Thursday, June 30, 2022

Latest Posts

ಚಿಕ್ಕಮಗಳೂರಿನ ಬಹುದಿನಗಳ ಕನಸಾಗಿದ್ದ ಮೆಡಿಕಲ್ ಕಾಲೇಜು, ಆಸ್ಪತ್ರೆ ಉನ್ನತೀಕರಣ ಯೋಜನೆಗೆ ಶಂಕುಸ್ಥಾಪನೆ

ಹೊಸದಿಗಂತ ವರದಿ, ಚಿಕ್ಕಮಗಳೂರು:

ಪಕ್ಷ ವಹಿಸಿದ ಜವಾಬ್ದಾರಿಯಿಂದ ಅಧಿಕಾರದ ಕಾರಣದಿಂದ ಸ್ವಲ್ಪ ಹಿಂದೆ ಇರಬೇಕಾಗಿ ಬಂತಾದರೂ ಚಿಕ್ಕಮಗಳೂರಿನ ಜನರು ನಮ್ಮ ಮೇಲಿಟ್ಟಿರುವ ಭರವಸೆಯನ್ನು ಉಳಿಸಿಕೊಳ್ಳುತ್ತೇವೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.
ಅವರು ಶುಕ್ರವಾರ ನಗರದ ಶುಭಾಶ್ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಕ್ಷೇತ್ರ 1006 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚಿಕ್ಕಮಗಳೂರಿನ ಬಹುದಿನಗಳ ಕನಸಾಗಿದ್ದ ಮೆಡಿಕಲ್ ಕಾಲೇಜು, ಆಸ್ಪತ್ರೆ ಉನ್ನತೀಕರಣ ಯೋಜನೆಗೆ ಇಂದು ಮುಖ್ಯಮಂತ್ರಿಗಳ ಸಹಕಾರದಿಂದ ಶಂಕುಸ್ಥಾಪನೆ ನೆರವೇರಿದೆ ಎಂದರು.
ರಾಜಕೀಯವಾಗಿ ನಮ್ಮನ್ನು ಎಲ್ಲರೂ ಒಪ್ಪದಿರಬಹುದು. ಆದರೆ ಕೆಟ್ಟವನು ಎನ್ನಲು ಸಾಧ್ಯವಿಲ್ಲ. ಅಭಿವೃದ್ಧಿ ಮಾಡುವವನಲ್ಲ ಎಂದು ಹೇಳಲು ಆಗುವುದಿಲ್ಲ. ಈಗಾಗಲೇ ಕಡೂರು, ಚಿಕ್ಕಮಗಳೂರು, ಮೂಡಿಗೆರೆ ರಸ್ತೆ ಅಗಲೀಕರಣ ಕಾಮಗಾರಿ ಭರದಿಂದ ಸಾಗಿದೆ. ಅಟಲ್ ಬಿಹಾರಿ ವಾಜಪೇಯಿ ಬಡಾವಣೆ ಕೈಗೆತ್ತಿಕೊಂಡಾಗ ಕೊಂಕು ಮಾತನಾಡಿದವರೇ ಹೆಚ್ಚು. ಅದನ್ನು ಈಗ ಸಾಕಾರ ಮಾಡಿ ತೋರಿಸಿದ್ದೇವೆ. ಸಂಸದರ ಸಹಕಾರದಿಂದ ಚಿಕ್ಕಮಗಳೂರು, ಬೇಲೂರು, ಹಾಸನ ರೈಲು ಮಾರ್ಗ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದೆ. ರಾಜ್ಯ ಸರ್ಕಾರ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸಿದರೆ ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ. ಅಭಿವೃದ್ಧಿ ನಿಂತ ನೀರಲ್ಲ. ಅದು ಸದಾ ಮುಂದೆ ಹೋಗುತ್ತಿರಬೇಕು. ಇದಕ್ಕಾಗಿ ಎಲ್ಲರೂ ಹೆಗಲಿಗೆ ಹೆಗಲು ಕೊಟ್ಟು ಸಹಕರಿಸಬೇಕು ಎಂದು ವಿನಂತಿಸಿದರು.
ಮೆಡಿಕಲ್ ಕಾಲೇಜು ಸೇರಿದಂತೆ ಜಿಲ್ಲೆಯ 5 ಪ್ರಮುಖ ಯೋಜನೆಗಳಿಗೆ ಮಂಜೂರಾತಿ ಕೊಡಿಸಬೇಕು ಎನ್ನುವುದು ನಮ್ಮ ಪ್ರಯತ್ನವಾಗಿತ್ತು. ಸಚಿವನಾಗಿದ್ದ 13 ತಿಂಗಳ ಅವಧಿಯಲ್ಲಿ ಈ ಐದಕ್ಕೂ ಮಂಜೂರಾತಿ ಕೊಡಿಸಿದ್ದೇವೆ. ಇದು ನಮ್ಮೆಲ್ಲ ಶಾಸಕರ ಸಂಕಲ್ಪ ಮತ್ತು ಸಂಘಟಿತ ಪ್ರಯತ್ನದಿಂದ ಸಾಧ್ಯವಾಗಿದೆ ಎಂದರು.
ತರೀಕೆರೆ, ಕಡೂರು, ಚಿಕ್ಕಮಗಳೂರು ತಾಲೂಕಿನ 197 ಕೆರೆಗಳಿಗೆ ನೀರು ತುಂಬಿಸುವ 1297 ಕೋಟಿ ರೂ.ನ ಯೋಜನೆಗೆ ಈಗಾಗಲೇ ಮಂಜೂರಾತಿ ಸಿಕ್ಕಿದೆ. ಉಳಿದಂತೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಯಾಗಬೇಕಿದೆ. ಮುಂದಿನ ವರ್ಷದ ಆಯವ್ಯಯದಲ್ಲಿ ಇದಕ್ಕೆ ಮಂಜೂರಾತಿ ಕೊಡಿಸುತ್ತೇವೆ ಎಂದು ಭರವಸೆ ನೀಡಿದರು.
ಹಳೇಬೀಡಿನಿಂದ ಬೆಳವಾಡಿ ಮತ್ತು ಕೆಳಭಾಗದ ಕೆರೆಗಳಿಗೆ ನೀರು ತುಂಬಿಸುವ 124 ಕೋಟಿ ರೂ. ಯೋಜನೆಗೆ ಇದೇ 28 ರಂದು ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಮಂಜೂರಾತಿ ಸಿಗಲಿದೆ. ನಾವು ಸೋಮಾರಿಗಳಲ್ಲ. ಪಟ್ಟು ಹಿಡಿದು ಕೆಲಸ ಮಾಡಿದ್ದೇವೆ ಎಂದರು.
ನಮ್ಮ ಶಾಸಕರು, ಸಂಸದರು ಎಂದರೆ ಹೆಮ್ಮೆ ಎನ್ನುವ ರೀತಿ ಕೆಲಸ ಮಾಡುತ್ತೇವೆ. ಮುಂದೆ ಮತ ಕೇಳಲು ಬರುವಾಗ ಅಭಿವೃದ್ಧಿಯ ಸಹಕಾರದ ಚಿತ್ರಣ ಇಟ್ಟುಕೊಂಡೇ ಬರುತ್ತೇವೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss