ನವದೆಹಲಿ: ಒಂದೆಡೆ ದೇಶದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ಪ್ರಕಾರ ಕೊರೋನಾ ಸೋಂಕಿನಿಂದ ಭಾರತದಲ್ಲಿ ಚೇತರಿಸಿಕೊಂಡವರ ಪ್ರಮಾಣ ಶೇ 83.70ಕ್ಕೆ ತಲುಪಿದೆ.
ಈ ವರೆಗೂ 53,52,078 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದು, 9,42,217 (ಶೇ 14.74) ಸಕ್ರಿಯ ಪ್ರಕರಣಗಳಿವೆ. 99,773 ಜನರು ಕೊರೋನಾ ಸೋಂಕಿನಿಂದ ಮೃತ ಪಟ್ಟಿದ್ದಾರೆ.
ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 15,591 ಹೊಸ ಕೋವಿಡ್ ಪ್ರಕರಣಗಳು ಬೆಳಕಿಗೆ ಬಂದಿವೆ. ಸೋಂಕಿನಿಂದ 424 ಮಂದಿ ಮೃತಪಟ್ಟಿದ್ದಾರೆ. ಮಹರಾಷ್ಟ್ರದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಕೇಸ್ ಗಳು ಪತ್ತೆಯಾಗುತ್ತಿವೆ. ಕರ್ನಾಟಕದಲ್ಲಿ 24 ಗಂಟೆಯಲ್ಲಿ 8,793 ಹೊಸ ಕೊರೋನಾ ಪ್ರಕರಣಗಳು ದೃಢಪಟ್ಟಿವೆ. 125 ಮಂದಿ ಸಾವಿಗೀಡಾಗಿದ್ದಾರೆ.