Monday, August 15, 2022

Latest Posts

ಗೋಮಾತೆಯ ಶಾಪಕ್ಕೆ ಕಾಂಗ್ರೆಸ್ ಬಲಿ: ಸಚಿವ ಕೆ. ಎಸ್. ಈಶ್ವರಪ್ಪ

ಹೊಸ ದಿಗಂತ ವರದಿ, ಬಂಟ್ವಾಳ:

ಗೋಕಳ್ಳರಿಗೆ ಬೆಂಬಲ ನೀಡಿದ ಪರಿಣಾಮ ಗೋಮಾತೆಯ ಶಾಪಕ್ಕೆ ಬಲಿಯಾಗಿ ಕಾಂಗ್ರೆಸ್ ಸರ್ಕಾರನೂ ಹೋಯಿತು, ಸಿದ್ಧರಾಮಯ್ಯ ಮುಖ್ಯಮಂತ್ರಿ ಪದವಿಯನ್ನೇ ಕಳೆದುಕೊಂಡರು, ಚಾಮುಂಡೇಶ್ವರಿ ಕ್ಷೇತ್ರದಲ್ಲೂ ಸೋಲುವಂತಾಯಿತು ಎಂದು ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೆ. ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ.
ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ಬಂಟ್ವಾಳದ ಬಂಟರ ಭವನದಲ್ಲಿ ನಡೆದ ಜನಸೇವಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ದ ವಾಗ್ದಾಳಿ ಮಾಡಿದರು. ಸಿದ್ದರಾಮಯ್ಯ ಪಾಕಿಸ್ಥಾನಕ್ಕೆ ಜಿಂದಾಬಾದ್ ಅಂತ ಹೇಳಿದನ್ನು ಖಂಡಿಸುವ ಯೋಗ್ಯತೆ ಇಲ್ಲದವರು, ಗೋಮಾಂಸ ತಿನ್ನುತ್ತೇನೆ ಅಂತ ಹೇಳುತ್ತಾರೆ, ತಿಂದು ಸಾಯಲಿ ಎಂದು ವ್ಯಂಗ್ಯವಾಡಿದ ಈಶ್ವರಪ್ಪ ಗೋಮಾತೆ ಯನ್ನು ಹಂಗಿಸಿದ ಪಕ್ಷಗಳೆಲ್ಲವೂ ನೆಲಕಚ್ಚಿ ಹೋಗಿದೆ ಎಂದರು.
ನಳೀನ್ ಕುಮಾರ್ ಕಟೀಲು ಬಿಜೆಪಿ ರಾಜಾಧ್ಯಕ್ಷರಾದ ಬಳಿಕ ಪ್ರತಿನಿತ್ಯ ಸಿದ್ಧರಾಮಯ್ಯನವರ ಕನಸಿನಲ್ಲಿ ನಳಿನ್ ಕುಮಾರ್ ಕಟೀಲು ಬರುತ್ತಿದ್ದಾರೆ, ಆ ಹಂತದಲ್ಲಿ ನಳಿನ್‌ಕುಮಾರ್ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಹಳ್ಳಿ ಜನ ಕಾಂಗ್ರೆಸ್‌ಗೆ ಮಣ್ಣುಮುಕ್ಕಿಸಿದ್ದಾರೆ. ೨ ಪಂಚಾಯತಿ ಗೆದ್ದ ಪಕ್ಷ ಪಾಕಿಸ್ಥಾನಕ್ಕೆ ಜೈಕಾರ ಹಾಕುವ ದೇಶದ್ರೋಹದ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.
ಬಿಜೆಪಿಯವರು ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿತ್ತಿದ್ದೇವೆ, ಕಾಂಗ್ರೇಸ್‌ಗೆ ತಾಕತ್ತಿದ್ದರೆ ಬಿಜೆಪಿಯವರು ಕೆಡವಿದ ಬಾಬರ ಮಸೀದಿ ಕಟ್ಟುತ್ತೇವೆಂದು ಜನರ ಬಳಿ ಓಟು ಕೇಳಲಿ. ಅಯೋಧ್ಯೆಯ ರಾಮಮಂದಿರದಂತೆ ಮುಂದೆ ಮಥುರಾದಲ್ಲಿ ಶ್ರೀ ಕೃಷ್ಣನ ಮಂದಿರವನ್ನೂ ಕಟ್ಟುತ್ತೇವೆ ಎಂದರು.
ನಾಲಗೆ ಕಿತ್ತು ಹಾಕುತ್ತೇವೆ
ವಿಜಯೋತ್ಸವದ ವೇಳೆ ಪಾಕಿಸ್ಥಾನ ಜಿಂದಾಬಾದ್ ಎಂದು ಕೂಗಿದವವರ ನಾಲಗೆಯನ್ನು ಕಿತ್ತು ಹಾಕಬೇಕಾದೀತು ಎಂದು ಎಚ್ಚರಿಸಿದ ಈಶ್ವರಪ್ಪ, ಕಾನೂನು ಪಾಲನೆ ಮಾಡುವವರ ಮೂಲಕವೇ ಸೂಕ್ತ ಉತ್ತರ ಕೊಡುವುದಾಗಿ ಹೇಳಿದರು. ನಿಮ್ಮ ತಾಯಿಯೂ ನಮಗೆ ತಾಯಿಯ ಸಮಾನ, ಮುದಿ ಹಸುಗಳನ್ನು ಬಿಜೆಪಿಯವರ ಮನೆ ಮುಂದೆ ಬಿಡುತ್ತೇವೆ ಅಂತ ಕಾಂಗ್ರೇಸ್ ಹೇಳುತ್ತಿದೆ. ಅವರ ತಾಯಿಗೆ ವಯಸ್ಸಾದಾಗ ಹಾಗೆಯೇ ಮಾಡ್ತಾರಾ ಎಂದು ಪ್ರಶ್ನಿಸಿದರು. ಎಲ್ಲಾ ಮುಸ್ಲಿಂಮರು, ಕ್ರೈಸ್ತರು ದೇಶದ್ರೋಹಿಗಳಲ್ಲ. ರಾಷ್ಟ್ರಭಕ್ತರೂ ಇದ್ದಾರೆ. ಆದರೆ ಕಾಂಗ್ರೆಸ್ ಅವರನ್ನು ದೇಶದ್ರೋಹಿಗಳನ್ನಾಗಿ ಮಾಡುತ್ತಿದೆ ಎಂದು ಆರೋಪಿಸಿದರು.
ತರಬೇತಿಯಲ್ಲಿ ಪಾಲ್ಗೊಳ್ಳಿ
ಪಂಚಾಯಿತಿಯಲ್ಲಿ ವಿಜೇತರಾದ ಅಭ್ಯರ್ಥಿಗಳಿಗೆ ತರಬೇತಿ ಗಳನ್ನು ಆಯೋಜಿಸಲಾಗಿದ್ದು ಇದಕ್ಕೆ ರಾಜ್ಯವ್ಯಾಪಿ ೯೦೦ ಸಂಪನ್ಮೂಲ ವ್ಯಕ್ತಿಗಳನ್ನು ಸಿದ್ದರಾಗಿದ್ದಾರೆ. ಗ್ರಾಮಪಂಚಾಯತಿನಲ್ಲಿ ಗೆದ್ದವರು ಸುಮ್ಮನೆ ಇರಬೇಡಿ, ಮತದಾರರ ಋಣ ನಿಮ್ಮ ಮೇಲಿದೆ ಎಂದರು. ಹಳ್ಳಿಗಳ ಅಭಿವೃದ್ಧಿ ಹೆಸರಲ್ಲಿ ಕಾಂಗ್ರೇಸ್ ಕೇವಲ ಭಾಷಣವನ್ನಷ್ಟೇ ಮಾಡಿದೆ, ಆದರೆ ಮೋದಿ ಸರ್ಕಾರ ಬಂದ ಬಳಿಕ ಹಳ್ಳಿಗಳಲ್ಲಿ ವ್ಯಾಪಕ ಅಭಿವೃದ್ಧಿ ಆಗಿದೆ. ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಬನ್ನಿ ಎಂದರು. ಸೋತರೂ ಗೆದ್ದರೂ ಬಿಜೆಪಿ ಕಾರ್ಯಕರ್ತರು ಜನಸೇವಕರೇ. ಯಾವುದೇ ಚುನಾವಣೆ ಬಂದರೂ ಇಂದೂ ಬಿಜೆಪಿ, ಮುಂದೆಯೂ ಬಿಜೆಪಿ ಎಂದರು.
ಪಂಚಾಯತ್‌ಗಳಿಗೆ ಸೋಲಾರ್
ರಾಜ್ಯದ ಎಲ್ಲಾ ಗ್ರಾ.ಪಂ. ಕಟ್ಟಡಗಳಿಗೆ ಸೋಲಾರ್ ಹಾಕಲು ಸರಕಾರ ತೀರ್ಮಾನಿಸಿದೆ, ಗ್ರಾಮದ ಅಂಗನವಾಡಿ ಕೇಂದ್ರಗಳ ದುರಸ್ತಿಗೆ ಹಣಕಾಸಿನ ನೆರವು ಒದಗಿಸುವುದಾಗಿ ತಿಳಿಸಿದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಂಚಾಯತಿ ಸದಸ್ಯರಾಗಿದ್ದು ಮನೆಯಲ್ಲಿ ಆಡಳಿತ ಮಾಡುತ್ತಿದ್ದ ಮಹಿಳೆಯರಿಗೆ ಗ್ರಾಮ ಪಂಚಾಯಿತಿನಲ್ಲಿಆಡಳಿತ ಮಾಡಲು ಕಷ್ಟವೇನಲ್ಲ ಎಂದು ತಿಳಿಸಿದರು. ಗ್ರಾ.ಪಂ.ಗಳಲ್ಲಿ ವಿಜೇತರಾದ ಪಕ್ಷೇತರ ಅಭ್ಯರ್ಥಿಗಳು ಬಿಜೆಪಿಗೆ ಬರಲು ತುದಿಗಾಲಲ್ಲಿ ನಿಂತಿದ್ದು ಅವರನ್ನೆ ಪಕ್ಷಕ್ಕೆ ತರುವ ಕಾರ್ಯ ಆಗಬೇಕಿದೆ, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ೧೫೦ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಸ್ಪಷ್ಟ ಬಹುಮತವನ್ನು ಬಿಜೆಪಿ ಪಕ್ಷ ಪಡೆಯಬೇಕಾಗಿದೆ ಎಂದರು. ಈ ಸಮಾವೇಶದ ಮೂಲಕ ಹಿಂದುತ್ವಕ್ಕೆ ಅಪಚಾರ ಮಾಡುವ ಜನರಿಗೆ ಅವಕಾಶ ಇಲ್ಲ ಎನ್ನುವ ತೀರ್ಮಾನವನ್ನು ತೆಗೆದುಕೊಳ್ಳಬೇಕಾಗಿದೆ, ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಜಾರಿಗೆ ತರುವ ಎಲ್ಲಾ ಯೋಜನೆಗಳನ್ನು ಜನರಿಗೆ ತಲುಪಿಸುವ ಜವಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ೧೪೫ ಗ್ರಾಮಪಂಚಾಯತಿಗಳಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಗೆ ಏರಿದ್ದು, ದ.ಕ. ಜಿಲ್ಲೆ ಬಿಜೆಪಿಯ ಭದ್ರಕೋಟೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಯವರು ಮಾತನಾಡಿ, ಗ್ರಾಮ ಪಂಚಾಯತಿಗಳು ಸದಸ್ಯರ ಕ್ರಿಯಾಶೀಲತೆಯೊಂದಿಗೆ ಹಳ್ಳಿ ಸರ್ಕಾರದಂತೆ ಕಾರ್ಯನಿರ್ವಹಿಸಬೇಕು. ಇದಕ್ಕೆ ಪೂರಕವಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಗ್ರಾಮಮಟ್ಟದಲ್ಲಿಯೇ ವಿತರಿಸಲು ಕ್ರಮಕೈಗೊಳ್ಳಲಿದೆ ಎಂದರು.
ಮುಂದಿನ ದಿನಗಳಲ್ಲಿ ನಡೆಯಲಿರುವ ಗ್ರಾಮಪಂಚಾಯತ್ ಸದಸ್ಯರ ತರಬೇತಿಯನ್ನು ಎಲ್ಲಾ ಸದಸ್ಯರು ಪಡೆದುಕೊಂಡು ಕಾನೂನಿನ ಬಗ್ಗೆಯೂ ತಿಳಿದುಕೊಳ್ಳುವುದು ಅಗತ್ಯ ಎಂದವರು ಕಿವಿಮಾತು ಹೇಳಿದರು. ಪಂಚಾಯತ್ ಸದಸ್ಯರ ಗೌರವಧನವನ್ನು ೨ ಸಾವಿರ ರೂಪಾಯಿಗೆ ಏರಿಕೆ ಮಾಡುವಂತೆ ಸಚಿವರಲ್ಲಿ ಮನವಿ ಮಾಡಿಕೊಂಡರು.
ರಾಜ್ಯಸಭಾ ಸದಸ್ಯ, ಬಿಜೆಪಿ ರೈತ ಮೋರ್ಛಾದ ಅಧ್ಯಕ್ಷ ಈರಣ್ಣ ಕಡಾಡಿ, ವಿಧಾನಪರಿಷತ್ ಸದಸ್ಯ ಎಂ.ಎನ್. ರವಿಕುಮಾರ್ , ಶಾಸಕರಾದ ಸಂಜೀವ ಮಠಂದೂರು, ಎಸ್.ಅಂಗಾರ, ಹರೀಶ್ ಪೂಂಜ, ಡಾ. ವೈ ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು , ಪ್ರತಾಪ ಸಿಂಹ ನಾಯಕ್, ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಸ್ತೂರಿ ಪಂಜ, ರಾಮದಾಸ್ ಬಂಟ್ವಾಳ, ಸುಧೀರ್ ಶೆಟ್ಟಿ ಕಣ್ಣೂರು, ಪಕ್ಷ ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಉದಯಕುಮಾರ್ ಶೆಟ್ಟಿ, ಭರತೇಶ್, ರಾಜೇಶ್ ಕಸ್ತೂರಿ, ಸತೀಶ್ ಕುಂಪಲ, ಸಂತೋಷ್ ಕುಮಾರ್ ರೈ, ನಿತಿನ್ ಕುಮಾರ್ ವೇದಿಕೆಯಲ್ಲಿದ್ದರು. ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಯೋಗಿಶ್ ಭಟ್, ನಾಗರಾಜ ಶೆಟ್ಟಿ ,ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ, ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss