Sunday, August 14, 2022

Latest Posts

ಗ್ರಾಮ ಪಂಚಾಯತ್ ಗಳಲ್ಲಿ ಜನರ ಅಗತ್ಯ ಸೇವೆಗಳಿಗೆ ಪವರ್ ಕಟ್ ನೆಪ ಹೇಳುವಂತಿಲ್ಲ: ಸಚಿವ ಈಶ್ವರಪ್ಪ

ಹೊಸದಿಗಂತ ವರದಿ,ಉಡುಪಿ:

ರಾಜ್ಯದ ಗ್ರಾಮ ಪಂಚಾಯತ್ ಗಳಲ್ಲಿ ಜನರ ಅಗತ್ಯ ಸೇವೆಗಳಿಗೆ ಪವರ್ ಕಟ್ ನೆಪ ಹೇಳುವ ಸಂದರ್ಭ ಇನ್ನು ಮುಂದೆ ನೀಡುವಂತಿಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇದಕ್ಕಾಗಿ ಹೊಸ ಯೋಜನೆಯೊಂದನ್ನು ರೂಪಿಸಿದೆ.

ಮಂಗಳವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಲಾಖಾ ಸಚಿವ ಕೆ.ಎಸ್. ಈಶ್ವರಪ್ಪ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.  ರಾಜ್ಯದ ಎಲ್ಲ ಗ್ರಾಮ ಪಂಚಾಯತ್ ಗಳಿಗೆ ಸೋಲಾರ್ ವ್ಯವಸ್ಥೆ ಅಳವಡಿಕೆಗೆ 300 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಈಗಾಗಲೇ ಸೋಲಾರ್ ವ್ಯವಸ್ಥೆ ಅಳವಡಿಕೆಗೆ ಟೆಂಡರ್ ಪೂರ್ಣಗೊಂಡಿದ್ದು, 9-10 ಕಂಪನಿಗಳನ್ನು ಅಂತಿಮಗೊಳಿಸಲಾಗಿದೆ. ಜಿಲ್ಲಾವಾರು ಕಂಪನಿಗಳನ್ನು ಆಯ್ಕೆ ಮಾಡಲಾಗಿದೆ. ಟೆಂಡರ್ ಪಡೆದ ಕಂಪನಿಗಳಿಗೆ 5 ವರ್ಷಗಳ ನಿರ್ವಹಣೆ ಜವಾಬ್ದಾರಿ ವಹಿಸಲಾಗಿದೆ ಎಂದರು.

ಗ್ರಾ.ಪಂ.ಗಳಲ್ಲಿ ಸೋಲಾರ್ ವ್ಯವಸ್ಥೆ ಜಾರಿಯಾದರೆ ವಿದ್ಯುತ್ ಬಿಲ್ ಪಾವತಿ ಸಮಸ್ಯೆ ನಿವಾರಣೆಯಾಗಲಿದೆ. ಪಂಚಾಯತ್ ಗಳು ಉತ್ಪಾದಿಸುವ ಹೆಚ್ಚುವರಿ ವಿದ್ಯುತ್ ಅನ್ನು ಗ್ರಿಡ್‌ಗಳಿಗೆ ಮಾರಾಟ ಮಾಡಬಹುದು. ಸಾರ್ವಜನಿಕರಿಗೆ ಸರ್ಕಾರದ ಸೇವೆಗಳು ತ್ವರಿತವಾಗಿ ಸಿಗಲು ಅನುಕೂಲವಾಗಲಿದೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.

ಗ್ರಾ.ಪಂ.ಗಳಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಸೋಲಾರ್ ಉಪಕರಣಗಳ ಅಳವಡಿಕೆ ಆರಂಭವಾಗಲಿದೆ. ಪ್ರತೀ ಪಂಚಾಯತ್ ಗೆ 3ರಿಂದ 3.5ಲಕ್ಷ ರೂ. ವೆಚ್ಚ ತಗುಲಲಿದೆ ಎಂದು ಸಚಿವ ಈಶ್ವರಪ್ಪ ಹೇಳಿದರು.
ಜನ ಸಂಖ್ಯೆ ಆಧಾರದಲ್ಲಿ ಅನುದಾನ  ಸ್ವಚ್ಛ ಭಾರತ್ ಯೋಜನೆಯಲ್ಲಿ ಈ ಹಿಂದೆ ಪ್ರತೀ ಗ್ರಾ.ಪಂ.ಗೆ 20ಲಕ್ಷ ರೂ. ನೀಡಲಾಗುತ್ತಿತ್ತು.

ಇದೀಗ ಕೇಂದ್ರ ಸರಕಾರ ಸ್ವಚ್ಛ ಭಾರತ್ ಮಿಷನ್ ನಲ್ಲಿ ಪ್ರತೀ ಪಂಚಾಯತ್ ಗೆ ಅಲ್ಲಿನ ಜನಸಂಖ್ಯೆಯ ಆಧಾರದಲ್ಲಿ ಅನುದಾನ ನೀಡಲು ನಿರ್ಧರಿಸಿದೆ. ಆದ್ದರಿಂದ ದೊಡ್ಡ ಗ್ರಾ.ಪಂ.ಗೆ ಹೆಚ್ಚು ಅನುದಾನ ಸಿಗಲಿದೆ ಎಂದ ಸಚಿವ ಈಶ್ವರಪ್ಪ, ಕರ್ನಾಟಕಕ್ಕೆ ನರೇಗಾ ಯೋಜನೆಯಲ್ಲಿ 800 ಕೋಟಿ ರೂ. ಹೆಚ್ಚುವರಿ ಅನುದಾನವನ್ನು ಕೇಂದ್ರ ನೀಡಿದೆ. ಈಗಾಗಲೇ ರಾಜ್ಯಕ್ಕೆ ನಿಗದಿ ಮಾಡಿದ 13 ಕೋಟಿ ಮಾನವ ದಿನಗಳಲ್ಲಿ 10.50 ಕೋಟಿ ದಿನಗಳನ್ನು ಪೂರ್ಣಗೊಳಿಸಲಾಗಿದೆ. ಪ್ರಸ್ತುತ ಉದ್ಯೋಗ ಚೀಟಿ ಹೊಂದಿರುವ ಒಬ್ಬ ವ್ಯಕ್ತಿಗೆ ಇರುವ 100 ಮಾನವ ದಿನಗಳ ಬದಲು 150 ದಿನಗಳನ್ನು ಕೊಡುವ ಭರವಸೆ ಕೇಂದ್ರ ನೀಡಿದೆ ಎಂದು ತಿಳಿಸಿದರು.

ಈ ಮೊದಲು ಒಂದು ಗ್ರಾಮ ಪಂಚಾಯತ್ ಗೆ ಒಂದು ವರ್ಷಕ್ಕೆ 30-35 ಲಕ್ಷ ರೂ. ಅನುದಾನ ಬರುತ್ತಿತ್ತು. ಈಗ ವಿವಿಧ ಯೋಜನೆಗಳಲ್ಲಿ ಗ್ರಾ.ಪಂ.ಗೆ 1ಕೋಟಿ ರೂ. ಅನುದಾನ ಬರುವಂತೆ ಕಾರ್ಯಕ್ರಮ ರೂಪಿಸಲಾಗಿದೆ. ರಾಜ್ಯ ಸರಕಾರವೂ ನಾನಾ ಯೋಜನೆಯಲ್ಲಿ ಅನುದಾನ ನೀಡಲಾಗುತ್ತದೆ ಎಂದು ಗ್ರಾಮಾಭಿವೃದ್ಧಿ ಸಚಿವ ಈಶ್ವರಪ್ಪ ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss