Wednesday, August 10, 2022

Latest Posts

ಚಾಮುಂಡಿಬೆಟ್ಟದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಸಪ್ತಪದಿ ತುಳಿದ 14 ಜೋಡಿ

ದಿಗಂತ ವರದಿ ಮೈಸೂರು:

ಅರಮನೆ ನಗರಿ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಸೋಮವಾರ ನಡೆದ ಸರಳ ಸಾಮೂಹಿಕ ವಿವಾಹದಲ್ಲಿ 14 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು.
ರಾಜ್ಯ ಸರ್ಕಾರದ ಪ್ರತಿಷ್ಠಿತ ಸಪ್ತಪದಿ ಕಾರ್ಯಕ್ರಮದಡಿ ನಡೆದ ಈ ಸರಳ ವಿವಾಹದಲ್ಲಿ ಚಾಮುಂಡಿಬೆಟ್ಟದ ಪ್ರಧಾನ ಅರ್ಚಕರಾದ ಡಾ.ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಿದೆ. ಮೈಸೂರು ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ನವ ಜೋಡಿಗಳು ಆ ದಾಂಪತ್ಯ ಬಂಧನಕ್ಕೆ ಒಳಗಾಗಿ ಹೊಸ ಜೀವನಕ್ಕೆ ಕಾಲಿರಿಸಿದರು.
ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹಾಗೂ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ನವ ವಧುವರರಿಗೆ ಆಶೀರ್ವಾದ ಮಾಡಿದರು.
ಕಾರ್ಯಕ್ರಮದಲ್ಲಿ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪರಿಮಳಾ ಶ್ಯಾಂ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ವಧು ವರರಿಗೆ ಕೊಡುಗೆ:
ಸಪ್ತಪದಿ ಕಾರ್ಯಕ್ರಮದಡಿ ಮದುವೆಯಾದ ವಧುವಿಗೆ 8 ಗ್ರಾಂ ತೂಕದ ತಾಳಿ, ಬಟ್ಟೆ ಇತ್ಯಾದಿಗಳ ಖರೀದಿಗೆ 10 ಸಾವಿರ ರೂ. ನಗದು ಹಾಗೂ ವರನಿಗೆ ಧೋತಿ ಹಾಗೂ ಅಗತ್ಯ ವಸ್ತುಗಳ ಖರೀದಿಗೆ 5ಸಾವಿರ ರೂ. ಅನುದಾನ ನೀಡಲಾಗುತ್ತದೆ.
ಅದ್ಧೂರಿತನಕ್ಕೆ ತಡೆ ನೀಡಿ, ಸರಳತನ ರೂಢಿಸಿಕೊಳ್ಳೋಣ:
ಚಾಮುಂಡಿ ಬೆಟ್ಟದಲ್ಲಿನ ಸರಳ-ಸಾಮೂಹಿಕ ವಿವಾಹ ಸಮಾರಂಭಕ್ಕೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಆಶಯ ನುಡಿಗಳನ್ನಾಡಿದ್ದಾರೆ.
ಸಾಮೂಹಿಕ ವಿವಾಹಗಳು ಹೆಚ್ಚೆಚ್ಚು ನಡೆಯಬೇಕು. ಆ ಮೂಲಕ ಬಡವರ ಬದುಕಿಗೆ ಹೊರೆಯಾಗುವ ಇಂಥ ಕಾರ್ಯಕ್ರಮಗಳು ವರವಾಗಿ ಪರಿಣಮಿಸಬೇಕು. ಈ ಕೆಲಸವನ್ನು ನಮ್ಮ ಧಾರ್ಮಿಕ ದತ್ತಿ ಇಲಾಖೆ ಹಮ್ಮಿಕೊಂಡಿರುವುದು ಸಮಯೋಚಿತ ಹಾಗೂ ಔಚಿತ್ಯಪೂರ್ಣವೂ ಹೌದು. ಹೀಗಾಗಿ ಅದ್ಧೂರಿತನಕ್ಕೆ ತಡೆ ನೀಡಿ, ಸರಳತನವನ್ನು ರೂಢಿಸಿಕೊಳ್ಳೋಣ. ಕೊರೋನಾ ಕಾಲದಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡೋಣ ಎಂದು ತಿಳಿಸಿದ್ದಾರೆ.
ಇದು ಕೊರೋನಾ ಕಾಲ ಎಂದರೆ ತಪ್ಪಲ್ಲ.. ಜೊತೆಗೆ ಇದು ನಮಗೆ ಹಲವಾರು ಪಾಠಗಳನ್ನು ಹೇಳಿಕೊಟ್ಟಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ವಚ್ಛತೆ ಕಾಪಾಡಿಕೊಳ್ಳುವುದು, ಕನಿಷ್ಠ ಮಂದಿ ಒಂದೆಡೆ ಸೇರುವುದು ಹೀಗೆ ಹತ್ತು ಹಲವು ಕಡಿವಾಣಗಳನ್ನು ನಮಗೆ ನಾವೇ ಹಾಕಿಕೊಳ್ಳುವಂತೆ ಮಾಡಿದೆ. ಇದು ಒಂದರ್ಥದಲ್ಲಿ ನಾವು ಧನಾತ್ಮಕವಾಗಿ ತೆಗೆದುಕೊಳ್ಳುವ ಅಂಶವೂ ಆಗಿದೆ ಎಂದಿದ್ದಾರೆ.
ಇಂದು ನಮ್ಮ ಚಿಂತನೆಗಳು ಬದಲಾಗಬೇಕಿದೆ. ಸರಳ ಜೀವನ ನಮ್ಮದಾಗಬೇಕಿದೆ. ಬಹುಮುಖ್ಯವಾಗಿ ನಾವು ಮಾಡುವ ಸಮಾರಂಭಗಳು ಸೀಮತ ವ್ಯಾಪ್ತಿಗೆ ಬರಬೇಕಿದೆ. ಮದುವೆ-ಮುಂಜಿ ಸೇರಿದಂತೆ ಅನೇಕ ಸಂಭ್ರಮದ ಕಾರ್ಯಕ್ರಮಗಳು ಮನುಷ್ಯನ ಸಂತೋಷದ ದಿನಗಳ ಭಾಗ ಎಂಬುದರಲ್ಲಿ ಎರಡು ಮಾತಿಲ್ಲ. ಜೀವನದಲ್ಲಿ ಕೆಲವೇ ಕೆಲವು ಬಾರಿ ಬರುವ ಈ ಕ್ಷಣಗಳನ್ನು ಒಂದು ಕನಸಿನ ಮಾದರಿಯಲ್ಲಿ ಮಾಡುಬೇಕೆಂಬ ಹಂಬಲ ಇರುವುದೂ ತಪ್ಪಲ್ಲ. ಆದರೆ, ನಾವೀಗ ಪರಿಸ್ಥಿತಿಯನ್ನು ಅರಿತು ಹೆಜ್ಜೆ ಹಾಕಬೇಕಿದೆ. ಹೆಚ್ಚಿನ ಜನರು ಒಂದೆಡೆ ಸೇರಿದರೆ ಪರಿಣಾಮ ಏನಾದೀತು..? ಇಂತಹ ಸಮಾರಂಭಗಳಿಗೆ ಮನೆಯ ಹಿರಿಯರಿಂದ ಹಿಡಿದು ಚಿಕ್ಕ ಮಕ್ಕಳೂ ಬರುವುದು ಅನಿವಾರ್ಯ. ಹೀಗಾಗಿ ಒಂದು ವೇಳೆ ಕೊರೋನಾ ಮಹಾಮಾರಿ ಬಂದರೆ..? ಮುಂದೇನು ಎಂಬ ಅರಿವು, ಎಚ್ಚರಿಕೆ ಇರಬೇಕಾಗುತ್ತದೆ ಎಂದು ಸಲಹೆ ನೀಡಿದ್ದಾರೆ.
ಇದರ ಜೊತೆಗೆ ಅದ್ದೂರಿ ವಿವಾಹಗಳು ಬೇಕೆ ಎಂಬ ಪ್ರಶ್ನೆ. ಅದ್ದೂರಿತನ ಎಂಬುದು ಶಕ್ತಿಗನುಸಾರ ಇರಬೇಕೇ ವಿನಃ ಪ್ರತಿಷ್ಠೆಯಾಗಬಾರದು. ಅವರು ಮಾಡಿದರು, ಇವರು ಮಾಡಿದರು ಎಂದು ನಾವು ಮಾಡುವುದು ತರವಲ್ಲ. ಅದಕ್ಕಾಗಿ ಸಾಲ ಮಾಡಿ, ಭರ್ಜರಿಯಾಗಿ ವಿವಾಹ ಕಾರ್ಯಗಳನ್ನು ಮುಗಿಸಿ ಜೀವಮಾನವಿಡೀ ಸಾಲದ ಸುಳಿಯಲ್ಲಿ ಸಿಲುಕಿ, ಬಳಿಕ ನಿಮ್ಮ ಮಕ್ಕಳನ್ನೂ ಆ ಸುಳಿಗೆ ನೂಕುವುದು ಸರಿಯಲ್ಲ. ಇಂಥದ್ದಕ್ಕೆಲ್ಲ, ಸರಳ ಸಾಮೂಹಿಕ ವಿವಾಹಗಳು ಉತ್ತಮ ಪರಿಹಾರ. ಈ ನಿಟ್ಟಿನಲ್ಲಿ ನಮ್ಮ ಚಿಂತನೆಗಳು ಸಾಗಲಿ ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss