ಹೊಸದಿಗಂತ ವರದಿ,ಸೋಮವಾರಪೇಟೆ:
ಸೋಮವಾರಪೇಟೆ ತಾಲೂಕಿನ ಚೌಡ್ಲು ಗ್ರಾಮ ಪಂಚಾಯತ್ನ ಬಿಜೆಪಿ ಬೆಂಬಲಿತ ಅಭ್ಯರ್ಥಿಯೊಬ್ಬರು ಲಾಟರಿ ಮೂಲಕ ಆಯ್ಕೆಯಾಗಿದ್ದಾರೆ.
ಚೌಡ್ಲು ಪಂಚಾಯತ್ನ ವಾರ್ಡ್ ನಂ.1 ಆಲೆಕಟ್ಟೆ ರಸ್ತೆಯ ಪರಿಶಿಷ್ಟ ಜಾತಿ ಮಹಿಳೆ ಮೀಸಲು ಕ್ಷೇತ್ರದಿಂದ ಸ್ಪರ್ದಿಸಿದ್ದ ಸತ್ಯ ಹಾಗೂ ಲೋಲಾಕ್ಷಿ ತಲಾ 210 ಮತಗಳನ್ನು ಪಡೆದು ಸಮಬಲ ಸಾಧಿಸಿದ್ದರು. ಚುನಾವಣಾಧಿಕಾರಿ ತಹಶೀಲ್ದಾರ್ ಗೋವಿಂದರಾಜು ಸೂಚನೆಯಂತೆ ಲಾಟರಿ ಹಾಕಿದ ಸಂದರ್ಭ ಬಿ.ಜೆ.ಪಿ. ಬೆಂಬಲಿತ ಅಭ್ಯರ್ಥಿ ಸತ್ಯ ವಿಜೇತರಾಗಿದ್ದಾರೆ.ಚುನಾವಣೆ ಸಂದರ್ಭ ಸತ್ಯ ಪರವಾಗಿ ಹಾಕಲಾಗಿದ್ದ ಮತ ಪತ್ರವೊಂದು ಮತಪೆಟ್ಟಿಗೆಯ ಹೊರಗೆ ಬಿದ್ದಿದ್ದು ಅದು ಮೌಲ್ಯ ಕಳೆದುಕೊಂಡಿತ್ತು.
ತಂಗಿಯನ್ನು ಸೋಲಿಸಿದ ಅಕ್ಕ: ಮಡಿಕೇರಿ ತಾಲೂಕಿನ ಬಿಳಿಗೇರಿ ವಾರ್ಡ್ನಿಂದ ಸ್ಪರ್ಧಿಸಿದ್ದ ಬಿ.ಎನ್. ಪುಷ್ಪಾ ಎಂಬವರು ತಮ್ಮ ತಂಗಿಯ ವಿರುದ್ಧವೇ ಜಯಗಳಿಸಿದ್ದಾರೆ. ಪುಷ್ಪಾ ಅವರು ತಮ್ಮ ಪತಿಯ ಸಹೋದರನ ಹೆಂಡತಿ ಸುಮಾವತಿಯ ಪ್ರತಿಸ್ಪರ್ಧಿಯಾಗಿದ್ದರು. ಪುಷ್ಪಾ ಅವರು 97 ಮತಗಳ ಅಂತರದಿಂದ ತಂಗಿಯನ್ನು ಪರಾಭವಗೊಳಿಸಿದ್ದಾರೆ.
ಪತಿ-ಪತ್ನಿ ಗೆಲುವು: ಇದೇ ಪಂಚಾಯತ್ನ ಬಿಳಿಗೇರಿ 2ನೇ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಪತಿ ಹಾಗೂ ಪತ್ನಿ ಗೆಲುವು ಸಾಧಿಸಿದ್ದಾರೆ. ಪಕ್ಷೇತರರಾಗಿದ್ದ ಅಬ್ದುಲ್ ಖಾದರ್ ಹಾಗೂ ಅವರ ಪತ್ನಿ ಸಾಕಿರಾ ವಿಜೇತರು. ಸಾಕಿರಾ ಎಂಎಡ್ ಪದವೀಧರೆಯಾಗಿದ್ದು, ಚುನಾವಣೆಯಲ್ಲಿ ಯಾವುದೇ ಪ್ರಚಾರ ಮಾಡಿರಲಿಲ್ಲ,. ಪತ್ನಿ ಪರವಾಗಿ ಅಬ್ದುಲ್ ಖಾದರ್ ಅವರೇ ಮತ ಯಾಚಿಸುವ ಮೂಲಕ ತನ್ನೊಂದಿಗೆ ಪತ್ನಿಯನ್ನೂ ಗೆಲ್ಲಿಸಿದ್ದಾರೆ.