Wednesday, June 29, 2022

Latest Posts

ಗ್ರಾ.ಪಂ. ಚುನಾವಣೆ: ಭಾನುವಾರ ಸಂಜೆಯಿಂದ ನಿಷೇಧಾಜ್ಞೆ ಜಾರಿ

 ಹೊಸದಿಗಂತ ವರದಿ,ಮಡಿಕೇರಿ:

ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ ನೀತಿಸಂಹಿತೆ ಜಾರಿಯಲ್ಲಿರುವ ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಯಲ್ಲಿ ಡಿ. 20 ರ ಸಂಜೆ 5 ಗಂಟೆಯಿಂದ 22 ರ ಸಂಜೆ 5 ಗಂಟೆಯೊಳಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶಿಸಿದ್ದಾರೆ.
ಈ ಅವಧಿಯಲ್ಲಿ ಅಭ್ಯರ್ಥಿ ಅಥವಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪಕ್ಷದ ಪರ ಮತಯಾಚನೆ ನಡೆಸುವುದನ್ನು ಹೊರತುಪಡಿಸಿ, ಉಳಿದಂತೆ ಗ್ರಾಮ ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಸಭೆ-ಸಮಾರಂಭ ನಡೆಸುವುದು, ಮೆರವಣಿಗೆ ಇನ್ನಿತರೆ ಕಾರ್ಯಕ್ರಮ ನಡೆಸುವುದು, ಛಾಯಾಗ್ರಹಣ, ದೂರದರ್ಶನ ಅಥವಾ ಇತರ ರೀತಿಯ ಉಪಕರಣಗಳ ಮೂಲಕ ಯಾವುದೇ ಚುನಾವಣಾ ವಿಷಯವನ್ನು ಸಾರ್ವಜನಿಕರಿಗೆ ಪ್ರದರ್ಶಿಸುವುದನ್ನು ನಿಷೇಧಿಸಿದೆ ಎಂದು ಅವರು ಹೇಳಿದ್ದಾರೆ.
ಅಭ್ಯರ್ಥಿ ಅಥವಾ ಕಾರ್ಯಕರ್ತರು ಮತದಾರರನ್ನು ಮತಗಟ್ಟೆಗೆ ವಾಹನದಲ್ಲಿ ಕರೆತರುವುದು ಹಾಗೂ ಅಲ್ಲಿಂದ ಕರೆದುಕೊಂಡು ಹೋಗುವುದನ್ನು ನಿಷೇಧಿಸಿದೆ. ಐದಕ್ಕಿಂತ ಹೆಚ್ಚಿಗೆ ಜನ ಗುಂಪು ಸೇರುವುದು, ಸಂಚರಿಸುವುದು ಮುಂತಾದವುಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಎಲ್ಲಾ ಮತಗಟ್ಟೆಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯ ಸ್ಥಳ ನಿರ್ಬಂಧಿತ ಪ್ರದೇಶವಾಗಿದ್ದು, ಈ ಪ್ರದೇಶದಲ್ಲಿ ಖಾಸಗಿ ವಾಹನಗಳ ನಿಲುಗಡೆ, ಧ್ವನಿವರ್ಧಕ ಬಳಕೆ ಮುಂತಾದವುಗಳನ್ನು ನಿಷೇಧಿಸಿದೆ ಹಾಗೂ ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಅಭ್ಯರ್ಥಿ ಪರ ಪ್ರಚಾರ, ಮತದಾರರ ಓಲೈಕೆ ಮುಂತಾದವುಗಳನ್ನು ಮಾಡುವಂತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದ್ದು, ಅಭ್ಯರ್ಥಿಗಳು ಪ್ರಚಾರದಲ್ಲಿ ತೊಡಗಿಕೊಂಡಿರುತ್ತಾರೆ. ಈ ಹಿನ್ನಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪ್ರತಿ ಎರಡು-ಮೂರು ಗ್ರಾ.ಪಂ.ಗಳಿಗೆ ಒಬ್ಬ ಹಿರಿಯ ಅಧಿಕಾರಿಯನ್ನು ಸೆಕ್ಟರ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss