Wednesday, July 6, 2022

Latest Posts

ಗುಣಮುಖರಾದ 14 ಮಂದಿ ಕೊರೋನಾ ಸೋಂಕಿತರು: ಕುಂದಾಪುರ ಸರಕಾರಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ

ಉಡುಪಿ: ಕುಂದಾಪುರ ಸರಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ 14 ಮಂದಿ ಕೊರೋನಾ ಸೋಂಕಿತರು ಭಾನುವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಪ್ರಸ್ತುತ ಆಸ್ಪತ್ರೆಯಲ್ಲಿ ಒಟ್ಟು 78 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರು. ಅದರಲ್ಲಿ ಏಳನೇ ದಿನಕ್ಕೆ 3 ವರ್ಷ, 8 ವರ್ಷ ಮತ್ತು 14ವರ್ಷ ಪ್ರಾಯದ ಮೂವರು ಮಕ್ಕಳು ಸಹಿತ 55 ವರ್ಷದವರೆಗಿನ ಒಟ್ಟು 14 ಮಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಅವರ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಇವರಲ್ಲಿ ಬಹುತೇಕ ಮಂದಿ ಮಹಾರಾಷ್ಟ್ರ ರಾಜ್ಯದಿಂದ ಆಗಮಿಸಿದವರು, ಕೆಲವರು ತೆಲಂಗಾಣದಿಂದ ಬಂದವರಾಗಿದ್ದಾರೆ.
ಕುಂದಾಪುರ ಸಹಾಯಕ ಆಯುಕ್ತ ಕೆ. ರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ, ಕೋವಿಡ್ ನೋಡಲ್ ಅಧಿಕಾರಿ ಡಾ. ಪ್ರಶಾಂತ್ ಭಟ್, ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರಾರ್ಬಟ್ ರೆಬೆಲ್ಲೊ, ಡಾ. ನಾಗೇಶ್, ಬೈಂದೂರು ತಾಲೂಕು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪ್ರೇಮಾನಂದ, ಕುಂದಾಪುರ ಪಿಎಎಸ್‌ಐ ಹರೀಶ್ ಆರ್. ಮೊದಲಾದವರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊರೋನಾ ಮುಕ್ತರಾದವರಿಗೆ ಗುಲಾಬಿ ಗಿಡಗಳನ್ನು ವಿತರಿಸಿ, ಮಕ್ಕಳಿಗೆ ಚಾಕೊಲೇಟ್ ನೀಡುವ ಮೂಲಕ ವಿಶೇಷ ರೀತಿಯಲ್ಲಿ ಬೀಳ್ಕೊಟ್ಟರು.
ಈ ಸಂದರ್ಭ ಕುಂದಾಪುರ ಸಿಟಿ ಜೆಸಿಐ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ಕುಂದಾಪುರ ಸರಕಾರಿ ಆಸ್ಪತ್ರೆಯ ವೈದ್ಯರು, ಶುಶ್ರೂಷಕಿಯರು, ಸಿಬ್ಬಂದಿ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss