Wednesday, July 6, 2022

Latest Posts

ಗುಲಾಂ ನಬಿ ಆಜಾದ್‌ ಗೆ ರಾಜ್ಯಸಭೆಯಲ್ಲಿ ಕಂಬನಿಯ ವಿದಾಯ ಹೇಳಿದ ಪ್ರಧಾನಿ ಮೋದಿ

ಹೊಸದಿಗಂತ ಆನ್ ಲೈನ್ ಡೆಸ್ಕ್:

ರಾಜ್ಯಸಭಾ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಅವರ ವಿದಾಯದ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿ ಮಾತನಾಡಲು ತಡವರಿಸಿದ ಘಟನೆ ರಾಜ್ಯಸಭೆಯಲ್ಲಿ ನಡೆಯಿತು.
ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಹಿಂದೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಗುಜರಾತ್‌ನ ಎಂಟು ಯಾತ್ರಾರ್ಥಿಗಳು ಮೃತಪಟ್ಟಾಗ, ಆಜಾದ್ ತೋರಿದ ಆತ್ಮೀಯ ವರ್ತನೆ ನೆನೆದು ಪ್ರಧಾನಿ ಮೋದಿ ಸದನದಲ್ಲಿ ಕಣ್ಣೀರಾದರು.ತಮ್ಮ ಕುಟುಂಬ ಸದಸ್ಯರ ಸಾವು ಸಂಭವಿಸಿದಾಗ ಆಗುವ ನೋವನ್ನೇ ಆಜಾದ್ ಅಂದು ನನ್ನ ಮುಂದೆ ತೋಡಿಕೊಂಡಿದ್ದರು. ಅವರ ಈ ಮಾನವೀಯ ಗುಣಕ್ಕೆ ನಾನು ತಲೆಬಾಗುತ್ತೇನೆ ಎಂದು ಹೇಳುತ್ತಾ ಪ್ರಧಾನಿ ಮೋದಿ ಅತ್ಯಂತ ಭಾವುಕರಾದರು.
ಗುಲಾಂ ನಬಿ ಆಜಾದ್​ರಂಥ ನಾಯಕರು ಮತ್ತೆ ಸಿಗುವುದು ತುಂಬಾ ವಿರಳ. ಅವರು ತಮ್ಮ ಪಕ್ಷದ ಬಗ್ಗೆ ಮಾತ್ರವಲ್ಲ,  ದೇಶದ ಬಗ್ಗೆಯೂ ಗಮನಹರಿಸಿದ್ದಾರೆ. ಆಜಾದ್ ಅವರು ನನ್ನ ನಿಜವಾದ ಸ್ನೇಹಿತ, ಅಧಿಕಾರ ಬಂದಾಗ ಹೇಗೆ ಎಲ್ಲವನ್ನು ನಿರ್ವಹಿಸಬೇಕು ಎಂಬುದನ್ನು ಅವರನ್ನು ನೋಡಿ ನಾವು ಕಲಿಯಬೇಕು. ಇವರನ್ನು ಬೀಳ್ಕೊಡುತ್ತಿರುವುದಕ್ಕೆ ದುಃಖವಾಗುತ್ತದೆ ಎಂದು ಭಾವುಕರಾದರು.
ಆಜಾದ್ ತಮ್ಮ ಜೀವನುದ್ದುದ್ದಕ್ಕೂ ಆದರ್ಶಗಳನ್ನು ಪಾಲಿಸಿಕೊಂಡು ಬಂದ ವ್ಯಕ್ತಿ. ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ, ಕೇಂದ್ರ ಸರ್ಕಾರದ ಸಚಿವ ಹಾಗೂ ರಾಜ್ಯಸಭೆ ವಿಪಕ್ಷ ನಾಯಕನ ಸ್ಥಾನವೂ ಸೇರಿದಂತೆ ಆಜಾದ್ ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಹಲವು ಉನ್ನತ ಹದ್ದೆಗಳನ್ನು ನಿಭಾಯಿಸಿದ್ದಾರೆ. ಆದರೆ ಅವರ ಸರಳ ವ್ಯಕ್ತಿತ್ವ ನಮ್ಮೆಲ್ಲರನ್ನೂ ಬಹುವಾಗಿ ಆಕರ್ಷಿಸಿದೆ ಎಂದು ಮೋದಿ ಹೇಳಿದರು.
ಆಜಾದ್ ಮತ್ತೆ ರಾಜ್ಯಸಭಾ ಸಂಸದರಾಗಿ ಈ ಸದನ ಪ್ರವೇಶಿಸಬೇಕು ಎಂಬುದು ತಮ್ಮ ವೈಯಕ್ತಿಕ ಬಯಕೆ. ಅವರಂತ ಉತ್ತಮ ಸಂಸದೀಯ ಪಟು ಸದನದಲ್ಲಿ ಇರುವುದು ನಮಗೆಲ್ಲರಿಗೂ ಅವಶ್ಯಕ ಎಂದು ಪ್ರಧಾನಿ ಅಭಿಪ್ರಾಯಪಟ್ಟರು. ಪ್ರಧಾನಿ ಆಜಾದ್‌ಗೆ ಸೆಲ್ಯೂಟ್ ಮಾಡಿ ಭಾಷಣ ಮುಗಿಸುತ್ತಿದ್ದಂತೇ ಸದನದ ಎಲ್ಲಾ ಸದಸ್ಯರೂ ಚಪ್ಪಾಳೆ ತಟ್ಟಿದರು. ಈ ವೇಳೆ ಆಜಾದ್ ಕೂಡ ಭಾವುಕರಾಗಿ ಪ್ರಧಾನಿ ಮೋದಿ ಅವರಿಗೆ ವಂದಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss