ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾನ್ ಮಸಾಲ, ಜರ್ದಾ, ಖೈನಿ ಇತ್ಯಾದಿ ಜಗಿಯುವ ತಂಬಾಕು ಪದಾರ್ಥಗಳನ್ನು ನಿಷೇಧಿಸಲಾಗಿದೆ.
ಪ್ರಾಣ ಭೀತಿ ಒಡ್ಡಿರುವ ಕೊರೋನಾ ವೈರಸ್ನಿಂದಾಗಿ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂದರ್ಭ ಜಗಿಯುವ ತಂಬಾಕು ಪದಾರ್ಥಗಳನ್ನು ಜನತೆ ಉಪಯೋಗಿಸಿ ಅಲ್ಲಲ್ಲಿ ಉಗಿಯುವುದರಿಂದ ನ್ಯುಮೋನಿಯ ಮತ್ತು ಕೋವಿಡ್-19ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡಲು ಕಾರಣವಾಗಬಹುದು. ಈ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಈ ಪದಾರ್ಥಗಳನ್ನು ಮಾರಾಟ ಮಾಡುವುದು ಮತ್ತು ಜನತೆ ಬಳಸುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಅಧ್ಯಕ್ಷರು, ಜಿಲ್ಲಾ ತಂಬಾಕು ನಿಯಂತ್ರಣ ಸಮನ್ವಯ ಸಮಿತಿ ಪ್ರಕಟಣೆ ತಿಳಿಸಿದೆ.
ಬೀಡಿ, ಸಿಗರೇಟ್ ಸೇದುವುದರಿಂದ ಕೈಯಿಂದ ಬಾಯಿಯ ಮೂಲಕ ವೈರಸ್ಗಳು ಮಾನವನ ದೇಹವನ್ನು ಪ್ರವೇಶಿಸುವ ಸಾಧ್ಯತೆ ಇರುವುದರಿಂದ ಹಾಗೂ ದೇಹದ ಇತರೆ ಭಾಗಗಳಿಗೆ ಸೋಂಕು ಹರಡಿ ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆಗಳು ಬರಬಹುದು. ಸಾರ್ವಜನಿಕ ಹಿತದೃಷ್ಟಿಯಿಂದ ಕೋವಿಡ್-೧೯ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಂದಿನ ಆದೇಶದವರೆಗೂ ಪಾನ್ ಮಸಾಲ, ಜರ್ದಾ, ಖೈನಿ ಮುಂತಾದ ಜಗಿಯುವ ತಂಬಾಕು ಉತ್ಪನ್ನಗಳನ್ನು ಅಂಗಡಿಗಳಲ್ಲಿ ಮಾರಾಟ ಮಾಡುವುದು ಮತ್ತು ಸಾರ್ವಜನಿಕರು ಬಳಸುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ಉಲ್ಲಂಘನೆಯಾದಲ್ಲಿ ಸಾಂಕ್ರಾಮಿಕ ರೋಗಗಳ ಕಾಯಿದೆ-೧೮೯೭, ವಿಪತ್ತು ನಿರ್ವಹಣಾ ಕಾಯಿದೆ-೨೦೦೫, ಐಪಿಸಿ-೧೮೮,೨೬೮,೨೬೯ ಮತ್ತು ೨೭೦ ಅಡಿಯಲ್ಲಿ ಪ್ರಕರಣ ದಾಖಲಿಸಿ ಸಂಬಂಧಿಸಿದವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.