ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ತಕ್ಷಣದಿಂದಲೇ ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ-2016 ಅನ್ವಯ ಆಗಲಿದೆ ಎಂದು ಕೇಂದ್ರ ಗೃಹಸಚಿವಾಲಯ ಸೂಚಿಸಿದೆ.
ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊರರಾಜ್ಯದವರು ಭೂಖರೀದಿಸಲು ಅನುವಾಗುವಂತೆ ಹಲವು ಕಾನೂನುಗಳ ತಿದ್ದುಪಡಿಯನ್ನು ಕೇಂದ್ರ ಸರ್ಕಾರ ತಂದಿದೆ. ಇದರಿಂದ ಇನ್ಮುಂದೆ ಯಾವುದೇ ಭಾರತೀಯ ಪ್ರಜೆ ಜಮ್ಮು, ಕಾಶ್ಮೀರ ಮತ್ತು ಲಡಾಖ್ನಲ್ಲಿ ಭೂಮಿ ಖರೀದಿಸಲು ಅರ್ಹರು ಎಂದು ಹೇಳಿದೆ.
ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ಯನ್ನು ನಿಷ್ಕ್ರಿಯಗೊಳಿಸಿದ ಸಮಯದಲ್ಲಿ ಗೃಹ ಸಚಿವಾಲಯ ಈ ಘೋಷಣೆಯನ್ನು ಮಾಡಿತ್ತು. ಆದರೆ ಈವರೆಗೆ ಅಧಿಕೃತವಾಗಿ ಆದೇಶ ಹೊರಡಿಸಿರಲಿಲ್ಲ. ಇದೀಗ ತಕ್ಷಣವೇ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಜಮ್ಮು ಕಾಶ್ಮೀರದ ಏಕೀಕರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಜಮ್ಮು ಕಾಶ್ಮೀರದಲ್ಲಿ ಭೂಮಿ ಖರೀದಿಸುವ ಕನಸು ಕಂಡವರಿಗೆ ಇದೀಗ ತಮ್ಮ ಕನಸು ನನಸಾಗುವ ಸಮಯ ಹತ್ತಿರವಾಗಿದೆ.
ಜಮ್ಮು-ಕಾಶ್ಮೀರದಲ್ಲಿ ರೇರಾ ಕಾಯ್ದೆ ಇಂದಿನಿಂದಲೇ ಜಾರಿಯಾಗಲಿದ್ದು, ಇದು ಆ ಪ್ರದೇಶದಲ್ಲಿ ಆಸ್ತಿ ಖರೀದಿ, ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ನೀಡಲಿದೆ. ಅಲ್ಲಿ ಇನ್ನು ರಿಯಲ್ ಎಸ್ಟೇಟ್ ಉದ್ಯಮ ತೀವ್ರಗತಿ ಪಡೆದುಕೊಳ್ಳಲು ದಾರಿಯಾಗಲಿದೆ.
ಗೃಹ ಸಚಿವಾಲಯ 1996 ಜಮ್ಮು ಮತ್ತು ಕಾಶ್ಮೀರ ಲ್ಯಾಂಡ್ ರೆವಿನ್ಯೂ ಆಯಕ್ಟ್ಗೆ ತಿದ್ದುಪಡಿ ತರುವ ಮೂಲಕ ಈ ಅವಕಾಶ ಮಾಡಿಕೊಟ್ಟಿದೆ. ಇದರಲ್ಲಿ ಕೃಷಿಕರಿಗೆ ಮಾರಲ್ಪಟ್ಟ ಅಥವಾ ವರ್ಗಾಯಿಸಿದ ಕೃಷಿ ಭೂಮಿಯನ್ನು ಕೊಳ್ಳಲು ಅವಕಾಶ ನೀಡಲಾಗಿಲ್ಲ. ಆದಾಗ್ಯೂ, ಕೃಷಿಯೇತರರಿಗೆ ಭೂಮಿಯನ್ನು ಮಾರಾಟ, ಉಡುಗೊರೆ, ವಿನಿಮಯ ಮಾಡಿಕೊಳ್ಳಲು ಸರ್ಕಾರವು ಕೃಷಿಕರಿಗೆ ಅಧಿಕಾರ ನೀಡಬಹುದಾಗಿದೆ.
ಇದಕ್ಕೂ ಮೊದಲು 35 ಎ ವಿಧಿ ಭಾರತದ ಇತರ ಭಾಗಗಳಿಂದ ನಾಗರಿಕರಿಗೆ ಭೂಮಿ ಖರೀದಿಸುವುದನ್ನು ನಿಷೇಧಿಸಿತ್ತು. ಲೇಖನವು ಜೆ & ಕೆ ಶಾಸಕಾಂಗಕ್ಕೆ ರಾಜ್ಯದ ಖಾಯಂ ನಿವಾಸಿಗಳನ್ನು ವ್ಯಾಖ್ಯಾನಿಸಲು ಅವಕಾಶ ಮಾಡಿಕೊಟ್ಟಿತು ಮತ್ತು ಅರ್ಹರು ಮಾತ್ರ ಭೂಮಿ ಅಥವಾ ಆಸ್ತಿಯನ್ನು ಖರೀದಿಸಲು ಸಾಧ್ಯವಾಗುತ್ತಿತ್ತು.