Monday, July 4, 2022

Latest Posts

ಚಿಕ್ಕಬಳ್ಳಾಪುರ| ಮಾಂಸದ ಸಾರಿಗೆ ಉಪ್ಪು ಜಾಸ್ತಿಯಾಗಿದೆ ಎಂದು ಪತ್ನಿಯನ್ನೇ ಕೊಂದ ಪಾಪಿ ಪತಿ

ಚಿಕ್ಕಬಳ್ಳಾಪುರ: ಮಾಂಸದ ಸಾರಿಗೆ ಉಪ್ಪು ಜಾಸ್ತಿಯಾಗಿರುವ ಬಗ್ಗೆ ಗಂಡ, ಹೆಂಡತಿಯ ನಡುವೆ ನಡೆದ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಹೊಸಹುಡ್ಯ (ಉಪ್ಪಕುಂಟೆ) ಗ್ರಾಮದಲ್ಲಿ ನಡೆದಿದೆ.

ಪತ್ನಿ ಮಧುರ(24)ಳನ್ನು ಪತಿ ಚೇಳೂರಿನ ಬಾಲಚಂದ್ರ (28) ಕೊಲೆ ಮಾಡಿದ್ದಾನೆ.

ಖಾಸಗಿ ಬಸ್ ಚಾಲಕನಾಗಿದ್ದ ಬಾಲಚಂದ್ರ ಮಧುರಾಳನ್ನು ಪ್ರೀತಿಸಿ ಮದುವೆಯಾಗಿದ್ದ ಎನ್ನಲಾಗಿದೆ. ಈ ದಂಪತಿಗೆ 11 ತಿಂಗಳ ಮುದ್ದಾದ ಮಗು ಇದೆ. ಹೆರಿಗೆ ನಂತರ ತವರು ಮನೆಗೆ ಬಂದಿದ್ದ ಮಧುರ, ಅಲ್ಲಿಯೇ ಉಳಿದಿದ್ದರು. ಹೀಗಾಗಿ ಬಾಲಚಂದ್ರ ಕೂಡ ಆಗಾಗ ಪತ್ನಿಯ ತವರು ಮನಗೆ ಹೋಗಿ ಬರುತ್ತಿದ್ದನು.

ಭಾನುವಾರ ಮನೆಯಲ್ಲಿ ಮಾಂಸದ ಸಾರು ಮಾಡಿದ್ದು, ಸಾರಿಗೆ ಉಪ್ಪು ಜಾಸ್ತಿ ಅಂತ ತಡರಾತ್ರಿ ಮಧುರ ಜೊತೆ ಬಾಲಚಂದ್ರ ಜಗಳ ಮಾಡಿದ್ದಾನೆ. ಮೊದಲೇ ಮದ್ಯ ವ್ಯಸನಿ ಹಾಗೂ ಪದೇ ಪದೇ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡೋ ಪ್ರವೃತ್ತಿ ಇದ್ದಿದ್ದರಿಂದ, ದಿನಾ ಇದ್ದಿದ್ದೇ ಅಂತ ಮನೆಯವರು ಸುಮ್ಮನಾಗಿದ್ದಾರೆ.

ಆದರೆ ಪಾಪಿ ಬಾಲಚಂದ್ರ ಮಾತ್ರ ತನ್ನ ಪತ್ನಿಯನ್ನು ನೇರವಾಗಿ ರೂಮಿನೊಳಗೆ ಕರೆದೊಯ್ದು ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಆತ್ಮಹತ್ಯೆ ಎಂದು ಬಿಂಬಿಸಲು ಸಹ ಪ್ರಯತ್ನಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಚೇಳೂರು ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಪತಿಯೇ ಪತ್ನಿಯನ್ನು ಕೊಲೆ ಮಾಡಿರುವುದು ತಿಳಿದುಬಂದಿದೆ.

ಪತಿ ಮಹಾಶಯ ಬಾಲಚಂದ್ರನನ್ನು ಬಂಧಿಸಿ ಮುಂದಿನ ಕಾನೂನುಕ್ರಮ ಕೈಗೊಂಡಿದ್ದಾರೆ. ಚೇಳೂರು ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323(ಹಲ್ಲೆ), 342(ಮಹಿಳೆಯ ಆತ್ಮಗೌರವಕ್ಕೆ ಚ್ಯುತಿ) 302(ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss