Tuesday, August 16, 2022

Latest Posts

ಚಾರ್ಮಾಡಿ ಘಾಟಿ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲು ಕೋರಿದ್ದೇವೆ: ಸಂಸದೆ ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು: ಚಾರ್ಮಾಡಿ ಘಾಟಿ ರಸ್ತೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲು ಕೇಂದ್ರ ಸರ್ಕಾರವನ್ನು ಕೇಳಿದ್ದೇವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.
ಚಾರ್ಮಾಡಿ ರಸ್ತೆ ಉಳಿವಿಗೆ ಸ್ಥಳೀಯರು ಅಭಿಯಾನ ಆರಂಭಿಸಿರುವ ಬಗ್ಗೆ ಅವರ ಗಮನ ಸೆಳೆದಾಗ, ಈ ರಸ್ತೆ ಪ್ರತಿ ವರ್ಷ ಕುಸಿಯುತ್ತಿದೆ. ತಡೆಗೋಡೆಗಳನ್ನು ಕಟ್ಟುವ ಕೆಲಸ ಈಗಲೂ ನಡೆಯುತ್ತಿದೆ. ಇದನ್ನು ಇನ್ನಷ್ಟು ವಿಸ್ತಾರ ಮಾಡಲು ಯೋಜನೆ ರೂಪಿಸಲು ಸೂಚಿಸಿದ್ದೇವೆ ಎಂದರು.
ಶಿಶಿಲಾ-ಭೈರಾಪುರ ರಸ್ತೆಗೆ ನ್ಯಾಯಾಲಯ ತಡೆಯಾಜ್ಞೆ ಕೊಟ್ಟಿದೆ. ಇದು ಪರಿಸರ ಇಲಾಖೆಗೆ ಸಂಬಂಧಿಸಿದ್ದು. ಇಲಾಖೆಯನ್ನು ಈಗ ಮನವರಿಕೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದರು.
ಶಿಶಿಲಾ ಭೈರಾಪುರ ರಸ್ತೆ ಆದಲ್ಲಿ ಚಿಕ್ಕಮಗಳೂರಿನಿಂದ ಮಂಗಳೂರಿಗೆ ಅಂತರ ಕಡಿಮೆಯಾಗುತ್ತಿದೆ. ಇಂಧನ ಹಾಗೂ ಸಮಯ ಎರಡೂ ಉಳಿತಾಯವಾಗುತ್ತದೆ. ಈಗ ಪರಿಸರ ಇಲಾಖೆ ತುಂಬಾ ಗಟ್ಟಿ ನಿಲುವು ಹೊಂದಿದೆ. ಅರಣ್ಯಕ್ಕೆ ತೊಂದರೆಯಾಗಬಾರದು ಎನ್ನುವ ವಿಚಾರದಲ್ಲಿ ಅದು ಗಂಭೀರ ಕ್ರಮ ಕೈಗೊಳ್ಳುತ್ತಿದೆ ಎಂದರು.
ಇದೇ ಕಾರಣಕ್ಕೆ ಕೆರೆಕಟ್ಟೆ ರಸ್ತೆಯನ್ನು ವಿಸ್ತರಿಸಲು ಸಹ ಅವಕಾಶ ನೀಡಿಲ್ಲ. ಚರಂಡಿಯಿಂದ ಚರಂಡಿಗೆ ರಸ್ತೆ ದುರಸ್ತಿ ಮಾಡುತ್ತೇವೆಂದರೂ ಸಹ ಅವಕಾಶ ಕೊಟ್ಟಿಲ್ಲ. ಇದಕ್ಕಾಗಿ ಕೇಂದ್ರದಿಂದ ಬಿಡುಗಡೆಯಾಗಿದ್ದ ಹಣವೂ ವಾಪಾಸಾಗಿದೆ. ನಮ್ಮ ಜಿಲ್ಲೆಯಲ್ಲಿ ಎಲ್ಲವೂ ಅರಣ್ಯ, ಪರಿಸರ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಇಲಾಖೆಗೆ ಮನವರಿಕೆ ಮಾಡುವ ಪ್ರಯತ್ನ ಮುಂದುವರಿಸಿದ್ದೇವೆ ಎಂದರು.
ಎರಡೂ ಕ್ಷೇತ್ರ ಗೆಲುವು ನಿಶ್ಚಿತ
ಶಿರಾ ಮತ್ತು ರಾಜ ರಾಜೇಶ್ವರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವುದು ಖಚಿತ. ಎರಡೂ ಕ್ಷೇತ್ರದಲ್ಲಿ ನಾವು ಪ್ರವಾಸ ಮಾಡಿದ್ದೇವೆ. ಜನರು ಬಿಜೆಪಿ ಪರ ಇದ್ದಾರೆ ಎಂದು ಶೋಭಾ ತಿಳಿಸಿದರು.
ನಮಗೆ ಕಠಿಣ ಕ್ಷೇತ್ರ ಎನಿಸಿದ್ದ ಶಿರಾದಲ್ಲಿ ಮೂರ್ನಾಲ್ಕು ತಿಂಗಳ ಮೊದಲಿನಿಂದಲೇ ನಮ್ಮ ಮುಖಂಡರು ಬೂತ್ ಮಟ್ಟದ ಸಮಿತಿಗಳನ್ನು ಮಾಡಿ ಹಳ್ಳಿಗಳಲ್ಲಿ ಪ್ರವಾಸ ಮಾಡಿ ಹೊಸಬರನ್ನು ಸೇರಿಸಿ ಸಂಘಟನೆ ಬಲಪಡಿಸಿದ್ದರು. ಪ್ರತಿ ವಾರ್ಡ್‍ನಲ್ಲೂ ಇದರಿಂದ ಯುವಕರ ತಂಡ ನಿರ್ಮಾಣಗೊಂಡು ನಮಗೆ ಹೆಚ್ಚು ಬಲ ತಂದುಕೊಟ್ಟಿತು ಎಂದರು.
ಎರಡೂ ಕ್ಷೇತ್ರದಲ್ಲೂ ಗೆದ್ದು ನಮ್ಮ ಸಂಖ್ಯೆಗೆ ಮತ್ತೆರಡು ಸೇರ್ಪಡೆಯಾಗಲಿದೆ. ಶಿರಾ ಕ್ಷೇತ್ರದಲ್ಲಿ ಮತದಾನ ಪ್ರಮಾಣ ಹೆಚ್ಚಾಗಿದ್ದು, ಆರ್ ಆರ್ ನಗರದಲ್ಲಿ ಕಡಿಮೆಯಾಗಿದೆ. ಕೋವಿಡ್, ಬೇರೆ ಬೇರೆ ಕಾರಣಕ್ಕೆ ಮತದಾನ ಕಡಿಮೆಯಾಗಿದೆ. ಆದರೂ ಎರಡೂ ಕ್ಷೇತ್ರವನ್ನು ನಾವು ಗೆಲ್ಲುತ್ತೇವೆ ಎಂದರು.
ಪರಿಣಾಮ ಬೀರದು
ಆರ್ ಆರ್ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರ ಅವರ ಅತ್ತೆ ಮತ ಯಾಚಿಸಿದ್ದಾರೆ ಎನ್ನುವ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ ಎಂಬ ಮಾತುಗಳಿವೆ. ಆದರೆ ಇದರಿಂದ ಚುನಾವಣಾ ಫಲಿತಾಂಶದ ಮೇಲೆ ಯಾವ ಪರಿಣಾಮವೂ ಬೀರುವುದಿಲ್ಲ. ಬೇರೆ ಬೇರೆ ಚುನಾವಣೆಯಲ್ಲಿದ್ದಂತೆ ಈ ಬಾರಿ ಆರ್ ಆರ್ ನಗರದಲ್ಲಿ ಅನುಕಂಪದ ಅಲೆ ಕಾಣಲಿಲ್ಲ ಎಂದರು.
ರಾಜೀನಾಮೆ ನೀಡುವುದು ಒಳಿತು
ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ರಾಜೀನಾಮೆ ಬಿಕ್ಕಟ್ಟಿನ ಕುರಿತು ಪ್ರತಿಕ್ರಿಯಿಸಿದ ಅವರು, ಜಿ.ಪಂ. ಅಧ್ಯಕ್ಷರು ಪಕ್ಷದ ಸೂಚನೆಯಂತೆ ರಾಜೀನಾಮೆ ಕೊಡುವುದು ಒಳಿತು. ಪಕ್ಷದ ತೀರ್ಮಾನವನ್ನು ಮುಂದಿಟ್ಟುಕೊಂಡು ಸಮುದಾಯದವರನ್ನು ಓಲೈಕೆ ಮಾಡುವುದು, ಅವರಿಗೆ ದೂರು ಕೊಡುವುದು ಸರಿಯಲ್ಲ. ಬಿಜೆಪಿ ಅವರಿಗೆ ಅಧಿಕಾರ ನೀಡುವಾಗ ಯಾವ ಸಮುದಾಯದವರನ್ನೂ ಕೇಳಿರಲಿಲ್ಲ. ಅದು ಎಲ್ಲರೂ ಸೇರಿ ತೆಗೆದುಕೊಂಡ ತೀರ್ಮಾನವಾಗಿತ್ತು. ರಾಜೀನಾಮೆ ನೀಡಿದಲ್ಲಿ ಪಕ್ಷದಲ್ಲಿ ಅವರಿಗೂ ಭವಿಷ್ಯ ಇರುತ್ತದೆ. ರಾಜೀನಾಮೆ ಕೊಡುವುದು ಒಳಿತು ಎಂದು ಸುಜಾತ ಅವರಿಗೆ ನಾನು ವಿನಂತಿ ಮಾಡುತ್ತೇನೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss