ಚಾಮರಾಜನಗರ: ತಾತನ ಹೆಸರಿನಲ್ಲಿದ್ದ ಜಮೀನನ್ನು ಪೌತಿ ಖಾತೆ ಮಾಡಿಕೊಡಲು ಅರ್ಜಿದಾರೊಬ್ಬರಿಂದ ತಾಲೂಕು ಶಿರಸ್ತೇದಾರ 10 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಇಂದು ಸಾಯಂಕಾಲ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಿಕ್ಕಿ ಬಿದ್ದಿದ್ದಾರೆ.
ಚಾಮರಾಜನಗರ ತಾಲೂಕು ಕಚೇರಿಯಲ್ಲಿ ಆರ್ಆರ್ಟಿ ವಿಭಾಗದಲ್ಲಿ ಶಿರಸ್ತೇದಾರಗಾಗಿರುವ ಮಂಜುನಾಥ್ ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದ ಅಧಿಕಾರಿ. ಅರ್ಜಿದಾರ ಬದನಗುಪ್ಪೆ ಗ್ರಾಮದ ನಿವಾಸಿ ನಾಗನಾಯಕ ಎಸಿಬಿಗೆ ದೂರು ನೀಡಿದ್ದರು.
ಚಾಮರಾಜನಗರ ತಾಲೂಕಿನ ಬದನಗುಪ್ಪೆ ಗ್ರಾಮದ ನಿವಾಸಿ ಲೇ ಬೋಮ್ಮಯ್ಯನ ಮಗ ನಾಗನಾಯಕ ತಮ್ಮ ಬಾಬ್ತು ಜಮೀನಿನ ಖಾತೆ ವರ್ಗಾವಣೆಗೆ ತಾಲೂಕು ಕಚೇರಿಯ ಆರ್ಆರ್ಟಿ ವಿಭಾಗಕ್ಕೆ ಅರ್ಜಿ ಸಲ್ಲಿಸಿದ್ದರು. ತಾತ ಲೇಟ್ ಬಸವ ಎಂಬುವರ ಹೆಸರಿನಲ್ಲಿರುವ 4 ಎಕರೆ ಜಮೀನಿನ ಅರ್ಟಿಸಿಯಲ್ಲಿ ಹೆಸರು ನಮೂದಿಸಲು ಅರ್ಜಿ ಸಲ್ಲಿಸಿದ್ದರು.
ಆದರೆ, ಆರ್ಆರ್ಟಿ ವಿಭಾಗದಲ್ಲಿದ್ದ ಶಿರಸ್ತೇದಾರ್ ಮಂಜುನಾಥ್ ಪೌತಿ ಖಾತೆ ಮಾಡಿಕೊಡಲು 30 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. 10 ಸಾವಿರ ರೂ.ಗಳನ್ನು ಮುಂಗಡವಾಗಿ ನೀಡುವುದು. ಬಳಿಕ ಖಾತೆ ಮಾಡಿಕೊಟ್ಟ ನಂತರ ಇನ್ನುಳಿದ 20 ಸಾವಿರ ರೂ. ನೀಡುವಂತೆ ಒತ್ತಾಯ ಮಾಡುತ್ತಿದ್ದರು. ಈ ಸಂಬಂಧ ಎಸಿಬಿಗೆ ನಾಗನಾಯಕ ದೂರು ನೀಡಿದ್ದರು.
ಭ್ರಷ್ಟಚಾರ ನಿಗ್ರಹ ದಳದ ದಕ್ಷಿಣ ವಲಯದ ಮೈಸೂರಿನ ಪೊಲೀಸ್ ಅಧೀಕ್ಷಕರಾದ ಜೆ.ಕೆ. ರಶ್ಮಿ ಅವರ ಮಾರ್ಗದರ್ಶನದಲ್ಲಿ ಎಸಿಬಿ ಉಪಾಧೀಕ್ಷಕ ಸದಾನಂದ ತಿಪ್ಪಣ್ಣನವರ್, ಪೊಲೀಸ್ ನಿರೀಕ್ಷಕ ಎಲ್. ದೀಪಕ್, ಹಾಗೂ ಸಿಬ್ಬಂದಿಗಳು ಸಾಯಂಕಾಲ ಕಚೇರಿಗೆ ದಾಳಿ ಮಾಡಿ ಆರ್ಐ ಮಂಜುನಾಥ ಲಂಚ ಸ್ವೀಕರಿಸುತ್ತಿದ್ದಾಗ ಟ್ರಾಪ್ ಮಾಡಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ದೂರು ದಾಖಲಿಸಿ, ತನಿಖೆ ಮುಂದುವರಿಸಿದ್ದಾರೆ.