Monday, July 4, 2022

Latest Posts

ಚಿಕಿತ್ಸೆ ನೆಪದಲ್ಲಿ ಕೇರಳ-ಕರ್ನಾಟಕ ಗಡಿ ದಾಟುತ್ತಿರುವ ‘ರೋಗಿ’ಗಳು: ದಕ್ಷಿಣ ಕನ್ನಡಕ್ಕೆ ಹೊಸ ಆತಂಕ

ಉಳ್ಳಾಲ: ಗುರುವಾರ ಓರ್ವ ಮಹಿಳಾ ರೋಗಿ ಕಾಸರಗೋಡಿನಿಂದ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಆಗಮಿಸಿದ್ದು, ತಲೆ ನೋವಿಗೆ ಸಂಬಂಧಿಸಿ ಪರೀಕ್ಷೆ ನಡೆಸಿದ ಬಳಿಕ ಮಹಿಳೆ ವಾಪಸ್ಸಾಗಿದ್ದಾರೆ. ಈ ನಡುವೆ ದ.ಕ. ಜಿಲ್ಲೆಯ ವ್ಯವಸ್ಥೆಯ ಬಗ್ಗೆ ಸುಳ್ಳು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ತುರ್ತು ಚಿಕಿತ್ಸೆಗೆ ಸಹಕಾರಿಯಾಗುವಂತೆ ಕಾಸರಗೋಡು ಜಿಲ್ಲಾ ಆಸ್ಪತ್ರೆಯ ತಾತ್ಕಾಲಿಕ ಕೇಂದ್ರವನ್ನು ತಲಪಾಡಿಯಲ್ಲಿ ಸ್ಥಾಪಿಸಿದ್ದು, ಇಲ್ಲಿ ಅನುಮತಿ ಪಡೆದ ರೋಗಿಗಳನ್ನು ಮಂಗಳೂರಿನ ಜಿಲ್ಲಾಡಳಿತ ನಿರ್ದೇಶಿತ ಖಾಸಗಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಆದರೆ ಬುಧವಾರ ದಾಖಲಾಗಿದ್ದ ರೋಗಿಗಳಲ್ಲಿ ಎರಡು ಪ್ರಕರಣ ವ್ಯವಸ್ಥೆಯನ್ನು ದುರುಪಯೋಗ ಮಾಡುವ ಲಕ್ಷಣ ಕಂಡು ಬಂದಿದ್ದು, ತಲೆ ನೋವಿಗೆಂದು ಬಂದಿದ್ದ ರೋಗಿಯು ಆಸ್ಪತ್ರೆಯ ವೈದ್ಯರಿಂದ ಪ್ರಾಥಮಿಕ ತಪಾಸಣೆ ಪಡೆದ ಬಳಿಕ ಯಾವುದೇ ಚಿಕಿತ್ಸೆಗೆ ಸ್ಪಂದನೆ ನೀಡದೆಆಸ್ಪತ್ರೆಯಲ್ಲಿ ಕೆಲವು ಸಮಯ ಕಳೆದ ಬಳಿಕ ಇನ್ನೊಂದು ರೋಗಿಯನ್ನು ತಂದಿದ್ದ ಕಾಸರಗೋಡು ಆಸ್ಪತ್ರೆಯ ಸರಕಾರಿ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಯ ವೈದ್ಯರಿಗೆ ಮಾಹಿತಿ ನೀಡದೆ ತೆರಳಿದ್ದರಿಂದ ವ್ಯವಸ್ಥೆಯನ್ನು ದುರುಪಯೋಗಪಡಿಸಿದ ರೋಗಿಯ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ದ.ಕ. ಜಿಲ್ಲಾಡಳಿತದ ಷರತ್ತಿನಂತೆ ಕೋವಿಡ್ -19 ಪರೀಕ್ಷೆಯ ಪ್ರಮಾಣ ಪತ್ರ ಅಗತ್ಯವಿದ್ದರೂ, ತಲಪಾಡಿ ಗಡಿಯಲ್ಲಿ ಜಿಲ್ಲಾಸ್ಪತ್ರೆಯಿಂದ ಕೋವಿಡ್ -೧೯ ಪ್ರಮಾಣಪತ್ರ ಅನುಮಾನಕ್ಕೆ ಎಡೆ ಮಾಡಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಆಗಮಿಸಿದ್ದ ರೋಗಿಯೊಬ್ಬರಿಗೆ ಜ್ವರದ ಲಕ್ಷಣ ಕಂಡು ಬಂದ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆಯಿಂದ ನಗರದ ಜಿಲ್ಲಾ ಆಸ್ಪತ್ರೆಗೆ ತಪಾಸಣೆಗೆ ಕಳುಹಿಸಿ ಕೋವಿಡ್ -19 ಚಿಕಿತ್ಸೆಗೆ ಒಳಪಡಿಸಿದ್ದ ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕಳೆದ ಎರಡು ದಿನಗಳಲ್ಲಿ ಆಗಮಿಸಿದ್ದ ರೋಗಿಗಳಲ್ಲಿ ತಲೆ ನೋವಿಗೆ ಸಂಬಂಧಿಸಿದ ರೋಗಿ ಆಸ್ಪತ್ರೆಯಿಂದ ತಲೆಮರೆಸಿಕೊಂಡರೆ, ಇನ್ನೊರ್ವ ರೋಗಿ ಆಸ್ಪತ್ರೆಯಲ್ಲಿ ದಾಖಲಾಗಲು ಒಪ್ಪದೆ ಕೇರಳಕ್ಕೆ ಹಿಂತಿರುಗಿದ್ದು,ಅಲ್ಲಿ ತಪ್ಪು ಸಂದೇಶವನ್ನು ಮಾಧ್ಯಮಗಳಿಗೆ ನೀಡಿದ್ದು, ಈ ರೋಗಿಯ ವಿರುದ್ಧವೂ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಜಿಲ್ಲಾಡಳಿತ ಸೂಚಿಸಿರುವ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಆಸ್ಪತ್ರೆಗೆ ಆಗಮಿಸುವ ಎಲ್ಲಾ ರೋಗಿಗಳಿಗೂ ಚಿಕಿತ್ಸೆ ನೀಲು ಸನ್ನದ್ಧವಾಗಿದ್ದರೂ,
ಕೇರಳದಿಂದ ಕಳುಹಿಸಲ್ಪಡುತ್ತಿರುವ ರೋಗಿಗಳೇ ವ್ಯವಸ್ಥೆಯನ್ನು ದುರುಪಯೋಗಪಡಿಸುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಕುರಿತು ಆಸ್ಪತ್ರೆಗೆ ಜಿಲ್ಲಾಧಿಕಾರಿ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎರಡು ದೂರು ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss