುವುದನ್ನು ತಿಳಿದುಕೊಳ್ಳುವ ಸಲುವಾಗಿ ಈ ಪ್ರಶಿಕ್ಷಾ ವರ್ಗ ಆಯೋಜಿಸಲಾಗಿದೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ದೇವರಾಜ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಿಜೆಪಿ ಇಂದು ಪ್ರಪಂಚದ ಅತಿದೊಡ್ಡ ಏಕೈಕ ಪಕ್ಷವಾಗಿ ಬೆಳೆದು ನಿಲ್ಲಲು ಈ ರೀತಿಯ ಸಣ್ಣ ಸಣ್ಣ ಪ್ರಶಿಕ್ಷಾ ವರ್ಗಗಳು ಕಾರಣ. ಬಿಜೆಪಿ ಸುಮ್ಮನೆ ಅಧಿಕಾರಕ್ಕಾಗಿ ಹುಟ್ಟಿದ ಪಕ್ಷವಲ್ಲ, ಜನಸಂಘದಿಂದ ಬಿಜೆಪಿ ಉದಯವಾಗುವರೆಗೆ ಅನೇಕರು ಪಕ್ಷಕ್ಕಾಗಿ, ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ್ದಾರೆ. ಅವರಾರೂ ಬಿಜೆಪಿ ಒಂದು ದಿನ ಅಧಿಕಾರಕ್ಕೆ ಬರುತ್ತದೆ ಎನ್ನುವ ಕನಸು ಕಂಡವರಲ್ಲ. ಅವರಿಗಿದ್ದ ಉದ್ದೇಶ ಈ ರಾಷ್ಟ್ರವನ್ನು ರಕ್ಷಿಸಬೇಕು. ಹಿಂದೂ ರಾಷ್ಟ್ರವಾಗಿ ಉಳಿಸಬೇಕು ಎನ್ನುವುದಷ್ಟೇ ಆಗಿತ್ತು ಎಂದರು.
ಇತ್ತೀಚಿನ ದಿನಗಳಲ್ಲಿ ಪಾರ್ಟಿಗೆ ಬಂದ ಕೂಡಲೇ ಅಧಿಕಾರ ಸಿಗುತ್ತೆ ಎನ್ನುವ ಭಾವನೆ ಹೆಚ್ಚಾಗಿದೆ ಬಹಳಷ್ಟು ಹಿರಿಯ ನಾಯಕರು ಯಾವುದೇ ಅಧಿಕಾರ ಅನುಭವಿಸದೆ ಮಾರ್ಗದರ್ಶಕರಾಗಿ ಉಳಿದಿದ್ದಾರೆ. ಇದೆಲ್ಲದರ ಬಗ್ಗೆ ಪ್ರತಿಯೊಬ್ಬ ಕಾರ್ಯಕರ್ತರಿಗೂ ಗೊತ್ತಿರಬೇಕು ಎಂದರು.
ವೇದಿಕೆಯಲ್ಲಿ ಬಿಜೆಪಿ ನಗರಾಧ್ಯಕ್ಷ ಮಧುಕುಮಾರ ರಾಜ ಅರಸ್, ಗ್ರಾಮಾಂತರ ಮಂಡಲ ಅಧ್ಯಕ್ಷ ಈಶ್ವರಳ್ಳಿ ಮಹೇಶ್, ಕೋಟೆ ರಂಗನಾಥ್, ಹೆಚ್.ಡಿ.ತಮ್ಮಯ್ಯ, ಬಿ.ಬಸವರಾಜ್ ಇತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!