ಹೊಸ ದಿಗಂತ ವರದಿ, ಬಳ್ಳಾರಿ:
ಗೂಂಡಾಗಿರಿ ಪ್ರದರ್ಶಿಸಿದ ಶಾಸಕ ಭೀಮಾ ನಾಯ್ಕ್ ಅವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ನಗರದ ರಾಯಲ್ವೃತ್ತದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಶಾಸಕ ಭೀಮಾನಾಯ್ಕ್ ವಿರುದ್ದ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ರವಾನಿಸಿದರು. ಈ ಸಂದರ್ಭದಲ್ಲಿ ಬೂಡಾ ಅಧ್ಯಕ್ಷ ದಮ್ಮೂರ್ ಶೇಖರ್ ಅವರು ಮಾತನಾಡಿ, ಯಾರೇ ಆಗಲಿ ಚುನಾಯಿತ ಜನಪ್ರತಿನಿಧಿಗಳಾದವರು ಗಲಭೆಗೆ ಅವಕಾಶ ನೀಡಕೂಡದು, ಆದಷ್ಟು ಶಾಂತಿ ರೀತಿಯಿಂದ ವರ್ತಿಸಿ ವಾತಾವರಣ ತಿಳಿಗೊಳಿಸಲು ಮುಂದಾಗಬೇಕು, ಅದನ್ನು ಬಿಟ್ಟು ಶಾಸಕ ಭೀಮಾ ನಾಯ್ಕ್ ಬುಜ ತಟ್ಟಿ ಅವಾಶ್ಚ ಶಬ್ದಗಳಿಂದ ನಿಂದಿಸಿರುವುದು ಪ್ರಜಾಪ್ರಭುತ್ವದ ಕಗ್ಗೋಲೆಯಾಗಿದೆ. ಚುನಾವಣೆಯಲ್ಲಿ ಸೋಲು, ಗೆಲುವು ಸಹಜ, ಆದರೇ, ಸೋಲಿನ ಭೀತಿಯಲ್ಲಿ ಗಲಭೆಗೆ ಕಾರಣರಾಗಬಾರದು ಎಂದು ತಿಳಿಸಿದರು. ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಐನಾಥ್ ರೆಡ್ಡಿ ಅವರು ಮಾತನಾಡಿ, ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಅವರ ದೂಂಡಾವರ್ತನೆ ಸಂವಿಧಾನಕ್ಕೆ ವಿರೋಧವಾಗಿದೆ. ಒಬ್ಬ ಶಾಸಕರಾದವರು ರೌಡಿಗಳಂತೆ ನಮ್ಮ ಕಾರ್ಯಕರ್ತರನ ಮೇಲೆ ಹಲ್ಲೆ ನಡೆಸಿರುವುದು, ಅವಾಶ್ಚ ಶಬ್ದಗಳಿಂದ ನಿಂದಿಸಿರುವುದು ಸರಿಯಲ್ಲ ಎಂದರು. ಬಿಜೆಪಿ ಕಾರ್ಯಕರ್ತರ ಮೇಲೆ ಗೂಂಡಾಗಿರಿ ಪ್ರದರ್ಶಿಸಿದ ಶಾಸಕ ಭೀಮಾ ನಾಯ್ಕ್ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು, ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ದರ್ಪ ಪ್ರದರ್ಶಿಸಿದ ಶಾಸಕರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಗರ ಅಧ್ಯಕ್ಷ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಅಶೋಕ್, ರಾಮಾಂಜಿನಿ, ಪ್ರಹ್ಲಾದ್ ದೇಸಾಯಿ, ಪಾಲಿಕೆ ಸದಸ್ಯ ಮಲ್ಲನಗೌಡ, ಮುಖಂಡರಾದ ಇಬ್ರಾಹಿಂ ಬಾಬು, ಸುಬ್ಬರಾವ್, ಅರುಣಾ ಬಾಲಚಂದ್ರ, ವೀರೇಶ್, ರಾಜೇಶ್ , ಜ್ಯೋತಿ ಪ್ರಕಾಶ್, ಸಂದೀಪ್, ರಾಮಚಂದ್ರಯ್ಯ, ಶ್ರೀನಿವಾಸ್ ಪಾಟೀಲ್, ಕುಂದಾಪುರ ನಾಗರಾಜ್, ಗಾದಿಲಿಂಗ ಸೇರಿದಂತೆ ಇತರರಿದ್ದರು.