Thursday, August 11, 2022

Latest Posts

ಗೋಣಿಕೊಪ್ಪಲು ಗ್ರಾ.ಪಂ. ಸದಸ್ಯರಿಂದ ಅಕ್ರಮ ಕಟ್ಟಡ ನಿರ್ಮಾಣ: ಮಾಹಿತಿ ಹಕ್ಕು ಅಧಿನಿಯಮದ ಮೂಲಕ ಬಹಿರಂಗ

ಟಿಎಲ್‌ಎಸ್
ಮಡಿಕೇರಿ: ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಕಾನೂನನ್ನು ಗಾಳಿಗೆ ತೂರಿ ಅಕ್ರಮವಾಗಿ ಅಂದಾಜು ೩೦ ಲಕ್ಷ ರೂ. ವೆಚ್ಚದ ಮನೆ ನಿರ್ಮಿಸಿರುವ ಹಾಗೂ ವಿದ್ಯುತ್ ನಿಗಮಕ್ಕೆ ತಪ್ಪು ಮಾಹಿತಿ ನೀಡಿ ಗೃಹ ಬಳಕೆಗಾಗಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಹೊಂದಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸಾಮಾಜಿಕ ಕಾರ್ಯಕರ್ತ ವಿ.ಎಸ್.ಸೂರ್ಯ ಅವರು ಮಾಹಿತಿ ಹಕ್ಕು ಅಧಿನಿಯಮದಡಿ ಕೇಳಿದ ಮಾಹಿತಿಯನ್ವಯ ಈ ವಿಷಯ ಬಹಿರಂಗಗೊಂಡಿದೆ.
ಮನೆ ಕಟ್ಟಡ ನಿರ್ಮಾಣಕ್ಕೆ ಅರ್ಜಿದಾರರು ಸಲ್ಲಿಸಿದ ಅರ್ಜಿ ಮತ್ತು ದಾಖಲೆಗಳು, ಕಟ್ಟಡ ಕಟ್ಟುವ ಅನುಮತಿ( ಪರವಾನಗಿ) ಪತ್ರ, ತತ್ಸಂಬಂಧ ಗ್ರಾಮ ಪಂಚಾಯಿತಿಯ ನಿರ್ಣಯ, ತೆರಿಗೆ ನಿರ್ಧರಣೆಯ ಪಟ್ಟಿ, ತೆರಿಗೆ ಪಾವತಿಸಿದ ರಶೀದಿ ಹಾಗೂ ನಿರಾಕ್ಷೇಪಣಾ ಪ್ರಮಾಣ ಪತ್ರದ ನಕಲನ್ನು ನೀಡುವಂತೆ ಕೋರಿ ಜಿ.ಎಸ್.ಸೂರಿಯಾ ಅವರು ಮೇ ೧೮ರಂದು ಮಾಹಿತಿ ಹಕ್ಕು ಮೂಲಕ ಗೋಣಿಕೊಪ್ಪಲು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗೆ ಅರ್ಜಿ ಸಲ್ಲಿಸಿ ೨೦೧೭ನೇ ಇಸವಿಯಿಂದ ೨೦೨೦/೨೧ ನೇ ಸಾಲಿನವರೆಗಿನ ಮಾಹಿತಿ ನೀಡುವಂತೆ ಕೋರಿದ್ದರು. ಆದರೆ, ಈ ಬಗ್ಗೆ ಯಾವುದೇ ನಿರ್ಣಯ ಅಥವಾ ಪರವಾನಗಿ ಹೊಂದಿರುವದು ಗ್ರಾ.ಪಂ. ಗಮನಕ್ಕೆ ಬಂದಿಲ್ಲ ಎಂದು ಪಿಡಿಓ ಶ್ರೀನಿವಾಸ್ ಅರ್ಜಿದಾರರಿಗೆ ಮಾಹಿತಿ ನೀಡಿದ್ದಾರೆ.
ಗೋಣಿಕೊಪ್ಪಲು ಗ್ರಾಮ ಪಂಚಾಯಿತಿಯ ಸದಸ್ಯರೂ ಆಗಿರುವ ಕೆ.ಎಸ್.ಪ್ರಮೋದ್ ಗಣಪತಿ ಎಂಬವರು ಹಾತೂರು ಗ್ರಾ.ಪಂ. ವ್ಯಾಪ್ತಿಯ ಅತ್ತೂರು ಗ್ರಾಮದ ಕುಲ್ಲಚಂಡ ಸುಬ್ಬಯ್ಯ ಅವರ ಕುಟುಂಬಕ್ಕೆ ಸೇರಿದ ರೆಡೀಮ್ಡ್ ಪರಾಧೀನ ಬಾಣೆಯ ಖಾತೆ ನಂ.೩೮ರ ಸರ್ವೆ ನಂ.೧೬೩/೬ಬಿ, ವಾಣಿಜ್ಯ ಕೃಷಿ ಭೂಮಿಯ ಜಾಗದಲ್ಲಿ ಅಂದಾಜು ರೂ.೩೦ ಲಕ್ಷ ವೆಚ್ಚದಲ್ಲಿ ಯಾವುದೇ ಪರವಾನಗಿಯನ್ನು ಹಾತೂರು ಗ್ರಾ.ಪಂ.ನಿಂದಲೂ ಹೊಂದದೆ ಕಟ್ಟಡ ನಿರ್ಮಿಸಿರುವುದಾಗಿ ಸಾಮಾಜಿಕ ಕಾರ್ಯಕರ್ತ ವಿ.ಎಸ್.ಸೂರ್ಯ ಆರೋಪಿಸಿದ್ದಾರೆ.
ಹಾತೂರನಲ್ಲಿ ಮನೆ- ಗೋಣಿಕೊಪ್ಪದಿಂದ ನಿರಾಕ್ಷೇಪಣಾ ಪತ್ರ: ಈ ಕಟ್ಟಡಕ್ಕೆ ಗೋಣಿಕೊಪ್ಪಲಿನ ಕಾರ್ಯ ಮತ್ತು ಪಾಲನಾ ಉಪ ವಿಭಾಗ, ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಇವರಿಂದ ಗೃಹ ಬಳಕೆಯ ಉದ್ದೇಶಕ್ಕಾಗಿ (ಆರ್.ಆರ್.ನಂ.ಜಿಕೆಜಿಎಲ್-೪೧೮೭೯( ಎಲ್‌ಟಿ೨ಎ(೧೧) ರ ಪ್ರಕಾರ ತಾ.೧೦/೦೨/೨೦೨೦ರಂದು) ವಿದ್ಯುತ್ ಸಂಪರ್ಕ ಪಡೆದಿದ್ದು, ಇಲ್ಲೂ ಅಕ್ರಮ ಎಸಗಿರುವದು ಮೇಲ್ನೋಟಕ್ಕೆ ಕಂಡುಬಂದಿದೆ.
ಕೆ.ಎಸ್.ಪ್ರಮೋದ್ ಗಣಪತಿ ಅವರಿಗೆ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿಯ ಲೆಕ್ಕಾಧಿಕಾರಿ ಬಿ.ಸಿ.ಪ್ರಕಾಶ್ ಎಂಬವರು ಪಿಡಿಓ ಮೊಹರು ಬಳಸಿ ಗೃಹ ಬಳಕೆ ವಿದ್ಯುತ್ ಸಂಪರ್ಕಕ್ಕೆ ಅಕ್ರಮವಾಗಿ ನಿರಾಕ್ಷೇಪಣಾ ಪತ್ರ ನೀಡಿರುವದೂ ಬಹಿರಂಗವಾಗಿದೆ. ಈ ಬಗ್ಗೆ ತಮ್ಮ ಗಮನಕ್ಕೆ ಬಂದಿಲ್ಲವೆಂದು ಗೋಣಿಕೊಪ್ಪಲು ಪಿಡಿಓ ಶ್ರೀನಿವಾಸ್ ಅವರು ತಿಳಿಸಿದ್ದಾರೆ.
ಉದ್ದೇಶಿತ ನಿವೇಶನ ಹಾತೂರು ಗ್ರಾಮ ಪಂಚಾಯಿತಿಗೆ ಸೇರಿದ್ದಾಗಿದ್ದು ಗೋಣಿಕೊಪ್ಪಲಿನ ೩ನೇ ವಿಭಾಗದ ೫ನೇ ವಾರ್ಡ್‌ನಲ್ಲಿ ಮನೆ ಇದೆ ಎಂದು ಹೇಳಿ ಗೋಣಿಕೊಪ್ಪಲು ಗ್ರಾ.ಪಂ.ಲೆಕ್ಕಾಧಿಕಾರಿ ಪ್ರಕಾಶ್ ಎಂಬವರಿಂದ ಅಕ್ರಮವಾಗಿ ನಿರಾಕ್ಷೇಪಣಾ ಪತ್ರ ಹೊಂದಿಕೊಂಡು ಸೆಸ್ಕ್‌ಗೆ ನೀಡಿರುವ ಹಿನ್ನೆಲೆಯಲ್ಲಿ ನಿಗಮದಿಂದ ವಿದ್ಯುತ್ ಸಂಪರ್ಕಕ್ಕೆ ಅನುಮತಿ ದೊರಕಿದೆ ಎನ್ನಲಾಗಿದೆ. ಅರ್ಜಿದಾರರು ೨/೦೧/೨೦೨೦ ರಂದು ಸೆಸ್ಕ್‌ಗೆ ರೂ.೨೮,೨೫೦ ಮೊತ್ತ ಪಾವತಿಸಿ, ಮೀಟರ್ ಹಾಗೂ ಮನೆಗೆ ಗೃಹ ಬಳಕೆಗಾಗಿ ಸಂಪರ್ಕ ಹೊಂದಿಕೊಂಡಿದ್ದು, ಇವರು ಹಾತೂರು ಗ್ರಾ.ಪಂ.ನಿಂದ ನಿರಾಕ್ಷೇಪಣಾ ಪತ್ರ ಹೊಂದಿಕೊಳ್ಳಬೇಕಿತ್ತು.
ವಿಶೇಷವೆಂದರೆ ಉದ್ದೇಶಿತ ಮನೆ ನಿರ್ಮಾಣದ ಬಗ್ಗೆ ಹಾತೂರು ಹಾಗೂ ಗೋಣಿಕೊಪ್ಪಲು ಗ್ರಾ.ಪಂ.ಯಲ್ಲಿ ಯಾವದೇ ನಿರ್ಣಯವಾಗಿಲ್ಲ. ಯಾವುದೇ ತೆರಿಗೆಯನ್ನೂ ಪಾವತಿಸಿಲ್ಲ.
ನಿರಾಕ್ಷೇಪಣಾ ಪತ್ರ ಹಿಂದಕ್ಕೆ!?: ಗೋಣಿಕೊಪ್ಪಲು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಯ ಮೊಹರು ಬಳಸಿದ ಲೆಕ್ಕಾಧಿಕಾರಿ ಬಿ.ಸಿ.ಪ್ರಕಾಶ್ ಅವರು ತಮ್ಮ ವಿರುದ್ಧ ಕಾನೂನು ಕ್ರಮ ಜರುಗುವ ಭಯದಿಂದ ತಾವೇ ನೀಡಿದ ನಿರಾಕ್ಷೇಪಣಾ ಪತ್ರವನ್ನು ವಾಪಾಸ್ಸು ಪಡೆದ ಕುತೂಹಲಕಾರಿ ವಿಚಾರ ಹೊರಬಿದ್ದಿದೆ. ಗೋಣಿಕೊಪ್ಪಲು ಗ್ರಾ.ಪಂ. ಪಿಡಿಓ ಮೊಹರನ್ನು ಮತ್ತೊಮ್ಮೆ ಬಳಸಿ ಮೇ೧೯ರಂದು ಗೋಣಿಕೊಪ್ಪಲು ಸೆಸ್ಕ್ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಪತ್ರ ಬರೆದಿರುವ ಲೆಕ್ಕಾಧಿಕಾರಿ ಪ್ರಕಾಶ್ ಅವರು, ಕುಲ್ಲಚಂಡ ಗಣಪತಿ ಇವರಿಗೆ ಕೈ ತಪ್ಪಿನಿಂದ ವಿದ್ಯುತ್ ಸಂಪರ್ಕಕ್ಕಾಗಿ ಎನ್.ಓ.ಸಿ.ಯನ್ನು ತಾ. ೧೯/೦೮/೨೦೧೯ ರಂದು ನೀಡಲಾಗಿದ್ದು, ಈ ಸ್ಥಳವು ಹಾತೂರು ಗ್ರಾ.ಪಂ.ವ್ಯಾಪ್ತಿಗೆ ಒಳಪಡುವದರಿಂದ ವಿದ್ಯುತ್ ಸಂಪರ್ಕವನ್ನು ರದ್ದು ಪಡಿಸಬೇಕು ಎಂದು ಕೋರಿದ್ದಾರೆ.
ಚುನಾವಣಾ ಆಯೋಗಕ್ಕೂ ದೂರು: ಗ್ರಾ.ಪಂ. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ ತನ್ನ ರೂ.೨ ಲಕ್ಷಕ್ಕೆ ಮೀರಿದ ವಸ್ತು ಖರೀದಿ ಅಥವಾ ಆಸ್ತಿ ಬಗ್ಗೆ ಘೋಷಣೆ ಕಡ್ದಾಯವಾಗಿದ್ದು, ಓರ್ವ ಸದಸ್ಯರಾಗಿ ಗ್ರಾ.ಪಂ.ಗೇ ತೆರಿಗೆ ವಂಚನೆ ಮಾಡಿರುವ ಹಿನ್ನೆಲೆ( ಆಸ್ತಿ ಘೋಷಣೆ ಮಾಡದ ಹಿನ್ನೆಲೆ)ಯಲ್ಲಿ ಆ ವ್ಯಕ್ತಿಯ ಸದಸ್ಯತನ ವಜಾಗೊಳಿಸಲು ಕೋರಿ ಚುನಾವಣಾ ಆಯೋಗಕ್ಕೂ ಮನವಿ ಮಾಡಲಾಗುವದು ಮತ್ತು ಅಕ್ರಮ ಕಟ್ಟಡ ನೆಲಸಮಗೊಳಿಸಲು ಜಿಲ್ಲಾಧಿಕಾರಿಗಳಿಗೂ ದೂರು ನೀಡಲಾಗುವದು ಎಂದು ಸಾಮಾಜಿಕ ಕಾರ್ಯಕರ್ತ ವಿ.ಎಸ್.ಸೂರ್ಯ ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss