Thursday, August 18, 2022

Latest Posts

ಚಿಂತಕರ ಚಾವಡಿಯಲ್ಲಿ ಹರಿದಾಡಿದ ಕಾಗದಪತ್ರ, ಹಾರಾಡಿದ ಮೈಕ್: ವಿಪಕ್ಷಗಳಿಗೆ ಇದು ಶೋಭಾಯಮಾನವೇ ?

ಸುದ್ದಿ ವಿಶ್ಲೇಷಣೆ : ಪಿ.ರಾಜೇಂದ್ರ

ಚಿಂತಕರ ಚಾವಡಿ ಎಂದೇ ದೇಶದ ಶಾಸನಸಭೆಯ ಚರಿತ್ರೆಯಲ್ಲಿ ದಾಖಲಾಗಿರುವ ರಾಜ್ಯಸಭೆಯಲ್ಲಿ ಭಾನುವಾರದಂದು ಅಸಹನೀಯ ಘಟನೆ ! ಕೇಂದ್ರ ಸರ್ಕಾರ ಮಂಡಿಸಿದ ಕೃಷಿ ತಿದ್ದುಪಡಿ ವಿಧೇಯಕವನ್ನು ಒಪ್ಪದ ವಿಪಕ್ಷಗಳು, ಧ್ವನಿ ಮತದ ವೇಳೆ ನಡೆದುಕೊಂಡ ರೀತಿಯಂತೂ ಖಂಡನೀಯ.
ಕಾಗದಪತ್ರಗಳನ್ನು ಹರಿಯುವುದು ಹಾಗೂ ಧ್ವನಿವರ್ಧಕಗಳನ್ನು ಕಿತ್ತೆಸೆಯುವುದು , ಇದ್ಯಾವ ಪ್ರಜಾಸತ್ತಾತ್ಮಕ ಹಕ್ಕು ? ಅದೂ ಸಭಾಧ್ಯಕ್ಷರ ಮುಂದೆಯೇ ಉದ್ದೇಶಿತ ಶಾಸನದ ಕರಡು ಪ್ರತಿಗಳನ್ನು ಹರಿದು ಅದನ್ನು ಸಭಾಧ್ಯಕ್ಷರ ಪೀಠದತ್ತ ಎಸೆಯುವ ಸಂಸದರ ಹಕ್ಕುಗಳನ್ನು ಸಮರ್ಥಿಸಲು ಸಾಧ್ಯವಿಲ್ಲ. ಸಂಸದೀಯ ಪ್ರಜಾತಂತ್ರದಲ್ಲಿ ಆಡಳಿತ ಪಕ್ಷದ ನಿಲುವು ಮತ್ತು ನೀತಿಯನ್ನು ಖಂಡಿಸಲು ಮತ್ತು ವಿರೋಧಿಸಲು ಹಲವಾರು ಆರೋಗ್ಯಕರ ಮಾರ್ಗಗಳಿವೆ. ಇಂತಹ ಮಾರ್ಗಗಳೆಂದೂ ಅಸಹನೀಯ ಮತ್ತು ಅಪಮಾರ್ಗೀ ಹಾಗೂ ಅಪಥ್ಯವಾಗಿರುವುದಿಲ್ಲ . ಸರ್ಕಾರ ಮಂಡಿಸಿದ ಎಲ್ಲ ವಿಧೇಯಕಗಳನ್ನೂ ಸದನ ಯಾವುದೇ ಚರ್ಚೆ ಇಲ್ಲದೆ ಅಂಗೀಕರಿಸುವುದು ಪ್ರಜಾತಂತ್ರದ ಲಕ್ಷಣವಲ್ಲ. ಅದು ಹಾಗಾಗಲೂಬಾರದು.
ಯಾವುದೇ ಸರ್ಕಾರ ಕಾನೂನುಗಳನ್ನು ಜಾರಿಗೆ ತರುವ ಮುನ್ನ ಇದರ ಸಾಧಕ ,ಬಾಧಕಗಳ ಬಗ್ಗೆ ಸದನದ ಸಲಹೆ ಮತ್ತು ಅಭಿಪ್ರಾಯವನ್ನು ಪಡೆಯುವುದು ಸಂಸದೀಯ ಸಂಪ್ರದಾಯ. ಇದುವೇ ಸಂಸದೀಯ ಪ್ರಜಾತಂತ್ರದ ಮೂಲ . ಆದರೆ ಇದನ್ನು ಹೊರತುಪಡಿಸಿ ಬರೀ ಘೋಷಣೆಗಳನ್ನು ಕೂಗಿ ಸಭಾಧ್ಯಕ್ಷರ ಕರ್ತವ್ಯಗಳಿಗೂ ಧಕ್ಕೆಯಾಗುವ ಹಾಗೆ ನಡೆದುಕೊಳ್ಳುವ ವಿಪಕ್ಷಗಳ ವೈಖರಿ ಸಮ್ಮತಾರ್ಹವಲ್ಲ . ಅಸಲಿಗೆ ಸದನದಲ್ಲಿಯೇ ಕರಡು ಪ್ರತಿಗಳನ್ನು ಹರಿಯುವುದು ಒಂದು ಕೆಟ್ಟ ಕ್ರಮ.
ಸಂಸತ್ ಮತ್ತು ಶಾಸನಸಭೆಗಳಲ್ಲಿ ಇಂತಹ ಘಟನೆಗಳು ಸಂಭವಿಸುತ್ತಿರುವುದು ಹೊಸದೇನಲ್ಲ. ದಶಕಗಳಿಂದಲೂ ಇದು ಮರುಕಳಿಸುತ್ತಲೇ ಇದೆ ! ಆದರೆ ದೇಶದ ಕಾನೂನುಗಳ ರಚನೆಗೆ ಮೂಲ ಆಧಾರವೇ ಶಾಸನಸಭೆ . ಪ್ರಜಾತಂತ್ರದಲ್ಲಿ ಮತ್ತು ಸಂವಿಧಾನದ ದೃಷ್ಟಿಯಲ್ಲಿ ಇದಕ್ಕೆ ಅತಿಗುರತರವಾದ ಸ್ಥಾನವಿದೆ . ಅದರಲ್ಲಿಯೂ ದೇಶದ ಬುದ್ದಿಜೀವಿಗಳು, ಪ್ರಾಜ್ಞರು ಹಾಗೂ ವಿಷಯತಜ್ಞರು ಹಾಗೂ ವಿಚಾರಶೀಲರು ಉಪಸ್ಥಿತರಿರುವಂತಹ ಮೇಲ್ಮನೆಯಲ್ಲಿ ಗದ್ದಲ, ಕೋಲಾಹಲ ಮತ್ತು ಮೈಕ್ ಹಾರಾಟ ಎಂದರೆ ಇದು ತಲೆ ತಗ್ಗಿಸುವಂತಹ ವಿಚಾರ. ಏಕೆಂದರೆ ದೇಶದ ಪ್ರಜಾತಂತ್ರದ ಅತಿದೊಡ್ಡ ದೇವಾಲಯ ಎಂದೇ ಕರೆಯಲಾಗುವ ಸಂಸತ್ತಿನ ನೇರ ಕಲಾಪಗಳನ್ನಿಂದು ಕೋಟ್ಯಂತರ ಮಂದಿ ಜನತೆ ವೀಕ್ಷಿಸುವ ವ್ಯವಸ್ಥೆ ಇದೆ. ಇದನ್ನು ನೋಡಿದ ಜನತೆಯ ಮನದಲ್ಲಿ ಜನಪ್ರತಿನಿಧಿಗಳ ಮೇಲೆ ಉಂಟಾಗುವ ನಕಾರಾತ್ಮಕ ಪರಿಣಾಮಗಳ ಬಗ್ಗೆಯೂ ಆಲೋಚಿಸಬೇಕಿದೆ. ಮೊದಲೇ ದೇಶವಿಂದು ಕೊರೋನಾ ಮಹಾಮಾರಿ ಕರಿನೆರಳಿನಿಂದ ಇನ್ನೂ ಹೊರ ಬಂದಿಲ್ಲ . ಆದರೆ ಅನಿವಾರ್ಯ ಪರಿಸ್ಥಿತಿಯಲ್ಲಿ ಸಂಸತ್ತಿನ ಉಭಯ ಸದನಗಳ ಕಲಾಪ ನಡೆಯುವಂತಾಗಿದೆ. ಇಲ್ಲಿ ಒಂದೊಂದು ಕ್ಷಣವೂ ಅಮೂಲ್ಯ. ಪ್ರತಿಭಟನೆ, ಘೋಷಣೆ ಮತ್ತು ಟೀಕೆ , ಇವುಗಳು ಪ್ರತಿಯೊಬ್ಬ ಪ್ರತಿನಿಯ ಹಕ್ಕಾದರೂ ಅದು ಬಳಕೆಯಾಗುವ ರೀತಿ ನೀತಿಗಳ ಬಗ್ಗೆ ಗಂಭೀರಾಲೋಚನೆ ಅಗತ್ಯ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!