ಉಡುಪಿ: ಬೈಂದೂರು ತಾಲೂಕಿನ ಬಿಜೂರು ಗ್ರಾಮ ಲೆಕ್ಕಾಧಿಕಾರಿಯವರ ಮೇಲೆ ಬೈಂದೂರಿನ ಸರಕಾರಿ ವೈದ್ಯ ದೈಹಿಕ ಹಲ್ಲೆ ನಡೆಸಿದ್ದರು ಎನ್ನುವ ಪ್ರಕರಣವು ಆ ವೈದ್ಯರು ಕ್ಷಮೆ ಕೇಳುವುದರೊಂದಿಗೆ ಇತ್ಯರ್ಥಗೊಂಡಿದೆ.
ಗುರುವಾರ ಈ ಪ್ರಕರಣದ ಬಗ್ಗೆ ಕುಂದಾಪುರದ ಉಪವಿಭಾಗಾಧಿಕಾರಿ ಕೆ.ರಾಜು ಅವರ ನೇತೃತ್ವದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಸಂಘ ಮತ್ತು ತಾಲೂಕು ವೈದ್ಯಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಬೈಂದೂರು ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ. ಮಹೇಂದ್ರ ಶೆಟ್ಟಿ ಅವರು ಅಚಾತುರ್ಯಕ್ಕೆ ಬಹಿರಂಗವಾಗಿ ಕ್ಷಮೆ ಕೇಳಿದರು.
ಬಿಜೂರು ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಅಂಜನಪ್ಪ ಸೋಗಿ ಅವರು ಹಿರಿಯ ಅಧಿಕಾರಿಗಳ ಆದೇಶದಂತೆ ಕಳೆದ ಮೂರು ತಿಂಗಳಿಂದ ಕೋವಿಡ್-19 ಬಗ್ಗೆ ಟೋಲ್ ಗೇಟ್, ಹೊರರಾಜ್ಯದಿಂದ ಬಂದಂತಹ ಪ್ರಯಾಣಿಕರನ್ನು ಸರ್ಕಾರಿ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸುವ ಹಾಗೂ ಕ್ವಾರಂಟೈನ್ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಪ್ರಸ್ತುತ ಅವರಿಗೆ ತಮ್ಮ ಆರೋಗ್ಯದ ಬಗ್ಗೆ ಅನುಮಾನವಾಗಿ ಕಂದಾಯ ಇಲಾಖೆ ಗುರುತು ಚೀಟಿ ಧರಿಸಿ ಬುಧವಾರ ಬೆಳಗ್ಗೆ 11ಗಂಟೆಗೆ ಬೈಂದೂರು ತಾಲೂಕು ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿ, ಕೋವಿಡ್ ತಪಾಸಣೆಗಾಗಿ ಕರ್ತವ್ಯ ನಿರತ ವೈದ್ಯಾಧಿಕಾರಿಗಳನ್ನು ಭೇಟಿ ಮಾಡಿ, ನಾನು ಕಂದಾಯ ಇಲಾಖೆಯ ನೌಕರ. ನನಗೆ ಕೋವಿಡ್ ಪರೀಕ್ಷೆ ಮಾಡಿಸಬೇಕೆಂದು ಮನವಿ ಮಾಡಿಕೊಂಡರು. ಆಗ ಆ ವೈದ್ಯರು ಏಕಾಏಕಿ ಅವಾಚ್ಯ ಶಬ್ದಗಳಿಂದ ಬೈದು, ಕುತ್ತಿಗೆ ಪಟ್ಟಿ ಹಿಡಿದು ದೂಡಿ, ಮೊಬೈಲ್ ಕಸಿದುಕೊಂಡು ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘ ಬೈಂದೂರು ತಾಲೂಕು ಘಟಕವು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ವೈದ್ಯರ ದುರ್ನಡತೆಯನ್ನು ತಾಲೂಕು ಗ್ರಾಮ ಲೆಕ್ಕಿಗರ ಸಂಘ ತೀವ್ರವಾಗಿ ಖಂಡಿಸಿತ್ತು. ಆ ವೈದ್ಯರ ಮೇಲೆ ಶಿಸ್ತು ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿತ್ತು.
ಈ ಬಗ್ಗೆ ಗುರುವಾರ ಕುಂದಾಪುರ ಉಪವಿಭಾಗಾಧಿಕಾರಿ ಅವರ ನೇತೃತ್ವದಲ್ಲಿ ಗ್ರಾಮ ಲೆಕ್ಕಿಗರ ಸಂಘ, ತಾಲೂಕು ವೈದ್ಯಾಧಿಕಾರಿಗಳು, ಸಂಬಂಧಪಟ್ಟ ವೈದ್ಯರ ಸಭೆ ಕರೆ ನಡೆಸಿ ಪ್ರಕರಣವನ್ನು ಶಾಂತಿಯುತವಾಗಿ ಇತ್ಯರ್ಥ ಮಾಡಲಾಯಿತು.