Monday, August 8, 2022

Latest Posts

ಚಾಮುಂಡಿಬೆಟ್ಟದಲ್ಲಿ ಪಾಳೆಯಗಾರ ಮಾರನಾಯಕರ ಪುತ್ಥಳಿ ನಿರ್ಮಿಸಲು ಆಗ್ರಹಿಸಿ ಪ್ರತಿಭಟನೆ

ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಪಾಳೆಯಗಾರ ಮಾರನಾಯಕರ ಪುತ್ಥಳಿಯನ್ನು ನಿರ್ಮಿಸಬೇಕೆಂದು ಆಗ್ರಹಿಸಿ ಮೈಸೂರು ನಾಯಕರ ಪಡೆ ವತಿಯಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಕೆಲಕಾಲ ಧರಣಿ ನಡೆಸಿ, ನಾನಾ ಘೋಷಣೆಗಳನ್ನು ಕೂಗಿದರಲ್ಲದೆ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಪಡುವಾರಹಳ್ಳಿ ಎಂ ರಾಮಕೃಷ್ಣ ನಾಯಕ ಜನಾಂಗದವರು ಮೈಸೂರಿನ ಮೂಲನಿವಾಸಿಗಳು. ನಮ್ಮ ನಾಯಕ ಕಾರ್ಗಳ್ಳಿ ಮಾರನಾಯಕರು ೧೩ನೇಯ ಶತಮಾನದಲ್ಲಿ ಮೈಸೂರು ಪ್ರಾಂತ್ಯದ ಪಾಳೆಯಗಾರಿಕೆ ಮಾಡುತ್ತಿದ್ದು, ಅಂದಿನ ಅರಸರಿಗೆ ಗಂಡು ಸಂತಾನವಿರಲಿಲ್ಲ. ಅವರ ಏಕಮಾತ್ರ ಪುತ್ರಿ ಯುವರಾಣಿ ದೇವಾಜಮ್ಮಣ್ಣಿ ಅವರನ್ನು ವಿವಾಹ ಮಾಡಿಕೊಡಲು ಪಾಳೇಗಾರ ಮಾರನಾಯಕರು ಒತ್ತಾಯಿಸಿದ್ದರು. ಮದುವೆ ಮಾಡಿಕೊಡುವುದಾಗಿ ಒಪ್ಪಿ ತನ್ನ ಕುಲದವರೊಂದಿಗೆ ಅರಮನೆಗೆ ಬನ್ನಿ, ಧಾರೆ ಎರೆಯುವುದಾಗಿ ಹೇಳಿ, ಅರಮನೆಗೆ ಬಂದ ಮಾರನಾಯಕ ಹಾಗೂ ಎಲ್ಲರನ್ನೂ, ಕರಿಕಲ್ಲು ತೊಟ್ಟಿಯ ಬಳಿ ಕಂದಕ ತೋಡಿ, ಅವರನ್ನು ಉತ್ತರದ ದ್ವಾರಕೆಯಿಂದ ಬಂದಿದ್ದ ಯದುರಾಯ ಮತ್ತು ಕೃಷ್ಣರಾಯರ ಸಹಾಯದಿಂದ ಮೋಸದಿಂದ ಕೊಂದಿದ್ದು ಇತಿಹಾಸದಲ್ಲಿ ಪುಟದಲ್ಲಿದೆ. ಅಲ್ಲಿಂದ ಯದುವಂಶದ ಆಡಳಿತ ಮೈಸೂರಿನಲ್ಲಿ ಪ್ರಾರಂಭವಾಗಿದೆ. ಇಂದಿಗೂ ನಾಯಕ ಜನಾಂಗಕ್ಕೆ ನೀವೇನು ಅರಮನೆಯಲ್ಲಿ ಹೆಣ್ಣು ಕೇಳಲು ಹೊರಟವರು ಎಂಬ ಕುಹಕ ಜನಜನಿತವಾಗಿದೆ. ಮೈಸೂರಿನ ಮೂಲ ನಿವಾಸಿಗಳ ಪಾಳೇಗಾರ ಮಾರನಾಯಕರ ಇತಿಹಾಸವನ್ನು ಬಚ್ಚಿಡುವಂತಹ ಕೆಲಸ ತುಂಬಾ ವ್ಯವಸ್ಥಿತವಾಗಿ ನಡೆದಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿಗಳು ಮೈಸೂರು ಭಾಗದ ಮೂಲ ನಿವಾಸಿಗಳಾದ ನಾಯಕ ಜನಾಂಗದ ಐತಿಹಾಸಿಕ ಪುರುಷ ಕಾರ್ಗಳ್ಳಿ ಮಾರನಾಯಕನ ಪುತ್ಥಳಿಯನ್ನು ಚಾಮುಂಡಿಬೆಟ್ಟದಲ್ಲಿ ನಿರ್ಮಿಸಿ, ಮೈಸೂರಿನ ಇತಿಹಾಸದ ಪುಟದಲ್ಲಿ ಬಿಂಬಿಸುವ ಮೂಲಕ ಮುಂದಿನ ಪೀಳಿಗೆ ಇತಿಹಾಸವನ್ನು ಕಟ್ಟಿಕೊಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ದೇವಪ್ಪನಾಯಕ.ಕಾಟೂರು ದೇವರಾಜು, ವಿನೋದ್ ನಾಗವಾಲ,ಶ್ರೀಧರ ಬೆಟ್ಟ,ಟೆನ್ನಿಸ್ ಗೋಪಿ,ರಮ್ಮನಹಳ್ಳಿ ಸೋಮಣ್ಣ,ಯಾದವಗಿರಿ ಗೋವಿಂದರಾಜು,ಹದಿನಾರು ಪ್ರಕಾಶ್, ಯಡಕೊಳ ನಾಗೇಂದ್ರ,ರಘು,ತುಮ್ಮನಾಯಕ,ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss