ಚಿಕ್ಕಬಳ್ಳಾಪುರ: ರೇಷ್ಮೆ ಸೀರೆ ತೊಡಲು ಎಷ್ಟು ಸುಂದರವೋ ಸೀರೆಗೆ ಅಗತ್ಯವಾದ ರೇಷ್ಮೆಯನ್ನ ನೂಲಾಗಿ, ದಾರವಾಗಿ ಬದಲಾಯಿಸುವ ನೇಕಾರರ ಬದುಕು ಮಾತ್ರ ಅಷ್ಟೇ ಅತಂತ್ರಕ್ಕೆ ಸಿಳುಕಿದೆ.
ಕೊರೋನ ಹೊಡತಕ್ಕೆ ಬಹುತೇಕ ಸಣ್ಣ ರೈತರು ಹಾಗೂ ಹೈನುಗಾರಿಕೆ, ಗುಡಿ ಕೈಗಾರಿಕೆಗಳನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ಸಾವಿರಾರು ಜನರು ನಲುಗಿ ಹೋಗಿದ್ದಾರೆ. ಅವರ ಜೀವನ ಬೀದಿಗೆ ಬಿದ್ದು ಡೋಲಾಯಮಾನ ಪರಿಸ್ಥಿತಿಗೆ ತಲುಪಿದೆ. ಅದರಲ್ಲೂ ರೇಷ್ಮೆ ಹೆಚ್ಚಾಗಿ ಬೆಳೆಯುವ ಚಿಕ್ಕಬಳ್ಳಾಪುರ ಮತ್ತು ರಾಮನಗರದಲ್ಲಿ ಉರಿಕಾರ ಉದ್ದಿಮೆ ತೀರಾ ಸಂಕಷ್ಟಕ್ಕೆ ಸಿಲುಕಿದ್ದಾರೆ
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕು ಒಂದರಲ್ಲೆ ಸುಮಾರು 4 ಸಾವಿರಕ್ಕೂ ಹೆಚ್ಚು ಉರಿಕಾರ ಉದ್ಯಮಗಳು ಇದ್ದು, ಅದನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ಸುಮಾರು 30 ಸಾವಿರ ಉರಿಕಾರರ ಜೀವನ ಬೀದಿಗೆ ಬಂದಿದೆ.
ಐದು ತಿಂಗಳಿಂದ ಕೆಲಸವೂ ಇಲ್ಲದೆ ಸೂಕ್ತ ಸಂಪಾದನೆಯೂ ಇಲ್ಲದೆ ಅತಂತ್ರ ಜೀವನ ನಡೆಸುತ್ತಿದ್ದಾರೆ.
ಕನಿಷ್ಠ ವಾರಕ್ಕೆ 2-3 ಸಾವಿರ ಸಂಪಾದನೆ ಮಾಡಿ ಸ್ವಾಭಿಮಾನದ ಜೀವನ ನಡೆಸುತ್ತಿದ್ದ ಉರಿಕಾರರು ಸಾಲದ ಸುಳಿಗೆ ಸಿಲುಕಿದ್ದಾರೆ. ಸರ್ಕಾರದ ಕಣ್ಣಿಗೆ ಕಾಣದೇ ಇರುವ ಅಸಂಘಟಿತ ಉರಿಕಾರರ ಜೀವನ ದುಸ್ತರವಾಗಿದೆ.
ರೇಷ್ಮೆ ಸೀರೆಯಲ್ಲಿರುವ ಅಂದ ಉರಿಕಾರರ ಬದುಕಲ್ಲಿಲ್ಲ:
ರೇಷ್ಮೆ ಬೆಳೆ, ಗೂಡು ಬೆಳೆಯುವ ರೈತರಿಗೆ ರೇಷ್ಮೆ ಬೆಳೆಗಾರರು, ಮಗ್ಗದಲ್ಲಿ ಕೆಲಸ ಮಾಡುವ ಜನರಿಗೆ ನೇಕಾರರುಹಾಗು ರೇಷ್ಮೆ ಬಿಚ್ಚುವ ಕೆಲಸಗಾರರಿಗೆ ಬಿಚ್ಚಣಿಕೆದಾರರು ಎನ್ನುತ್ತಾರೆ. ಆದರೆ ಇದರಲ್ಲಿ ಮುಖ್ಯ ಪಾತ್ರ ವಹಿಸುವವರು ಉರಿಕಾರರು. ಒಮ್ಮೆ ರೇಷ್ಮೆ ಮಾರುಕಟ್ಟೆಯಿಂದ ಬಿಚ್ಚಾಣಿಕೆ ಕೇಂದ್ರಕ್ಕೆ ಬರುವ ಗೂಡು ದಾರವಾಗಿ ಬದಲಾಗುವುದು ಇದೇ ಉರಿಕಾರ ಉದ್ಯಮಗಳಲ್ಲಿ. ಉರಿಕಾರರಿಂದ ರೇಷ್ಮೆ ನೂಲು, ಬಣ್ಣ-ಬಣ್ಣದ ದಾರವಾಗಿ ಬದಲಾಗುವುದು. ರೇಷ್ಮೆ ಸೀರೆ ತೊಡಲು ಎಷ್ಟು ಸುಂದರವೋ ರೇಷ್ಮೆಯನ್ನ ನೂಲಾಗಿ, ದಾರವಾಗಿ ಬದಲಾಯಿಸುವ ಕಾಯಕ ಕಣ್ಣಿಗೆ ಕಾಣುವುದಿಲ್ಲ. ಈ ಉರಿಕಾರರಿಗೆ ಇದೇ ರೇಷ್ಮೆ ದಾರ ಉರುಳಾಗಿ ಪರಿಣಮಿಸಿದೆ.
ಶಿಡ್ಲಘಟ್ಟದಲ್ಲಿ ಸುಮಾರು 1 ಸಾವಿರ ದೊಡ್ಡ, 1 ಸಾವಿರ ಮಧ್ಯಮ ಮತ್ತು 2 ಸಾವಿರದಷ್ಟು ಸಣ್ಣ-ಸಣ್ಣ ಗುಡಿ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಸುಮಾರು 30 ಸಾವಿರದಷ್ಟು ಜನ ಕೆಲಸ ಮಾಡುತ್ತಿದ್ದಾರೆ. ಕೊರೋನ ಲಾಕ್ಡೌನ್ನಿಂದ ಸೀರೆ ವ್ಯಾಪಾರವಾಗದೆ ಈ ಉರಿಕಾರ ಗುಡಿ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿವೆ.
ಕೊರೋನ ಹೊಡೆತಕ್ಕೆ ಸಿಲುಕಿ ನರಕಯಾತನೆ ಅನುಭವಿಸುತ್ತಿರುವ ರೇಷ್ಮೆ ಉದ್ಯಮದ ಬಗ್ಗೆ ಸರ್ಕಾರ ಅದೆಷ್ಟು ಕಾಳಜಿ ತೋರಿದರೂ ದೇಶಿ ಉತ್ಪನ್ನಗಳು ಮತ್ತು ಅದನ್ನೇ ನಂಬಿ ಬದುಕು ಕಟ್ಟಿಕಂಡಿದ್ದ ಅದೆಷ್ಟೋ ಒಳ ಉದ್ದಿಮೆಗಳು ನಲುಗಿ ಹೋಗಿ, ಸರ್ಕಾರದ ನಿರ್ಲಕ್ಷ್ಯಕ್ಕೂ ಗುರಿಯಾಗಿರುವುದು ದುರಂತವೇ ಸರಿ.