Wednesday, July 6, 2022

Latest Posts

ಚನ್ನಪಟ್ಟಣಕ್ಕೆ ನಾನೇ ಮಂತ್ರಿ, ನಾನೇ ಸರ್ಕಾರ ಎಂದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ!

ಹೊಸ ದಿಗಂತ ವರದಿ, ರಾಮನಗರ:

ಕ್ಷೇತ್ರದ ಅಭಿವೃದ್ದಿಗೆ ಹಣ ಬಿಡುಗಡೆ ಮಾಡಲು ಮಖ್ಯಮಂತ್ರಿಗಳನ್ನ ಭೇಟಿ ಮಾಡಿದ್ದೇನೆ, ಅದರ ಹೊರೆತಾಗಿ ರಾಜಕೀಯವಾಗಿ ಯಾವುದೇ ವಿಚಾರವನ್ನು ಚರ್ಚೆ ಮಾಡಿಲ್ಲ ಯಡಿಯೂರಪ್ಪ ಯಾರನ್ನೋ ಮಂತ್ರಿ ಮಾಡಿದರೆ ನಾನು ಹೆದರಿಕೊಳ್ಳುವ ವ್ಯಕ್ತಿಯಲ್ಲ, ಚನ್ನಪಟ್ಟಣಕ್ಕೆ ನಾನೇ ಮಂತ್ರಿ, ನಾನೇ ಸರ್ಕಾರ ಎಂದು ಮಾಜಿ ಸಿಎಂ, ಶಾಸಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಅವರು ಪಟ್ಟಣದ ಡಿ.ಟಿ.ರಾಮು ಸರ್ಕಲ್ ಬಳಿ ಸಾತನೂರು ಸರ್ಕಲ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯ ವೈಟ್ ಟ್ಯಾಪಿಂಗ್ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಕ್ಷೇತ್ರದ ಅಭಿವೃದ್ದಿ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೇನೆಯೇ ವಿನಃ ಯಾರನ್ನೋ ಮಂತ್ರಿ ಮಾಡಬೇಡಿ ಎಂದು ಹೇಳುವುದಕ್ಕಲ್ಲ, ಯಡಿಯೂರಪ್ಪ ನಮ್ಮ ಜಿಲ್ಲೆಯವರನ್ನೇ ನಾಲ್ಕು ಜನರನ್ನು ಮಂತ್ರಿ ಮಾಡಲಿ, ಯಾರನ್ನು ಮಂತ್ರಿ ಮಾಡಬೇಡಿ ಎಂದು ಹೇಳುವಷ್ಟು ಕೀಳು ಮಟ್ಟಕ್ಕೆ ಇಳಿಯುವುದಿಲ್ಲ ಎಂದರು.
ಎಂಥೆoತವರನ್ನ ನಮ್ಮ ಕುಟುಂಬ ನೋಡಿದೆ, ಇಲ್ಲಿ ಯಾರೋ ಮಂತ್ರಿಯಾದ್ರೆ ಹೆದರಿಕೊಂಡು ಹೋಗುವ ಜಾಯಮಾನ ನಮ್ಮದಲ್ಲ, ಇಲ್ಲೊಬ್ಬರು ೨೦ ಕೆರೆ ತುಂಬಿಸಿರುವುದಕ್ಕೆ ಭಗೀರಥ ಆಗಿಬಿಟ್ರು, ನಾನು ೧೨೮ ಕೆರೆ ತುಂಬಿಸಿದ್ದೇನೆ ಹಾಗಂತ ಬೋರ್ಡ್ ತಗಲಾಕಿಕೊಂಡು ಓಡಾಡಲು ಆಗುತ್ತಾ, ನಾನು ಪ್ರಮಾಣಿಕವಾಗಿ ಕೆಲಸ ಮಾಡಿರುವ ವ್ಯಕ್ತಿ ಎಂದು ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ವಿರುದ್ದ ಪರೋಕ್ಷವಾಗಿ ಹರಿಹಾಯ್ದರು. ಕ್ಷೇತ್ರ ಅಭಿವೃದ್ದಿಗೆ ಹಣ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳನ್ನ ಭೇಟಿ ಮಾಡಿದ್ದೇನೆ, ಅದರ ಹೊರತಾಗಿ ರಾಜಕೀಯವಾಗಿ ಯಾವುದೇ ವಿಚಾರವನ್ನು ಚರ್ಚೆ ಮಾಡಿಲ್ಲ, ಮಂತ್ರಿ ಮಾಡಬೇಡಿ ಎಂದು ಹೇಳಲು ಭೇಟಿಯಾಗಿದ್ದಾರೆ ಎಂದು ಕೆಲವರು ಹೇಳಿಕೊಂಡು ತಿರುಗುತ್ತಿದ್ದಾರೆ, ಅವರು ಮಂತ್ರಿಯಾದರೇನು ಬಿಟ್ಟರೇನು, ನನ್ನ ಕೆಲಸ ನಾನು ಮಾಡುತ್ತೇನೆ ಎಂದರು.
ಸರ್ಕಾರಿ ಆಸ್ತಿ ಅರ್ಹರಿಗೆ ಮಾತ್ರ ತಲುಪಬೇಕು, ಈ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ, ಕಷ್ಟಪಟ್ಟು ದುಡಿದು ಜೀವನ ಸಾಗಿಸಲು ಪಕ್ಷದ ಕಾರ್ಯಕರ್ತರಿಗೆ ಹೇಳುತ್ತೇನೆಯೇ ವಿನಃ ಕಳ್ಳದಾರಿಯಲ್ಲಿ ನಡೆಯಲು ಬಿಡುವುದಿಲ್ಲ, ಕಳ್ಳರಿಗೆ ಸರ್ಕಾರದ ಆಸ್ತಿ ಸಿಗಲು ಅವಕಾಶ ಕೊಡುವುದಿಲ್ಲ, ಅಂಥಹವರಿಗೆ ಸಹಕಾರ ನೀಡಲು ಪಕ್ಷದ ಮುಖಂಡರು, ಕಾರ್ಯಕರ್ತರೂ ಬರಬಾರದು. ಜಿಲ್ಲೆಯಲ್ಲಿ ಬಡವರಿಗೆ ಅನ್ಯಾಯ ಹಾಗೂ ಅಕ್ರಮ ಚಟುವಟಿಕೆ ನಡೆಯಲು ಅವಕಾಶ ಮಾಡಿ ಕೊಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. ತಾಲೂಕಿನ ನುಣ್ಣೂರು ಗ್ರಾಮದಲ್ಲಿ ರೈತರೊಬ್ಬರಿಗೆ ವಂಚಿಸಿ ಅವರ ಜಮೀನು ಕಬಳಿಸಲು ಹುನ್ನಾರವೊಂದು ನಡೆಯುತ್ತಿದೆ, ಗ್ರಾಮ ಪ್ರವಾಸ ಸಂದರ್ಭದಲ್ಲಿ ಎಲ್ಲ ದಾಖಲೆಗಳನ್ನು ತರಿಸಿಕೊಂಡಿದ್ದೇನೆ, ಆ ರೈತನಿಗೆ ಅನ್ಯಾಯವಾಗಲು ಬಿಡಲ್ಲ, ವ್ಯಕ್ತಿಯೊಬ್ಬರು ತಮ್ಮ ಮಗಳ ಹೆಸರಿಗೆ ಆ ಜಮೀನನ್ನು ಬರೆಸಿಕೊಳ್ಳಲು ಕುಟುಂಬದ ಮೇಲೆ ಒತ್ತಡ ಹಾಕುತ್ತಿದ್ದಾರೆ, ಆ ಕುಟುಂಬಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ ಎಂದರು. ರಾಮನಗರ ಉಪ ವಿಭಾಗಾಧಿಕಾರಿ ವಿರುದ್ಧ ಆಕ್ರೋಶ ಹೊರಹಾಕಿದ ಅವರು, ಬಿಜೆಪಿಯ ಕೆಲವು ಪುಡಾರಿಗಳನ್ನ ಹಿಡಿದು ರಾಮನಗರಕ್ಕೆ ಬಂದಿದ್ದಾರೆ, ಕಾನೂನು ಬಾಹಿರವಾಗಿ ಕೆಲಸ ಮಾಡುವ ಅಧಿಕಾರಿಗಳಿಗೆ ರಕ್ಷಣೆ ಕೊಡುವುದಿಲ್ಲ, ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿ ಎಸಿ ಅವರನ್ನ ಬದಲಾವಣೆ ಮಾಡಿ ಕೊಡಿ ಎಂದಿದ್ದೇನೆ. ರೈತರ ಕೆಲಸಗಳನ್ನ ಪ್ರಮಾಣಿಕವಾಗಿ ಮಾಡುವ ಅಧಿಕಾರಿ ಬೇಕಿದೆ, ಆ ದೃಷ್ಟಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಬದಲಾವಣೆ ಮಾಡುವುದು ಮುಖ್ಯಮಂತ್ರಿಗಳಿಗೆ ಬಿಟ್ಟಿದ್ದು ಎಂದರು.
ಅಧಿಕಾರಿಗಳನ್ನ ದುರುಪಯೋಗ ಮಾಡಿಕೊಂಡು ಸ್ವಾರ್ಥದ ರಾಜಕಾರಣ ಮಾಡುವುದಿಲ್ಲ, ಪ್ರತಿಯೊಬ್ಬ ಅಧಿಕಾರಿಗೂ ಜನಸಾಮಾನ್ಯರಿಗೆ ಅನು ಕೂಲವಾಗುವ ರೀತಿ ಕೆಲಸ ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಅವರು ತಾಕೀತು ಮಾಡಿದರು. ಲಿಂಗಾಯತ ಸಮುದಾಯ ವನ್ನ ಒಬಿಪಿಗೆ ಸೇರ್ಪಡೆ ಮಾಡಲು ಶಿಫಾರಸು ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜಕೀಯವಾಗಿ ನಡೆಯುತ್ತಿರುವ ಈಗಿನ ಪ್ರಸಂಗಗಳ ಬಗ್ಗೆ ಚರ್ಚೆ ಮಾಡುವುದಿಲ್ಲ, ಮೀಸಲಾತಿ ಹಾಗೂ ಪ್ರಾಧಿಕಾರದ ರಚನೆ ಮಾಡುವುದು ಅವರವರ ಇಚ್ಛೆ. ಪ್ರತಿ ಕುಟುಂಬಕ್ಕೂ ವಸತಿ, ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗ ಕಲ್ಪಿಸುವುದು ಸರ್ಕಾರದ ಕೆಲಸ, ಸ್ವಾರ್ಥಕ್ಕಾಗಿ ಮಾಡುತ್ತಿರುವ ವಿವಾದಾತ್ಮಕ ವಿಚಾರಕ್ಕೆ ತಲೆಹಾಕುವುದಿಲ್ಲ ಎಂದರು.
ಸಂದರ್ಭದಲ್ಲಿ ನಗರ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಜಯಮುತ್ತು, ನಗರ ಅಧ್ಯಕ್ಷ ರಾಂಪುರ ರಾಜಣ್ಣ,ನಗರ ಉಪಾಧ್ಯಕ್ಷ ಶಿವರಾಮು, ಮುಖಂಡರಾದ ಬೋಲ್‌ವೆಲ್ ರಾಮಚಂದ್ರು, ಗೊವಿಂದಳ್ಳಿ ನಾಗರಾಜು, ರಾಂಪುರ ಮಲ್ಲೇಶ್, ಹಮೀದ್ ಮುನಾವರ್, ವಿಷಕಂಠ, ರಾಮಕೃಷ್ಣೇಗೌಡ, ಶಿವರಾಮು, ತಹಸೀಲ್ದಾರ್ ನಾಗೇಶ್, ಪೌರಾಯುಕ್ತ ಶಿವನಂಕಾರಿಗೌಡ, ಅಭಿಯಂತರ ಲೋಹಿತ್ ಮುಂತಾದವರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss