ಹೊಸದಿಗಂತ ವರದಿ, ಕೊಡಗು:
ಗೋಣಿಕೊಪ್ಪಲು ಶ್ರೀ ಉಮಾ ಮಹೇಶ್ವರಿ ದೇವಸ್ಥಾನದಲ್ಲಿ ಶನಿವಾರದಿಂದ ಮೂರು ದಿನಗಳ ಕಾಲ ಸುಬ್ರಮಣ್ಯ ಷಷ್ಠಿ ಉತ್ಸವ ಜರುಗಲಿದ್ದು, ಶನಿವಾರ ಬೆಳಗ್ಗೆ 6 ಗಂಟೆಗೆ ಮಹಾ ಗಣಪತಿ ಹೋಮದೊಂದಿಗೆ ಪೂಜಾ ವಿಧಿ ವಿಧಾನಕ್ಕೆ ಚಾಲನೆ ನೀಡಲಾಯಿತು.
ದೇವಾಲಯ ಸಮಿತಿ ಅಧ್ಯಕ್ಷ ಮನೆಯಪಂಡ ಬೋಪಣ್ಣ, ನಿರ್ದೇಶಕರಾದ ಜಪ್ಪೆಕೋಡಿ ಉತ್ತಪ್ಪ(ರಾಜ), ಕೊಪ್ಪೀರ ಸನ್ನಿ ಸೋಮಯ್ಯ, ಕೆ.ಪಿ.ಗಣಪತಿ,ವ್ಯವಸ್ಥಾಪಕ ಮಧು ಮುಂತಾದವರು ಉಪಸ್ಥಿತರಿದ್ದರು.
ಭಾನುವಾರ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ತುಲಾಭಾರ, ತಲೆಮುಡಿ, ಹರಕೆ ಸಾಮಾನು ಒಪ್ಪಿಸುವದು, ಅಭಿಷೇಕ ಇತ್ಯಾದಿ ಸೇವೆಗಳು ನಡೆಯಲಿವೆ.
ಸೋಮವಾರ ತುಲಾಭಾರ ಹೊರತು ಪಡಿಸಿ ಇತರೆ ಸೇವೆಗಳು ಇರುತ್ತವೆ. ಮೂರು ದಿನವೂ ಸಾಮೂಹಿಕ ಅನ್ನಸಂತರ್ಪಣೆ ಇರುವುದಿಲ್ಲ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಭಕ್ತಾದಿಗಳು ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು ದೇವತಾ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಆಡಳಿತ ಮಂಡಳಿ ಮನವಿ ಮಾಡಿದೆ.
ಪ್ರತಿಷ್ಠಿತ ಬೈರಂಬಾಡ, ಹರಿಹರ ಇತ್ಯಾದಿ ದೇಗುಲಗಳಲ್ಲಿಯೂ ಸಾಮೂಹಿಕ ಅನ್ನಸಂತರ್ಪಣೆ ಇರುವದಿಲ್ಲ ಎಂದು ತಿಳಿದು ಬಂದಿದೆ.