ಚಿಕ್ಕಬಳ್ಳಾಪುರ: ಮಹಿಳೆಯರು ಆರ್ಥಿಕವಾಗಿ ಸಬಲರಾಗಿ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಸ್ತ್ರೀ ಶಕ್ತಿ ಸಂಘಗಳಿಗೆ 5ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಡಿ.ಸಿ.ಸಿ ಬ್ಯಾಂಕ್ ವತಿಯಿಂದ ಹಮ್ಮಿಕೊಂಡಿದ್ದ ಸ್ತ್ರೀ ಶಕ್ತಿ ಸಂಘಗಳಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರು ಪುರುಷರ ಸಮನಾಗಿ ಬೆಳೆಯಲು ಡಿ.ಸಿ.ಸಿ ಬ್ಯಾಂಕ್ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ ಈ ಸಾಲ ಯೋಜನೆ ಆರ್ಥಿಕ ಪ್ರಗತಿಗೆ ಪೂರಕವಾಗಲಿದೆ ಈ ಸಾಲವನ್ನು ಪ್ರತಿಯೊಬ್ಬರೂ ಸದುಪಯೋಗ ಪಡಿಸಿಕೊಳ್ಳಬೇಕು. ಇಂತಹ ಯೋಜನೆಗಳಿಂದ ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಜೀವನ ಉತ್ತಮ ಪಡಿಸಿಕೊಳ್ಳಬೇಕು
ಡಿಸಿಸಿ ಬ್ಯಾಂಕ್ ನಿಂದ ನೀಡುತ್ತಿರುವ ಸಾಲಕ್ಕೆ ಸರ್ಕಾರವೇ ಬಡ್ಡಿ ಭರಿಸುತ್ತದೆ ಎಂದು ತಿಳಿಸಿದರು.
ಮಹಿಳೆಯರು ಸ್ವಾಲಂಬಿ ಜೀವನ ನಡೆಸಲು ಹಾಗೂ ಆರ್ಥಿಕ ಚೈತನ್ಯ ತುಂಬುದಕ್ಕೆ ಶೂನ್ಯ ಬಡ್ಡಿದರ ಸಾಲ ಯೋಜನೆ ಮಹಿಳೆಯರಿಗೆ ಸಹಕಾರಿಯಾಗಲಿದೆ. ಸಾಲವನ್ನು ಯಾವುದೇ ಕಾರಣಕ್ಕೂ ದುಂದು ವೆಚ್ಚ ಅಥವಾ ದುರುಪಯೋಗ ಮಾಡಿಕೊಳ್ಳದೆ ಕುರಿ, ಮೇಕೆ, ಹಸು ಸಾಕಾಣಿಕೆಗೆ ಉಪಯೋಗಿಸಿಕೊಂಡು ನಿಮ್ಮ ಜೀವನವನ್ನು ಆರ್ಥಿಕವಾಗಿ ಸದೃಢರಾಗಿಸಿಕೊಳ್ಳಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ ಸೌಲಭ್ಯ ಯೋಜನೆ ಜಾರಿಗೆ ಬಂದಿದ್ದು, ಇದು ಮಹಿಳೆಯರಿಗೆ ಮೋದಿ ನೀಡಿರುವ ಕೊಡುಗೆ ಅಪಾರ ಎಂದು ತಿಳಿಸಿದರು.
ಕೊರೋನಾ ತಡೆಗಟ್ಟಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಮುಖಗವಸುಗಳನ್ನು ಬಳಸಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ ಕೊರೋನಾವನ್ನು ನಿಗ್ರಹ ಮಾಡಬಹುದು. 60 ವರ್ಷದ ಮೇಲ್ಪಟ್ಟ ಹಿರಿಯರು ಹಾಗೂ ಸಕ್ಕರೆ ಕಾಯಿಲೆ, ಹೃದಯ ಕಾಯಿಲೆ ಇರುವಂತಹ ವ್ಯಕ್ತಿಗಳಿಗೆ ಕೊರೋನಾ ವೈರಸ್ ಸೋಂಕು ತಗಲದಂತೆ ಎಚ್ಚರ ವಹಿಸಬೇಕು ಎಂದರು.
ಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿ ಮಾಡಿ ಬ್ಯಾಂಕ್ ಮತ್ತು ನೀವು ಅಭಿವೃದ್ಧಿಗೆ ಸಹಕಾರ ನೀಡಬೇಕು. 42 ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳಿಗ 1.82 ಲಕ್ಷ ರೂಗಳು ಸಾಲ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ ರಾಮಸ್ವಾಮಿ, ಡಿ.ಸಿ.ಸಿ ಬ್ಯಾಂಕ್ ನಿರ್ದೆಶಕ ದ್ಯಾವಪ್ಪ, ವೇದಸುದರ್ಶನ್, ಕೋಲಾರ ಚಿಕ್ಕಬಳ್ಳಾಪುರ ಡಿ.ಸಿ.ಸಿ ಬ್ಯಾಂಕ್ ವ್ಯವಸ್ಥಾಪಕ ಜ್ಯೋತಿ ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ನಾಗೇಶ್, ಎ.ಪಿ.ಎಂ.ಸಿ ಅಧ್ಯಕ್ಷ ನಾರಾಯಣಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.