ಲಖನೌ: ಸುಪ್ರೀಂಕೋರ್ಟ್ ಅಯೋಧ್ಯೆ ತೀರ್ಪಿನ ನಿರ್ದೇಶನದಂತೆ ಸುನ್ನಿ ವಕ್ಫ್ ಮಂಡಳಿಗೆ ನೀಡಿರುವ 5ಎಕರೆ ಭೂಮಿಯಲ್ಲಿ ಮಸೀದಿ ಜತೆಗೆ ಆಸ್ಪತ್ರೆ, ಇಂಡೋ-ಇಸ್ಲಾಮಿಕ್ ಸಂಶೋಧನಾ ಕೇಂದ್ರ ಹಾಗೂ ಗ್ರಂಥಾಲಯವನ್ನೂ ಸ್ಥಾಪಿಸುವುದಾಗಿ ಸೋಮವಾರ ಮಂಡಳಿ ತಿಳಿಸಿದೆ.
ಈ ಕುರಿತು ಮಂಡಳಿ ಅಧ್ಯಕ್ಷ ಜುಫರ್ ಫಾರೂಕಿ, ಸುದ್ದಿ ಗಾರರಿಗೆ ಮಾಹಿತಿ ನೀಡಿದ್ದು, ಸರ್ಕಾರ ನಮಗೆ ನೀಡಿರುವ ಭೂಮಿ ಸ್ವೀಕರಿಸಲು ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ.
ಅಲ್ಲದೆ, ಮಸೀದಿ ನಿರ್ಮಾಣಕ್ಕೆ ಶೀಘ್ರವೇ ಟ್ರಸ್ಟ್ ರಚನೆ ಮಾಡಲಾಗುತ್ತದೆ. ಮಸೀದಿಯ ಪಕ್ಕದಲ್ಲಿ ಇಂಡೋ – ಇಸ್ಲಾಮಿಕ್ ಸಂಶೋಧನಾ ಕೇಂದ್ರ, ಒಂದು ಸಾರ್ವಜನಿಕ ಗ್ರಂಥಾಲಯ, ಒಂದು ಚಾರಿಟೆಬಲ್ ಆಸ್ಪತ್ರೆ ಜತೆಗೆ ಉಪಯುಕ್ತ ಸೌಲಭ್ಯಗಳು ಇರಲಿವೆ ಎಂದರು. ಸ್ಥಳೀಯ ಅಗತ್ಯಗಳನ್ನು ಗಮನದಲ್ಲಿರಿಸಿಕೊಂಡು ಮಸೀದಿಯ ಗಾತ್ರವನ್ನು ನಿರ್ಧರಿಸಲಾಗುತ್ತದೆ ಎಂದಿದ್ದಾರೆ.
2019ರ ನವೆಂಬರ್ ನಲ್ಲಿ ಅಯೋಧ್ಯೆ ರಾಮಜನ್ಮಭೂಮಿ ಪ್ರಕರಣ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಂದಿರ ಪರವಾಗಿ ತೀರ್ಪು ನೀಡಿತು. ಜತೆಗೆ ಮಸೀದಿ ನಿರ್ಮಾಣಕ್ಕಾಗಿ ಸುನ್ನಿ ವಕ್ಫ್ ಮಂಡಳಿಗೆ ಐದು ಎಕರೆ ಜಮೀನು ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೂ ನಿರ್ದೇಶಿಸಿತ್ತು.