ಚಾಮರಾಜನಗರ :ತಾಲೂಕಿನ ಜನ್ನೂರು ಹೊಸೂರು ಸಮೀಪದಲ್ಲಿರುವ ತೋಟದ ಮನೆಗೆ ಮಧ್ಯರಾತ್ರಿ ನುಗ್ಗಿರುವ ಚಿರತೆ ಮನೆಯ ಮುಂಭಾಗದಲ್ಲಿದ್ದ ನಾಯಿಯನ್ನು ಬೇಟೆಯಾಡಿ ಕಚ್ಚಿಕೊಂಡು ಕಾಡಿಗೆ ವಾಪಸ್ ಹೋಗಿರುವ ಘಟನೆ ಬುಧವಾರ ನಡೆದಿದೆ.
ಜನ್ನೂರು ಹೊಸೂರು ಗ್ರಾಮದ ವೀಣಾ ಅವರಿಗೆ ಸೇರಿದ ನಾಯಿ ಚಿರತೆ ದಾಳಿಗೆ ತುತ್ತಾಗಿದೆ. ಕಾಡಂಚಿನಲ್ಲಿರುವ ತೋಟದ ಮನೆಗೆ ಆಗಿದ್ದಾಂಗೆ ಚಿರತೆ ದಾಳಿ ಮಾಡುತ್ತಿದ್ದರು ಸಹ ಅರಣ್ಯ ಇಲಾಖೆಯ ಅಧಿಕಾರಿಗಳು ಯಾವುದೇ ರೀತಿಯ ಕ್ರಮವನ್ನು ಕೈಗೊಂಡಿಲ್ಲ. ಕೆಲವು ದಿನಗಳ ಹಿಂದೆ ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರುವಿನ ಮೇಲೆ ದಾಳಿ ಮಾಡಿ, ಸ್ವಲ್ಪದಲ್ಲಿ ಕರು ಬಚಾವ್ ಆಗಿತ್ತು. ಈ ಬಾರಿ ನೇರವಾಗಿ ಚಿರತೆ ಮನೆ ಮುಂದೆ ಮಲಗಿದ್ದ ನಾಯಿ ಮೇಲೆ ದಾಳಿ ಮಾಡಿ ಕಚ್ಚಿ ಬಹುದೂರ ಎಳೆದುಕೊಂಡು ಹೋಗಿದೆ. ಅದೃಷ್ಟವಶಾತ್ ಕೊಟ್ಟಿಗೆಯಲ್ಲಿದ್ದ ಹಸು, ಕರು ಉಳಿದುಕೊಂಡಿದೆ.
ನಾಯಿಯ ಚೀರಾಟದ ಸದ್ದು ಕೇಳಿ ಮನೆ ಒಳಗಿದ್ದ ವೀಣಾ ಮತ್ತು ಅವರ ಅಣ್ಣ ಮಕ್ಕಳು ಹೊರ ಬರುತ್ತಿದ್ದಂತೆ ಚಿರತೆ ನಾಯಿಯನ್ನು ಕಚ್ಚಿಕೊಂಡು ಎಳೆದು ಹೋಗುತ್ತಿರುವ ದೃಶ್ಯವನ್ನು ನೋಡಿ ಕೂಗಿ ಕೊಂಡಿದ್ದಾರೆ. ಆದರೆ ಚಿರತೆ ತನ್ನ ಬೇಟೆಯನ್ನು ಬಿಡದೇ ಕಾಡಿಗೆ ಎಳೆದುಕೊಂಡು ಹೋಗಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಗ್ರಾಮಸ್ಥರು ವಿಚಾರ ತಿಳಿಸಿದ್ದು, ಸಂಜೆಯವರೆಗೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಮಾಡಿಲ್ಲ. ಈ ಭಾಗದಲ್ಲಿರುವ ಜಮೀನುಗಳಿಗೆ ಚಿರತೆ ದಾಳಿಯಿಂದಾಗಿ ರೈತರು ಹಾಗು ಮಹಿಳೆಯರು ಹೋಗಲು ಭಯಭೀತರಾಗಿದ್ದಾರೆ. ಜಾನುವಾರುಗಳನ್ನು ಮೇಯಿಸಲು ಜಮೀನಿಗೆ ಬರಲು ಸಾಧ್ಯವಾಗದೆ ಚಿರತೆ ದಾಳಿಗೆ ಕಂಗಾಲಾಗಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಭಾಗದ ರೈತರ ಸೂಕ್ತ ಪರಿಹಾರವನ್ನು ನೀಡಬೇಕು. ಚಿರತೆ ಪದೇ ಪದೇ ದಾಳಿ ಮಾಡುವುದನ್ನು ತಪ್ಪಿಸಲು ಮುಂದಾಗಬೇಕು ಎಂದು ಜನ್ನೂರು ಹೊಸೂರು ಗ್ರಾಮಸ್ಥರು ಹಾಗು ಎಪಿಎಂಸಿ ಮಾಜಿ ನಿರ್ದೇಶಕಿ ಹೊಸೂರು ವೀಣಾ ಒತ್ತಾಯಿಸಿದ್ದಾರೆ.