ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಅಮೆರಿಕದಲ್ಲಿ ಸೂಕ್ತ ದಾಖಲೆಗಳಿಲ್ಲದೆ ನೆಲೆಸಿರುವ ಭಾರತದ 5 ಲಕ್ಷ ಜನರು ಸೇರಿದಂತೆ ಸುಮಾರು 1 ಕೋಟಿ 10 ಲಕ್ಷ ವಲಸಿಗರಿಗೆ ಅಮೆರಿಕದ ಪೌರತ್ವ ನೀಡುವ ಬಗ್ಗೆ ಮಾರ್ಗದರ್ಶಿ ಸೂತ್ರಗಳನ್ನ ರೂಪಿಸಲು ಅಮೆರಿಕ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬಿಡೆನ್ ಆಲೋಚಿಸಿದ್ದಾರೆ.
ಈ ನೀತಿ ಕಡತದ ಪ್ರಕಾರ, ವಲಸೆ ಸುಧಾರಣಾ ಕಾನೂನು ಜಾರಿಗೊಳಿಸುವುದಕ್ಕೆ, ಅದಕ್ಕೆ ಸಂಬಂಧಿಸಿದ ಮಸೂದೆ ಸಿದ್ಧಪಡಿಸಿ ಅಂಗೀಕರಿಸುವುದಕ್ಕಾಗಿ ಬಿಡೆನ್ ಅವರು ಕಾಂಗ್ರೆಸ್ ಜತೆಗೆ ಶೀಘ್ರವೇ ಕೆಲಸ ಶುರುಮಾಡಲಿದ್ದಾರೆ. ನಮ್ಮ ವ್ಯವಸ್ಥೆಯನ್ನು ಸುಧಾರಿಸುವ ಕ್ರಮವೂ ಇದರಲ್ಲಿ ಇರಲಿದೆ.
ಪ್ರಚಾರ ಕಾರ್ಯ ತಂಡವು ಬಿಡುಗಡೆ ಮಾಡಿರುವ ನೀತಿ ನಿರೂಪಣಾ ದಾಖಲೆಗಳಂತೆ, ಪ್ರತಿ ವರ್ಷ ಕನಿಷ್ಠ 95 ಸಾವಿರ ವಲಸಿಗರು ಅಮೆರಿಕದಲ್ಲಿ ಪ್ರವೇಶ ಪಡೆಯುವ ಬಗ್ಗೆಯೂ ಕಾರ್ಯಕ್ರಮ ಬಿಡನ್ ರೂಪಿಸಲಿದ್ದಾರೆ.
ಕುಟುಂಬ ಒಟ್ಟಿಗೇ ಇರಬೇಕೆಂಬುದಕ್ಕೆ ಆದ್ಯತೆ ನೀಡಲು ವಲಸೆ ಸುಧಾರಣಾ ನೀತಿ ಕುರಿತು ಶಾಸನ ರೂಪಿಸಲಿದೆ. ಕುಟುಂಬ ಆಧಾರಿತ ವಲಸೆಗೆ ಬಿಡೆನ್ ಆಡಳಿತ ಬೆಂಬಲ ನೀಡಲಿದೆ. ಅವಿಭಕ್ತ ಕುಟುಂಬದ ಹಿತಾಸಕ್ತಿ ಕಾಪಾಡುವುದು ಅಮೆರಿಕದ ಪ್ರಮುಖ ನೀತಿಯಾಗಿರಲಿದೆ ಎಂದು ದಾಖಲೆ ಹೇಳಿದೆ.