Saturday, July 2, 2022

Latest Posts

ಚಾಮರಾಜನಗರ| ಬೆಂಗಳೂರಿನಿಂದ ಬಂದಿದ್ದ ಸೋಂಕಿತನ ಸಂಪರ್ಕ- 18 ಮಂದಿ ಕ್ವಾರಂಟೈನ್‍ಗೆ

ಚಾಮರಾಜನಗರ: ಬೆಂಗಳೂರಿನ ಪೊಲೀಸ್ ಠಾಣೆಯೊಂದರಲ್ಲಿ ಮುಖ್ಯಪೇದೆಯಾಗಿರುವ ಕೋವಿಡ್ – 19 ಪಾಸಿಟಿವ್ ವ್ಯಕ್ತಿಯೋರ್ವರು ಚಾಮರಾಜನಗರ ಜಿಲ್ಲೆಯ ಹನೂರು ಸಮೀಪದ ಬೆಳತ್ತೂರು ಗ್ರಾಮದ ಸಂಬಂಧಿಕರ ಮನೆಗೆ ಬಂದು ಹೋಗಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸಂಪರ್ಕಕ್ಕೆ ಬಂದಿದ್ದ 18 ಮಂದಿಯನ್ನು ಚಾಮರಾಜನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಈ ವಿಷಯ ತಿಳಿಸಿದರು. ಬೆಂಗಳೂರು ಪೊಲೀಸ್ ಠಾಣೆಯಲ್ಲಿ ಮುಖ್ಯಪೇದೆಯಾಗಿದ್ದು ಬೆಂಗಳೂರಿನ ನಿವಾಸಿಯಾಗಿರುವ ವ್ಯಕ್ತಿಗೆ ಬೆಂಗಳೂರಿನಲ್ಲಿ ಗಂಟಲಿನ ದ್ರವ ಮಾದರಿಯನ್ನು ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಆದರೆ ಫಲಿತಾಂಶ ವರದಿ ಇನ್ನೂ ಬಂದಿರಲಿಲ್ಲ. ಈ ನಡುವೆ ನಿನ್ನೆ (ಮೇ 4ರಂದು) ಸದರಿ ವ್ಯಕ್ತಿಯು ಜಿಲ್ಲೆಯ ಹನೂರು ಸಮೀಪದ ಬೆಳತ್ತೂರು ಗ್ರಾಮದಲ್ಲಿರುವ ತಮ್ಮ ಅತ್ತೆಯ ಮನೆಗೆ ಪತ್ನಿ ಹಾಗೂ 8 ವರ್ಷದ ಮಗುವಿನೊಂದಿಗೆ ಕಾರಿನಲ್ಲಿ ಬಂದಿದ್ದರು. ಮಧ್ಯಾಹ್ನ ನಂತರ ಗಂಟಲಿನ ಮಾದರಿಯ ಫಲಿತಾಂಶ ವರದಿಯು ಪಾಸಿಟಿವ್ ಬಂದಿದೆ ಎಂಬ ಮಾಹಿತಿ ಬೆಂಗಳೂರಿನಿಂದ ಬಂದ ಕೂಡಲೇ ಬೆಂಗಳೂರಿಗೆ ಕುಟುಂಬ ಸಮೇತ ಹಿಂತಿರುಗಿದ್ದಾರೆ. ವಿಷಯ ತಿಳಿದ ಕೂಡಲೇ ಇವರ ಸಂಪರ್ಕಕ್ಕೆ ಬಂದಿದ್ದ ಬೆಳತ್ತೂರಿನ ಮನೆಯ ಸಂಬಂಧಿಕರು ಹಾಗೂ ನೆರೆಹೊರೆಯ ಒಟ್ಟು 18 ಜನರನ್ನು ಚಾಮರಾಜನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss