Tuesday, January 19, 2021

Latest Posts

ಗೋಹತ್ಯೆಗೆ ಶಿಕ್ಷೆಯಂತೆ ಗೋ ಮಾಂಸ ತಿನ್ನಲು ಪ್ರಚೋದನೆಗೂ ಶಿಕ್ಷೆಯಾಗಲಿ: ಸಚಿವ ಜಗದೀಶ ಶೆಟ್ಟರ್

ಹೊಸ ದಿಗಂತ ವರದಿ, ಕೊಪ್ಪಳ:

ಗೋಹತ್ಯೆ ಮಾಡಿದವರಿಗೆ ಅಷ್ಟೇ ಶಿಕ್ಷೆ ಅಲ್ಲದೇ ಗೋಮಾಂಸ ತಿನ್ನುತ್ತೇನೆ ಎಂದು ಹಿಂದೂಗಳ ಭಾವನೆಗೆ ಧಕ್ಕೆ ತರುವಂಥವರನ್ನು ಕೂಡ ಜೈಲಿಗೆ ಹಾಕಿ ಶಿಕ್ಷೆ ಕೊಡುವ ಕಠಿಣ ಕಾಯ್ದೆ ತರಬೇಕಾಗಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಮನವಿ ಮಾಡಿದರು.
ಅವರು ನಗರದ ಶಿವಶಾಂತವೀರ ಮಂಗಲ ಭವನದಲ್ಲಿ ಜಿಲ್ಲಾ ಬಿಜೆಪಿಯಿಂದ ಬುಧವಾರ ಏರ್ಪಡಿಸಿದ್ದ ಜನಸೇವಕ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಗೋ ಮಾಂಸ ತಿನ್ನುತ್ತೇನೆ ಎಂದು ಗೋಮಾತೆಗೆ ಅವಮಾನಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಸಿದ್ದರಾಮಯ್ಯಗೆ ನಾಚಿಕೆ ಆಗಬೇಕು. ಪಶು ಸಂಗೋಪನಾ ಸಚಿವ ಪ್ರಭು ಚಹ್ವಾಣ ಅವರು ಗೋಹತ್ಯೆ ನಿಷೇಧ ಕಾನೂನು ಜಾರಿ ಮಾಡಿ ದೊಡ್ಡ ಕೆಲಸ ಮಾಡಿದ್ದಾರೆ. ಗೋಹತ್ಯೆ ಮಾಡಿದರೆ 5 ಲಕ್ಷ ರೂಪಾಯಿ ದಂಡ, 3 ವರ್ಷ ಜೈಲು ಶಿಕ್ಷೆ ವಿಧಿಸುವಂತೆ ಗೋಮಾಂಸ ತಿನ್ನುತ್ತೇನೆ ಎಂದು ಹಿಂದೂಗಳ ಭಾವನೆಗೆ ಧಕ್ಕೆ ತರುವಂಥವರನ್ನು ಜೈಲಿಗೆ ಹಾಕುವುದರ ಜೋತೆಗೆ ಅವರಿಗೂ ಶಿಕ್ಷೆ ನೀಡುವ ಕಾನೂನು ತರಬೇಕು ಎಂದು ಆಗ್ರಹಿಸಿದರು
ಕಾಂಗ್ರೆಸ್ ಚಮಚಾಗಿರಿ ಮಾಡುವವರೆಗೆ ಮಾತ್ರ ಕಿಮ್ಮತ್ತು ನೀಡುತ್ತಿದೆ. ಹೊಗಳಭಟ್ಟರನ್ನು ಬಾಲಬಡಕರನ್ನು ಅಟ್ಟಕ್ಕೇರಿಸುವ ಚಾಳಿ ಕಾಂಗ್ರೆಸ್‍ನಲ್ಲಿದೆ. ಬಿಜೆಪಿಯಲ್ಲಿ ಅದು ನಡೆಯುವುದಿಲ್ಲ ಎಂದು ಹೇಳಿದ ಅವರು, ಈಗಾಗಲೇ ಮುಂದಿನ ಅಧಿಕಾರಕ್ಕಾಗಿ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಜಗಳ ಆರಂಭವಾಗಿದೆ. ಕಾಂಗ್ರೆಸ್‍ನ ರಾಜ್ಯಾಧ್ಯಕ್ಷರು ಮಾತನಾಡುತ್ತಿರುವ ವೇಳೆ ಸಿದ್ದರಾಮಯ್ಯ ಗಡದ್ದಾಗಿ ನಿದ್ದೆ ಮಾಡ್ತಾರೆ. ಇದು ಕಾಂಗ್ರೆಸ್‍ನಲ್ಲಿರುವ ಶಿಸ್ತು. ಕಾರ್ಯಕರ್ತರಿಗೆ ಕಿಮ್ಮತ್ತು ಕೊಡದ ಕಾಂಗ್ರೆಸ್ ಅಧೋಗತಿಯ ಕಡೆ ಹೋರಟಿದೆ ಎಂದರು.
ಕಾಂಗ್ರೆಸ್ ಕಾಟಾಚಾರಕ್ಕೆ ಕಾಂಗ್ರೆಸ್ ಸಂಕಲ್ಪ ಯಾತ್ರೆ ಮಾಡುತ್ತಿದೆ. ಇದು ಕಾಂಗ್ರೆಸ್ ಸಂಕಲ್ಪ ಯಾತ್ರೆಯಲ್ಲ. ಅದು ಅಂತ್ಯ ಯಾತ್ರೆಯಾಗಿದೆ ಎಂದು ಟಿಕಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ನೂತನವಾಗಿ ಚುನಾಯಿತರಾದ ಮಹಿಳೆ ಸದಸ್ಯೆಯರು ರಾಜಕೀಯ ಪ್ರಜ್ಞೆ ಪಡೆದುಕೊಳ್ಳಬೇಕು. ಪತಿ ಅಧಿಕಾರ ನಡೆಸುವ ಸ್ಥಿತಿ ಇರಬಾರದು ಎಂದು ಹೇಳಿದ ಅವರು, ಸಭೆ ಸಮಾರಂಭಗಳಲ್ಲಿ ಗ್ರಾಪಂ ಮಹಿಳಾ ಸದಸ್ಯರೇ ಭಾಗಿಯಾಗಬೇಕು. ಸ್ವತಂತ್ರವಾಗಿ ಆಡಳಿತ ನಡೆಸಿದಾಗ ಮಹಿಳಾ ಮೀಸಲಾತಿಗೆ ನಿಜವಾಗಿ ಅರ್ಥ ಸಿಗುತ್ತದೆ ಎಂದರು.
ಪಶು ಸಂಗೋಪನಾ ಸಚಿವ ಪ್ರಭು ಚಹ್ವಾಣ್ ಮಾತನಾಡಿ, ಬಿಜೆಪಿಯವರಿಗೆ ಗೋವು ತಾಯಿ ಸಮಾನವಾಗಿದೆ. ಆದರೆ ಗೋಹತ್ಯೆ ನಿಷೇಧ ಮಾಡಿದರೆ ಕಾಂಗ್ರೆಸ್‍ನವರಿಗೆ ಸಹಿಸಲು ಆಗುತ್ತಿಲ್ಲ. ಕಾಂಗ್ರೆಸ್‍ನವರಿಗೆ ಗೋವಿನ ಹಾಲು, ಮೊಸರು ಬೇಡ ಅನಿಸುತ್ತೆ. ಅದಕ್ಕೆ ಗೋವಧೆಗೆ ಪ್ರಚೋದನೆ ನೀಡ್ತಾರೆ. ಗೋಮಾತೆಯ ರಕ್ಷಣೆ ಆಗಬೇಕು. ಗೋಮಾತೆಯನ್ನು ನಾವೆಲ್ಲ ರಕ್ಷಿಸಬೇಕು. ಎಲ್ಲ ಜಿಲ್ಲೆಗಳಲ್ಲಿ ಕಸಾಯಿಖಾನೆ ಬಂದ್ ಆಗ್ತವೆ. ಗೋವಧೆ ಮಾಡಿದರೆ ಸುಮ್ಮನಿರಲ್ಲ ಎಂದು ಹೇಳಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್, ಸಂಸದ ಸಂಗಣ್ಣ ಕರಡಿ, ಶಾಸಕರಾದ ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ, ಬಸವರಾಜ ದಡೆಸೂಗೂರು, ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಮಾಲಿಕಯ್ಯ ಗುತ್ತೆದಾರ, ಕೆ ಶರಣಪ್ಪ, ನೇಮಿರಾಜ ನಾಯಕ್, ಶರಣು ತಳ್ಳಿಕೇರಿ, ಸಿದ್ದೇಶ ಯಾದವ್, ಅಮರೇಶ ಕರಡಿ, ಸಿ ವಿ ಚಂದ್ರಶೇಖರ, ಚಂದ್ರಶೇಖರ ಹಲಗೇರಿ ಸೇರಿ ಇತರರು ಉಪಸ್ಥಿತರಿದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!