ಹೊಸ ದಿಗಂತ ವರದಿ ಚಿಕ್ಕಬಳ್ಳಾಪುರ:
2021ನೇ ನೂತನ ವರ್ಷಾಚರಣೆಯ ಸಲುವಾಗಿ ಡಿ.31ರ ಸಂಜೆ 06 ಗಂಟೆಯಿಂದ ಜ.1ರ ಬೆಳಗ್ಗೆ 06 ಗಂಟೆಯ ವರೆಗೆ 144 ಸೆಕ್ಷನ್ ಜಾರಿಗೊಳಿಸಲಾಗುವುದೆಂದು ಜಿಲ್ಲಾಡಳಿತ ತಿಳಿಸಿದೆ.
ನೂತನ ವರ್ಷಾಚರಣೆ ಪ್ರಯುಕ್ತ ದೇವಾಲಯಗಳಲ್ಲಿ, ಚರ್ಚಗಳಲ್ಲಿ, ಮತ್ತು ಮಸೀದಿಗಳಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯಲಿರುವುದರಿಂದ ಬಹುಪಾಲು ಮಹಿಳೆಯರು ಬರುವ ಸಾಧ್ಯತೆ ಇರುತ್ತದೆ ಅಲ್ಲದೆ ದೇವಾಲಯಗಳಲ್ಲಿ ಬೆಳ್ಳಿ ಮತ್ತು ಬಂಗಾರ ಒಡವೆಗಳಿಂದ ದೇವರುಗಳಿಗೆ ಅಲಂಕಾರ ಮಾಡಲಿದ್ದು, ರಕ್ಷಣೆಗಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗುತ್ತದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಕೆಲವು ಜನರು ಸಾರ್ವಜನಿಕ ಸ್ಥಳಗಳಲ್ಲಿ ಮಧ್ಯಪಾನ ಮಾಡುವುದು, ಮಧ್ಯಪಾನ ಮಾಡಿ ವಾಹನಗಳನ್ನು ಚಾಲನೆ ಮಾಡುವುದು ಇದರಿಂದ ಸಾರ್ವಜನಿಕರ ಓಡಾಟಕ್ಕೆ ಅಡಚಣೆ ಮಾಡುವುದು, ಮಹಿಳೆಯರು ಮತ್ತು ಮಕ್ಕಳನ್ನು ಕೀಟಲೆ ಮಾಡುವುದು, ಮತ್ತು ರಾತ್ರಿ ಎಲ್ಲಾ ರಸ್ತೆಯಲ್ಲಿ ಓಡಾಡುವುದು, ಸಾರ್ವಜನಿಕರ ಶಾಂತಿಗೆ ಭಂಗ ಬರುವಂತಹ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ರೀತಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವ ಸಾಧ್ಯತೆ ಇರುವುದರಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2021 ನೂತನ ವರ್ಷಾಚರಣೆಯ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮಕ್ಕಾಗಿ ಡಿ31ರ ಸಂಜೆ 06ಗಂಟೆಯಿಂದ ಜ.01ಬೆಳಗ್ಗೆ 06 ಗಂಟೆಯವರೆಗೆ ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ:144 ರೀತ್ಯಾ ನಿಷೇಧಾಜ್ಞೆ ಜಾರಿಯ ಆದೇಶವನ್ನು ನೀಡಲಾಗಿದೆ.