Wednesday, August 10, 2022

Latest Posts

ಗ್ರಾ.ಪಂ. ಗಳಿಗೆ ಆಯ್ಕೆಯಾದ ಬಿಜೆಪಿ ಅಭ್ಯರ್ಥಿಗಳಿಗೆ ಅಧಿಕಾರದ ಪಿತ್ತ ಹತ್ತಿರಕ್ಕೆ ಬಾರದಿರಲಿ: ಸಿ. ಟಿ. ರವಿ

ಹೊಸ ದಿಗಂತ ವರದಿ ಶಿವಮೊಗ್ಗ:

ಬಿಜೆಪಿಯಿಂದ ಗ್ರಾ.ಪಂ. ಗಳಿಗೆ ಆಯ್ಕೆ ಆದವರಿಗೆ ಅಧಿಕಾರದ ಪಿತ್ತ ಹತ್ತಿರಕ್ಕೆ ಬಾರದಿರಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಎಚ್ಚರಿಕೆ ನೀಡಿದ್ದಾರೆ.

ನಗರದ ಪೆಸಿಟ್ ಕಾಲೇಜು ಸಭಾಂಗಣದಲ್ಲಿ ಬುಧವಾರ ಜನಸೇವಕ ಸಮಾವೇಶದಲ್ಲಿ ಮಾತನಾಡಿ, ಯಾರೇ ಗೆದ್ದರೂ ಹೆಚ್ಚು ಎಚ್ಚರಿಕೆ ಅಗತ್ಯ. ನಮ್ಮ ನಡವಳಿಕೆಯನ್ನು ಜನ ನೋಡುತ್ತಾ ಇರುತ್ತಾರೆ. ನಡವಳಿಕೆ ಗೌರವ ತರುವಂತೆ ಇರಲಿ. ಗೆದ್ದ ನಂತರ ಜನರನ್ನು ಮರೆತರೆ ಈಗ ನೋಡು ಸೊಕ್ಕು ಎಂದು ಜನ ಹೇಳುತ್ತಾರೆ. ಇದರ ಜೊತೆಗೆ ಅಭಿವೃದ್ಧಿ ಕಡೆಗೂ ಗಮನ ಕೊಡಬೇಕು ಎಂದರು.

ಬಿಜೆಪಿಯನ್ನು ಆರಂಭದಲ್ಲಿ ಧೋ ನಂಬರ್ ಪಾರ್ಟಿ ಎಂದು ಲೇವಡಿ ಮಾಡುತ್ತಿದ್ದರು. ಇಬ್ಬರು ಎಂಎಲ್ಎ, ಇಬ್ಬರು ಎಂಪಿ ಮಾತ್ರ ಆಗ ಇದ್ದರು. ಅದೆಲ್ಲ ಪರಿಸ್ಥಿತಿಯನ್ನು ಆತ್ಮವಿಶ್ವಾಸದಿಂದ ಎದುರಿಸಿ, ಸೈದ್ಧಾಂತಿಕ ಬದ್ಧತೆಯೊಂದಿಗೆ ಕೆಲಸ ಮಾಡಿದ್ದರಿಂದ ಜಗತ್ತಿನಲ್ಲೇ ಹೆಚ್ಚು ಸದಸ್ಯರು,  ಹೆಚ್ಚು ಸಂಸದರು, ಹೆಚ್ಚು ಶಾಸಕರನ್ನು ಹೊಂದಿರುವ ಪಕ್ಷವಾಗಿ ಹೊರಹೊಮ್ಮಿದೆ. ಪಕ್ಷದ ಬೇರು ಎಷ್ಟು ಆಳವಾಗಿ ಬಿಟ್ಟಿದೆ ಎಂಬುದಕ್ಕೆ ಇತ್ತೀಚಿನ ಗ್ರಾಪಂ ಚುನಾವಣೆ ಸಾಕ್ಷಿ ಎಂದರು.

ಕಾಂಗ್ರೆಸ್ ನಲ್ಲಿ ಅಜ್ಜ ಗರೀಬಿ ಹಠಾವೋ ಎಂದರು. ನಂತರ ಅಜ್ಜಿ, ಅಪ್ಪ ಅದನ್ನೇ ಅಂದರು. ಈಗ ಮಕ್ಕಳು, ಮೊಮ್ಮಕ್ಕಳು ಅದನ್ನೇ ಹೇಳುತ್ತಿದ್ದಾರೆ. ಇದನ್ನು ಹೇಳುತ್ತಾ ಪಕ್ಷದ ನೇತಾರರಲ್ಲಿ ಬದಲಾವಣೆ ಆಯಿತೇ ಹೊರತು ಜನರ ಬದುಕಿನಲ್ಲಿ ಬದಲಾವಣೆ ಆಗಲಿಲ್ಲ.  ಈಗ ಬಿಜೆಪಿ ಐತಿಹಾಸಿಕ ತಪ್ಪುಗಳನ್ನು ಸರಿಪಡಿಸುವ ಕೆಲಸ ಮಾಡುತ್ತಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss