ಹೊಸ ದಿಗಂತ ವರದಿ, ಹಾವೇರಿ:
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿರುವುದು ಬಹಳ ಸಂತಸ ತಂದಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರಸಕ್ತ ಗ್ರಾ.ಪಂ. ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಮತದಾರ ಪ್ರಭುಗಳು ಬೆಂಬಲವನ್ನು ಸೂಚಿಸಿದ್ದಾರೆ. ಮತದಾರರಿಗೆ ಹಾಗೂ ಆಯ್ಕೆಯಾಗಿರುವ ನೂತನ ಸದಸ್ಯರಿಗೆ ಹಾರ್ಧಿಕ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಆಯ್ಕೆಗೆ ಹಗಲಿರುಳು ಶ್ರಮಿಸಿದ ಹಾಗೂ ಪ್ರಯತ್ನಿಸಿದ ಲೋಕಸಭೆ, ವಿಧಾನ ಸಭೆ, ವಿಧಾನ ಪರಿಷತ್, ಜಿಲ್ಲಾ, ತಾಲೂಕ ಪಂಚಾಯತಿ ಸದಸ್ಯರು ಮತ್ತು ಎಲ್ಲ ಹಂತದ ಜನ ಪ್ರತಿನಿಧಿಗಳು ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ವಿಶೇಷವಾಗಿ ಮತದಾರರಿಗೆ ಅನಂತ ಕೃತಜ್ಞತೆಗಳ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇವರ ನಾಯಕತ್ವದ ಬಿಜೆಪಿ ಸರಕಾರ ಕೋವಿಡ್ ಖಾಯಿಲೆ ಹಾಗೂ ನೆರೆ ಹಾವಳಿಯ ಕಠಿಣ ಸಮಸ್ಯೆಗಳನ್ನು ಯಶಸ್ವಿಯಾಗಿ ಎದುರಿಸಿ ಹಾಗೂ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಗ್ರಾಮೀಣ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಹೆಚ್ಚು ಹೆಚ್ಚು ಕಾರ್ಯಗಳನ್ನು ಮತದಾರರು ಮೆಚ್ಚಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಸಂಪೂರ್ಣ ಸಹಕಾರ, ಸಹಾಯ ನೀಡಿದ್ದಾರೆ ಎಂಬುದು ಈ ಚುನಾಣೆಯಲ್ಲಿ ಸಾಬಿತಾಗಿದೆ ಎಂದಿರುವರು.
ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಚುನಾಯಿತ ಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಲು ಹಾಗೂ ಪ್ರೋತ್ಸಾಹಿಸಲು ಸರ್ವ ರೀತಿಯ ಸಹಕಾರ ಸತತವಾಗಿ ದೊರೆಯಲೆಂದು ವಿನಂತಿಸಿಕೊಂಡಿದ್ದಾರೆ.