Saturday, January 16, 2021

Latest Posts

ಗೆಳೆತನಕ್ಕೊಂದಿಷ್ಟು ಹೊಳಪು ನೀಡಿ..! ನಿಮ್ಮ ಸ್ನೇಹ ಕೊನೆಯವರೆಗೂ ಹಸಿರಾಗಿ ಇರಬೇಕೆಂದರೆ ಈ ಸಲಹೆಗಳನ್ನು ಪಾಲಿಸಿ…

ಫೇಸ್‌ಬುಕ್‌ನಲ್ಲಿ ಸಾವಿಟ್ಟಲೇ ಫ್ರೆಂಡ್ಸ್ ಇರುತ್ತಾರೆ. ವಾಟ್ಸಪ್ ನಲ್ಲಿ ಐದು ನೂರಕ್ಕೂ ಜಾಸ್ತಿ‌ ಫ್ರೆಂಡ್ಸ್ ಇದ್ದಿರುತ್ತಾರೆ. ಕಾಲೇಜ್ ನಲ್ಲಿ ನಮ್ದು ದೊಡ್ಡ ಫ್ರೆಂಡ್ಸ್ ಗ್ಯಾಂಗೆ‌ ಇರುತ್ತದೆ. ಇಷ್ಟೊಂದು ಜನ ಇದ್ದರು ಎಷ್ಟೊಂದು ಸಾರಿ‌ ಒಂಟಿಯಾಗಿ ಬಿಡುತ್ತೇವೆ. ಯಾಕೆಂದರೆ ನಮ್ಮ ಮನಸ್ಸಿನ ಭಾವನೆಗಳನ್ನು, ಹೃದಯದ ವೇದನೆಯನ್ನು,‌ ಬದುಕಿನ ಹತಾಷೆಗಳನ್ನು, ಸುಖ‌‌ ದುಃಖ. ನಿತ್ಯ ಜೀವನದ ತೊಳಲಾಟವನ್ನೆಲ್ಲ ಹೇಳಲು ಯಾರು ಒಳ್ಳೆ ಮಿತ್ರರಿಲ್ಲ ಎನ್ನುಸುತ್ತದೆ. ಸಾಮಾಜಿಕ ಜಾಲತಾಣಗಳಿಂದ ಆಗುವಂತಹ ಬಹುತೇಕ ಸ್ನೇಹಿತರು ನಮ್ಮ ಚಂದದ ಪ್ರೊಫೈಲ್ ಪಿಕ್ ನೋಡಿ‌ ನಮ್ಮನ್ನ ಆಯ್ಕೆ ಮಾಡಿ‌ಕೊಂಡಿರುತ್ತಾರೆ. ಅವರೊಟ್ಟಿಗೆ ನಮ್ಮ‌ಭಾವನೆಗಳಿಗೆ ಕೆಲಸವಿರುವುದಿಲ್ಲ.

ಮನುಷ್ಯರ ಮಾತು ಬಿಡಿ. ಸಾಂಗತ್ಯ, ಗೆಳೆತನ ಎಂಬುದು ಯಾವ ಪ್ರಾಣಿ ಸಂಕುಲವನ್ನು ಬಿಟ್ಟಿದ್ದಲ್ಲ. ಅಲ್ಲಿ ವ್ಯತ್ಯಾಸವೆಂದರೆ ನಮಗೆ ಮಿತ್ರರ ಜೊತೆ ಶತ್ರುಗಳು ಇರುತ್ತಾರೆ ಅವರಿಗೆ ಹಾಗಿರುವುದಿಲ್ಲ. ನಮ್ಮ ಬದುಕಿನಲ್ಲಿ ಗೆಳೆತನವೊಂದನ್ನು ಬಿಟ್ಟು ಬೇರೆಲ್ಲ ಸಂಬಂಧಗಳು ಅನುಕೂಲಗಳು ಹಾಸು ಹೊದ್ದಿದ್ದರು ಅದೊಂದು ಸಂಬಂಧಕ್ಕಾಗಿ ಅದೆಷ್ಟು ಚಡಪಡಿಕೆ ಅನುಭವಿಸಿ ಬಿಡುತ್ತೇವಲ್ಲ. ಅದೇ ಗಳೆತನದ ಗಮ್ಮತ್ತು.

ಕೆಲವೊಬ್ಬರಿಗೆ ರಾಶಿ ರಾಶಿ ಸ್ನೇಹಿತರಿರುತ್ತಾರೆ, ಇನ್ನೊಂದಿಷ್ಟು ಮಂದಿಗೆ ಒಬ್ಬಿಬ್ಬರು ಸ್ನೇಹಿತರಿರುವುದಿಲ್ಲ. ಗೆಳೆತನ ಎಂಬುದು‌ ಒಂದು ಕಲೆ‌, ತಪಸ್ಸು, ಅದು ಎಲ್ಲರಿಗೂ ಒಲಿದು ಬರುವುದಿಲ್ಲ. ಹಾಗಂತ ಹೋದಲ್ಲೆಲ್ಲ ಇಪ್ಪತ್ತು ಮೊವತ್ತು ಜನರನ್ನು ಸುತ್ತ ಸೆಳೆದು ಕೊಂಡ ಭೀಗುವವನು ಮಹಾನ್ ಅದೃಷ್ಟವಂತನೆಂದಲ್ಲ.‌ಅಂಥವರಿಗೆ ಒಬ್ಬನು ಅಂತರಂಗದ ಸ್ನೇಹಿತನಿರಲಾರ.

ಹಾಗಾದರೇ ಈ ಒಳ್ಳೆ ಗೆಳೆಯರು ಎಂದರೆ ಯಾರು?ಗೆಳೆಯರು ಎನ್ನುವುದಕ್ಕಿಂತ ಅವರನ್ನು ಅಂತರಂಗದ ಸಂಗಾತಿ ಎನ್ನುವಂತಿರಬೇಕು. ನೀವು ಹೇಳದೇಯೇ ನಿಮ್ಮ ವಿಚಾರ ದೃಷ್ಟಿಕೋನ ಅವರಿಗೆ ತಿಳಿಯಬೇಕು. ನಿಮ್ಮ ಅಭಿಪ್ರಾಯ ಅವರಿಗೆ ಇಷ್ಟವಿಲ್ಲದಿದ್ದರು ಕಡೇಪಕ್ಷ ಕೇಳಿಕೊಳ್ಳುವ ವ್ಯವದಾನವಾದರೂ ಇರಬೇಕು. ತಪ್ಪುಗಳನ್ನು ಸಾವದಾನದಿಂದ ತಿದ್ದುಕೊಳ್ಳಬೇಕು. ಚಿಕ್ಕಪುಟ್ಟ ಭಿನ್ನಾಭಿಪ್ರಾಯಗಳು ಬಂದರೆ ಕೂತು ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಮನಸ್ಥಿತಿ ಇರಬೇಕು. ಎದುರು ಎಷ್ಟೇ‌ ಕಿತ್ತಾಡಿದರು ಮೂರನೇಯವರು ನಿಮ್ಮ ಬಗ್ಗೆ ಮಾತನಾಡಿದರೆ ಸಹಿಸದ ವ್ಯಕ್ತಿತ್ವ ಇರಬೇಕು. ಎಂತಹ ನಿಮ್ಮ ಸಿಕ್ರೆಟ್ ಗಳನ್ನು ಅವರಲ್ಲಿ ಹಂಚಿಕೊಳ್ಳಬಹುದೆಂದು ನಂಬಿಕೆ ಹುಟ್ಟಿಸುವ ನಡವಳಿಕೆ ಇರಬೇಕು. ನಿಮ್ಮ ನೋವನ್ನು ನೀವು ಹೇಳದೆಯೇ ಅರ್ಥ ಮಾಡಿಕೊಂಡು ನಿಮ್ಮ ದುಃಖಕ್ಕೆ ಪಕ್ಕಕ್ಕೆ ಕೂತು ಹೆಗಲು ಕೊಡಬೇಕು. ಎಲ್ಲರೂ ಜೊತೆಗಿದ್ದರು ನಿಮ್ಮೊಬ್ಬರ ಅನುಪಸ್ಥಿತಿ ಸಹಿಸದಂತಿದ್ದು ರಾತ್ರಿ ಮಲಗುವ‌ ಮುನ್ನ‌ ಮಿಸ್ ಯು ಎನ್ನುವಂತ ಸ್ನೇಹಿತ ಬೇಕು.

ಈ ರೀತಿ ಸ್ನೇಹಿತರು‌ ಎಲ್ಲರಿಗೂ ಸಿಗುವುದಿಲ್ಲ ಅದೃಷ್ಟ ವಂತರಿಗೆ ಮಾತ್ರ. ಹಾಗಂತ ಮಿತ್ರರಿರುವುದಿಲ್ಲವೆಂದಲ್ಲ. ನಿಮ್ಮ ಈಗಿರುವ ಸ್ನೇಹಕ್ಕೆ ಜೀವಂತಿಕೆ ತುಂಬಿ ನಿಮ್ಮ ಗೆಳೆತನವನ್ನು ಬದಲಾಯಿಸಿಕೊಳ್ಳಿ. ಅದಕ್ಕೊಂದು ಹೊಳಪು ನೀಡಿ.

ಸಾರಿ‌, ಥ್ಯಾಂಕ್ಯೂ ಆಗಾಗ ಹೊರಬೀಳಲಿ
ಅದೊಂದು ಹಳೆಕಾಲದ ಮಾತಿದೆ. ಫ್ರೆಂಡಷಿಪ್ ನಲ್ಲಿ ನೋ ಸಾರಿ, ನೋ ಥಾಂಕ್ಸ ಎಂದು. ಆದರೆ ಸಾರಿ, ಥಾಂಕ್ಯೂ ಎಲ್ಲಾ ಕಡೆಯಲ್ಲಿಯೂ ಬೇಕು. ಇದು ಸ್ನೇಹಿತರ ಮಧ್ಯೆಯೂ ಹೊರತಾದದ್ದಲ್ಲ. ಗೆಳೆಯ ಮಾಡುವ ದೊಡ್ಡ ದೊಡ್ಡ‌ ಸಹಾಯಗಳಿಗೆ ನೀವು ಹೃದಯದಾಳದಿಂದ ಥಾಂಕ್ಸ ‌ಹೇಳಿ ಕೃತಜ್ಞತೆ ತಿಳಿಸಲೇ ಬೇಕು. ನಿಮ್ಮಿಂದ ಮಿತ್ರನಿಗಾಗುವ ಬೇ ಸರಗಳಿಗೆ ಕೈ‌ಹಿಡಿದು ಸಣ್ಣ ಸಾರಿ ಹೇಳಿ. ಇಂತಹ ಸಾರಿ ಥಾಂಕ್ಯೂ ಗಳು ಗೆಳೆತನವನ್ನು ಬಲವಾಗಿಸುತ್ತವೆ. ಅವು ಹಳಸದಂತೆ ನೋಡಿಕೊಳ್ಳುತ್ತವೆ.

ಗೆಳೆಯ ಪರ್ಸನಲ್ ಡೈರಿಯಲ್ಲ
ಗೆಳೆತನ ಮತ್ತು ಶೇರಿಂಗ ಜೊತೆಯಲ್ಲಿ ಸಾಗುವಂತಹದ್ದು. ನೀವು ಯಾವ ವಿಷಯಗಳನ್ನು ಗೆಳೆಯನಲ್ಲಿ ಹೇಳಿಕೊಳ್ಳುತ್ತಿರಿ ಎಂಬುದರ ಮೇಲೆ ನಿಮ್ಮ ಗೆಳೆತನ ನಿರ್ಧಾರವಾಗುತ್ತದೆ. ನೀವು ಯಾವುದನ್ನು ಮುಚ್ಚಿಡದೇ ಎಲ್ಲವನ್ನು ಗೆಳೆಯನಲ್ಲಿ ಹೇಳಿಕೊಂಡರೆ ನಿಮ್ಮ ಗೆಳೆತನ ಗಟ್ಟಿ ನೆಲೆ ನಿಲ್ಲುತ್ತದೆ. ಆದರೆ ಹೇಳಿಕೊಳ್ಳುವ ಹಾತೊರಿಕೆಯಲ್ಲಿ ಬರಿ ನಿಮ್ಮ ಸಮಸ್ಯೆಗಳನ್ನೆ ಹೇಳುತ್ತಿರಬೇಡಿ. ಗೆಳೆಯನ ಸಮಸ್ಯೆಗಳನ್ನು, ಮಾತನ್ನು ಕೇಳಿಸಿಕೊಳ್ಳಿ. ಗೆಳೆಯನನ್ನು ನಿಮ್ಮ ಪರ್ಸನಲ್ ಡೈರಿಯ ರೀತಿ ಬಳಸಿ ಕೊಳ್ಳಬೇಡಿ. ಇಬ್ಬರಲ್ಲು ಶೇರಿಂಗ ಸಮವಾಗಿ ಸಾಗಲಿ. ಆಗಲೇ ಗೆಳೆತನಕ್ಕೊಂದು ಅಂದ ಬರುವುದು.

ಅಪರೂಪಕ್ಕೆ ಸಣ್ಣ ಪುಟ್ಟ ಮಿಸ್ ಅಂಡಸ್ಟಾಂಡಿಂಗ್
ಕೆಲವೊಮ್ಮೆ ಸಣ್ಣ ಪುಟ್ಟ ಜಗಳ ಮಿಸ್ ಅಂಡಸ್ಟಾಂಡಿಂಗ್ ಗಳು ಸ್ನೇಹಿತರ‌ ಮಧ್ಯ ದೊಡ್ಡ ಕಂದಕವನ್ನೇ ನಿರ್ಮಿಸುತ್ತದೆ. ಮೂರು ನಿಮಿಷದ ಮುನಿಸು ವರುಷಗಳ ಸ್ನೇಹವನ್ನು ನಾಶ ಮಾಡಿಬಿಡುತ್ತದೆ. ಆದರೆ ಖಂಡಿತ ಇಂತಹ ಮುನಿಸಿ ಜಗಳ ಒಳ್ಳೆಯದಲ್ಲ. ಜಗಳ ಮಿಸ್ಅಂಡಸ್ಟಾಂಡಿಗ್ ಗಳು ಹೆಚ್ಚೆಂದರೆ ಒಂದೆರಡು‌ ದಿನವಿರಬೇಕು. ಮೊದಲಿಗಿಂತಲೂ ಚೆನ್ನಾಗಿ ಒಬ್ಬರ ಅವಶ್ಯಕತೆ ಒಬ್ಬರಿ ತಿಳಿಯಬೇಕು. ಒಂದೇ ದಿನದಲ್ಲಿ ಒಬ್ಬರನ್ನೊಬ್ಬರು ಎಷ್ಟೊಂದು ಮಿಸ್ ಮಾಡಿಕೊಂಡಿರಿ ಎಂಬುದು ತಿಳಿಯಬೇಕು. ಸ್ನೇಹ ಮತ್ತು ಗಟ್ಟಿಗೊಳ್ಳ ಬೇಕು. ಚಿನ್ನಾ ಬೆಂಕಿಗೆ ಬಿದ್ದು ಫ್ರೇಶ್ ಆಗಿ ಈಚೆಗೆ ಬಂದು ಪಳ ಪಳಗುಟ್ಟುವಂತೆ ಸ್ನೇಹದಲ್ಲು ಮುನಿಸು ಮುಗಿದ ಮೇಲೆ ಹೊಳೆಯುವಂತಿರಬೇಕು.

ಹೊರೆಯಾಗಬೇಡಿ
ಗೆಳೆಯ ಎಲ್ಲಿಗಾದರು, ಯಾರೊಟ್ಟಿಗಾದರೂ ಹೊರಟರೆ, ನಾನು ಬರಲೇ ಎಂದು ಕೇಳಬೇಡಿ. ಹಾಗೇ ಕೇಳಿದರೆ ಅದು‌ ಸ್ಟುಪಿಡಿಟಿ ಎನಿಸಿಕೊಳ್ಳುತ್ತದೆ. ನೀವು ಬರುವಂತಿದ್ದರೆ ಅವರು ಮೊದಲೇ ಹೇಳುತಿದ್ದರು. ಹಾಗೊಂದು ವೇಳೆ ನೀವು ಕೇಳಿದಾಗ ಅವರು ನೋ ಎಂದರೆ ಅದನ್ನು ನಿಮ್ಮಿಂದ ಜೀರ್ಣಿಸಿ ಕೊಳ್ಳಲಾಗುವದಿಲ್ಲ. ಅವಮಾನವಾದಂತಾಗುತ್ತದೆ. ನಿಮ್ಮ ಇಂತಹ ವರ್ತನೆಗಳನ್ನು ಸ್ನೇಹಿತರು ಬಹಳ ದಿನ ಸಹಿಸಲಾರರು. ನೀವು ಅವರಿಗೆ ಭಾರವಾಗುತ್ತಿರಿ. ಒಂದು ಪ್ರೈವಸಿ ಪ್ರತಿಯೊಬ್ಬನಿಗೂ ಬೇಕು. ಅದಕ್ಕೆ ನೀವು ಅವಕಾಶ ಮಾಡಿ ಕೊಡಿ.

ತ್ಯಾಗ ಇರಲಿ
ಗೆಳೆತನವೆಂದ‌ ಮೇಲೆ ಸಣ್ಣಪುಟ್ಟ ತ್ಯಾಗಗಳಿರಲೇ ಬೇಕು. ಆದರೆ ತೊರಿಕೆಗೆಂದು ತ್ಯಾಗಗಳನ್ನು ಮಾಡಬೇಡಿ. ಮನಸ್ ಪೂರ್ವಕವಾಗಿ ‌ಮಾಡಿ. ಅದು ಹೃದಯಕ್ಕೆ ಸಂಬಂಧಿಸಿದ್ದು ಅದನ್ನು ಗೆಳಯ ಗುರುತಿಸಿರುತ್ತಾನೆ. ಉದಾಹರಣೆಗೆ ನಿಮಗೂ ತುಂಬಾ ಕೆಲಸಗಳಿರುತ್ತವೆ ಆದರೂ‌ ಗೆಳೆಯ ಕರೆದಾಗ ಅವಾನಿಗಾಗಿ ನಿಮ್ಮ ಕೆಲಸಗಳನ್ನು ಬದಿಗೊತ್ತಿ ಅವನೊಂದಿಗೆ ಹೊಗುತ್ತಿರಿ‌. ಇದು ಕೂಡ ತ್ಯಾಗವೇ. ಸಹಾಯಗಳನ್ನು ಮಾಡಿದಾಗಲೆಲ್ಲಾ ತಾನು ಸಹಾಯ‌ ಮಾಡಿದ್ದೇನೆಂಬ ಹಮ್ಮು ಬಂದರೆ ಫ್ರೆಂಡ್ ಷಿಪ್ ಫಿನಿಷ್.

ಕಷ್ಟಕ್ಕೂ, ಸುಖಕ್ಕೂ
ಕೇವಲ ಖುಷಿಯಿದ್ದಾಗ ಜೊತೆಗಿರುವುದು ಗೆಳೆತನವಲ್ಲ. ಹಾಗೇ ನೊಡಿದರೆ ದುಖಃ ವಿದ್ದಾಗಲೇ ನಾವು ಜೊತೆಯಾಗಬೇಕು. ಅದೇ ನಿಜವಾದ ಗೆಳೆತನ. ಗೆಳೆಯನೊಬ್ಬನ ಸಪೋರ್ಟ್ ಇದ್ದರೆ ಯಾವ ಕೆಲಸವಾದರೂ ಸಾಧಿಸಬಹುದು ನೆನಪಿರಲಿ. ನಿಮ್ಮ ಸ್ನೇಹಿತ ಕಷ್ಟದಲ್ಲಿದ್ದರೆ ಇಂದೇ ಸಹಾಯಕ್ಕೆ ನಿಲ್ಲಿರಿ.

ಗುಟ್ಟನ್ನು ಗುಟ್ಟಾಗಿ ಇಡಿ
ಶೇರಿಂಗ ಎಂಬುದು ಗೆಳೆತನದಲ್ಲಿದ್ದಾಗ ಗುಟ್ಟುಗಳು, ಖಾಸಗಿ ವಿಷಯಗಳು ಸ್ನೇಹಿತರೊಟ್ಟಿಗೆ ಹಂಚಿಕೊಂಡಿರುತ್ತಿರಿ. ಯಾರೊಟ್ಟಿಗೂ ಹೇಳಲಾಗದ ಎಷ್ಟೊ‌ ವಿಷಯಗಳನ್ನು ಸ್ನೇಹಿತರೊಂದಿಗೆ ಹೇಳಿರುತ್ತಿರಿ. ಅಂಥಹ ವಿಷಯಗಳನ್ನು ಗುಟ್ಟಾಗಿ ಇಡಬೇಕು. ನಂಬಿಕೆ ಇಂದ ಹೇಳಿದ್ದನ್ನು ಕಾಪಾಡಿಕೊಂಡು ಹೋಗುವ ಜವಬ್ಧಾರಿ ಇರಬೇಕು. ಸ್ನೇಹಿತರ ವಿಷಯ ಎಲ್ಲಿಯೂ ಹೇಳ ಬಾರದೆಂದಲ್ಲ. ಯಾವುದನ್ನು ಹೇಳ ಬೇಕು ಯಾವುದನ್ನು ಹೇಳಬಾರದೆಂಬ ಪರಿಕಲ್ಪನೆ ಇರಬೇಕು. ಒಮ್ಮೆ ನಂಬಿಕೆ ಕಳೆದು ಕೊಂಡರೆ ಮತ್ತೆ ನಂಬಿಕಸ್ಥರೆಂದು ಆಗಲಾರಿರಿ. ನೆನಪಿರಲಿ.

ಕೇವಲ ನಿಮ್ಮೊಬ್ಬರದೇ ಆಸ್ತಿಯಲ್ಲ
ಎಂಥಹದೇ ಗೆಳೆತನವಿದ್ದರು‌ ದಿನದ ಇಪ್ಪತ್ನಾಲ್ಕು ಗಂಟೆಯು ನಿಮ್ಮೊಟ್ಟಿಗೆ ಇರಲಾಗುವುದಿಲ್ಲ. ಯಾವಾಗಲೂ ಸ್ನೇಹಿತ ನನ್ನೊಟ್ಟಿಗೆ ಇರಬೇಕು, ನನ್ನೊಂದಿಗೆ ಮಾತ್ರ ಮಾತನಾಡಬೇಕು. ಬೇರೆಯವರೊಂದಿಗೆ ಸ್ವಲ್ಪ ಕ್ಲೋಸ್ ಆದೊಡನೇ ಸ್ನೇಹಿತ ನನ್ನಿಂದ ದೂರವಾದ ಎಂದುಕೊಳ್ಳುವುದು, ಜೊತೆಯಲ್ಲಿ ಯಾವಾಗಲೂ ಅಲ್ಲಿಲ್ಲಿ ಸುತ್ತಾಡುವುದೇ ಗೆಳೆತನ ಎಂದು ಭಾವಿಸುವುದು, ಮೂರ್ಖತನ. ನಿಜವಾದ ಸ್ನೇಹಿತರು ಪರಸ್ಪರ ಭೇಟಿಯಾಗದೆಯೂ ಇರಬಲ್ಲರು. ಗೆಳೆಯ ಅನುದಿನವು ಹೃದಯದಲ್ಲಿ ನೆಲೆಸಿರುವಾಗ ಭೇಟಿಯ ಮಾತೆಲ್ಲಿ ಬಂತು? ಎಷ್ಟೋ ದಿನಗಳ ಕಾಲ ಭೇಟಿಯಾಗದೆಯೇ ಗೆಳೆತನಕ್ಕೆ ಧಕ್ಕೆ ಬಾರದಂತೆ ಇರುವುದೆ ನಿಜವಾದ ಗೆಳೆತನ.

ಗೆಳೆಯ ಗೆದ್ದರೆ ನೀವು ಗೆದ್ದಂತೆ
ಇದಕ್ಕೆ ಯಾವುದೇ ಪೀಠಿಕೆ ಉಪಸಂಹಾರ ಹೇಳುವುದಿಲ್ಲ, ಚಿಕ್ಕದೊಂದು ಕಥೆ ಹೇಳುತ್ತೇನೆ. ಒಬ್ಬ ಹುಡುಗ ಶಾಲೆಯಲ್ಲಿ ಯಾವಾಗಲೂ ಮೊದಲು. ಅವನ ಗೆಳೆಯ ಶತ ದಡ್ಡ. ಬುದ್ಧಿವಂತ ಹುಡುಗ ಅವನಿಗೆ ದಿನವು ಪಾಠ ಹೇಳಿಕೊಡಲು ಪ್ರಾರಂಭಿಸುತ್ತಾನೆ. ನಂತರ ದಡ್ಡ ಹುಡುಗ ಕ್ಲಾಸಿಗೆ ಮೊದಲು ಬರುತ್ತಾನೆ. ಇದರಿಂದ ಅವನಿಗೆ ಮತ್ಸರವಾಗುವುದಿಲ್ಲ.‌ಸಂತೋಷವಾಗುತ್ತದೆ. ನನ್ನ ಸ್ನೇಹಿತ ಮೊದಲೆಂದು ಹೆಮ್ಮೆ ಪಡುತ್ತಾನೆ.

ಜೀವ ಸ್ಪರ್ಶ
ತುಂಬ ನೊಂದಾಗ, ಕಳವಳಗೊಂಡಾಗ, ಬೆರೆಲ್ಲೂ ದಾರಿ‌ಕಾಣದೇ ನಿಮ್ಮಲ್ಲಿಗೆ ಓಡಿ ಬರುವ‌ ಆಪ್ತ ಮಿತ್ರನ ಕೈ ಹಿಡಿದು‌ ಆತ್ಮೀಯವಾಗಿ ಅವನ ಅoಗೈಯನ್ನು ತಾಕಿ. ಬೆಚ್ಚಗೊಮ್ಮೆ ಅವನ ಕಣ್ಣುಗಳಲ್ಲೊಮ್ಮೆ ಇಣುಕಿ ನೋಡಿ. ಗೊಂದಲ ಗೊಂಡ ಗೆಳೆಯನ ಅರ್ಧ ‌ದುಗುಡು ಕಡಿಮೆಯಾಗಿ ಬಿಡುತ್ತದೆ. ಅದು ಕೇವಲ ಶೇಕ್ ಹ್ಯಾಂಡ್ ಅಲ್ಲ, ನಿನ್ನ ಸಹಾಯಕ್ಕೆ ನಾನೆಂದು‌ ಸಿದ್ಧನಿದ್ದೆನೆಂದು ತಿಳಿಸಿಕೊಡುವ ಅಪರೂಪದ ಸ್ಪರ್ಷ, ಅದು ಜೀವ ಸ್ಪರ್ಷ.

ಮೇಲೆ ಹೇಳಿದ್ದೆಲ್ಲವನ್ನು ನಿಮ್ಮ ಗೆಳೆತನದಲ್ಲಿ ರೂಢಿಸಿಕೊಂಡಲ್ಲಿ ನಿಮ್ಮ ಸ್ನೇಹ ಶಾಶ್ವತವಾಗಿ ಇರುತ್ತದೆ ಎಂದಲ್ಲ. ಲೇಖನಕ್ಕೆ ಮೀರಿ‌ ಇನ್ನೂ ಅನೇಕ ಅಂಶಗಳಿವೆ. ಆದರೆ ಇವುಗಳೂ ಮುಖ್ಯವಾದದ್ದು. ಗೆಳತನದಲ್ಲಿ ಹೊಂದಿ ನಡೆಯುವ ಮನಸ್ಥಿತಿ ಸಮನಾಂತರದಲ್ಲಿ ಚಲಿಸುತ್ತಿದ್ದರೆ, ಮೇಲೆ ಹೇಳಿದ ಅಂಶಗಳನ್ನು ಗೆಳೆತನದಲ್ಲಿ ರೂಢಿಸಿ ಕೊಂಡರೆ ನಿಮ್ಮಿಗೆಳೆತನ ಗಡಿ ದಾಟುವುದಿಲ್ಲ. ‌ಸ್ನೇಹ ಶಾಶ್ವತವಾಗಿರುತ್ತದೆ.

-ಕಾವ್ಯಾ ಜಕ್ಕೊಳ್ಳಿ

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!